Advertisement

ಭ್ರಷ್ಟಾಚಾರ ಮಾಡುತ್ತಿರುವವರನ್ನು ಭ್ರಷ್ಟಾರಿಗಳೆಂದರೆ ತಪ್ಪೆ?

05:51 PM Jul 13, 2021 | Team Udayavani |

ಹುಬ್ಬಳ್ಳಿ: ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅದಕ್ಕೆ ಮಾನ, ಮರ್ಯಾದೆ, ನಾಚಿಕೆ ಎಂಬುದಿಲ್ಲ. ಆಡಳಿತದಲ್ಲಿ ಪಾರದರ್ಶಕತೆ ಇಲ್ಲ. ಎಲ್ಲೆಡೆ ಭ್ರಷ್ಟಾಚಾರದ ವಾಸನೆ ಹೊಡೆಯುತ್ತಿದೆ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರಕ್ಕೆ ಕೋವಿಡ್‌ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಲು ಅನುಕೂಲವಾಗಿದೆ. ಅದನ್ನೇ ಶೆಲ್ಟರ್‌ ಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಪ್ರತಿಪಕ್ಷಗಳು ವಿರೋಧ ಮಾಡಲ್ಲ, ಬೀದಿಗಿಳಿದು ಹೋರಾಟ ಮಾಡಲ್ಲ ಎನ್ನುವುದು ಗೊತ್ತಿದೆ. ಹೀಗಾಗಿ ಸರ್ಕಾರ ಆಡಿದ್ದೇ ಆಟವಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷನ ನೇಮಕ ಮಾಡಲು 16 ಕೋಟಿ ರೂ. ಕೇಳಿದ್ದು, ಅದರಲ್ಲಿ ಸಿಎಂ ಯಡಿಯೂರಪ್ಪ ಅವರ ಬೀಗರ ಕೈಯಲ್ಲಿ 9.50 ಕೋಟಿ ರೂ. ಕೊಟ್ಟಿದ್ದಾಗಿ ಖಾಸಗಿ ವಾಹಿನಿಯ ಸ್ಟಿಂಗ್‌ ಆಪರೇಷನ್‌ದಲ್ಲಿ ಓರ್ವ ಹೇಳಿದ್ದಾನೆ, ಅದು ಭ್ರಷ್ಟಾಚಾರವಲ್ಲವೇ. ಭ್ರಷ್ಟಾಚಾರ ಮಾಡುತ್ತಿರುವವರನ್ನು ಭ್ರಷ್ಟಾಚಾರಿಗಳು ಎಂದರೆ ತಪ್ಪೇನಿದೆ ಎಂದರು.

ಬಾದಾಮಿಯಿಂದಲೇ ಸ್ಪರ್ಧಿಸುವೆ: ನನಗೆ ಈಗಾಗಲೇ ಹಲವಾರು ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಆಹ್ವಾನ ಬಂದಿರುವುದು ನಿಜ. ಆದರೆ ನನ್ನನ್ನು ಬಾದಾಮಿ ಕ್ಷೇತ್ರದ ಜನ ಶಾಸಕನನ್ನಾಗಿ ಆರಿಸಿ ಕಳುಹಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಇದೇ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಹಾನಗಲ್‌ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಲಿ. ನಂತರವಷ್ಟೇ ಅಭ್ಯರ್ಥಿಗಳ ಘೋಷಣೆ ಮಾಡುತ್ತೇವೆ ಎಂದರು.

ಜಾತಿ ಸಮೀಕ್ಷೆ ನಡೆದು ಎರಡೂವರೆ ವರ್ಷ ಆಯ್ತು. ಅದರ ವರದಿ ಸಲ್ಲಿಕೆ ಮಾಡಲಾಗಿದೆ. ಈ ಕುರಿತು ಸರ್ಕಾರ ಚರ್ಚೆಗೆ ತಂದು, ಸದನದಲ್ಲಿ ಮಂಡಿಸಿ ಜಾರಿಗೊಳಿಸುವ ಪ್ರಯತ್ನ ಮಾಡುತ್ತಿಲ್ಲ. ಅದನ್ನು ಚರ್ಚೆಗೆ ತಂದರೆ ಸಾಮಾಜಿಕ ನ್ಯಾಯ ಒದಗಿಸಬೇಕಾಗುತ್ತದೆ. ಹೀಗಾಗಿ ಸರ್ಕಾರಕ್ಕೆ ಭಯವಾಗುತ್ತಿದೆ. ಕೇಂದ್ರ ಸರ್ಕಾರ ಕೋವಿಡ್‌ ಲಸಿಕೆ ತಯಾರಿಸಿ ರಾಜ್ಯ ಸರ್ಕಾರಗಳಿಗೆ ಕೊಡುತ್ತಿಲ್ಲ. ಹೀಗಾಗಿ ಜನ ವ್ಯಾಕ್ಸಿನ್‌ ಪಡೆಯಲು ಸಾಲುಗಟ್ಟಿ ನಿಲ್ಲುವಂತಾಗಿದೆ. ಕೋವಿಡ್‌ ನಿಯಂತ್ರಣಕ್ಕೆ ಲಸಿಕೆಯೊಂದೇ ಮದ್ದು. ಕಾಂಗ್ರೆಸ್‌ ಎಂದೂ ಲಸಿಕೆ ಕೊಡಬೇಡಿ, ತೆಗೆದುಕೊಳ್ಳಬೇಡಿ ಎಂದು ಹೇಳಿಲ್ಲ. ಕುಣಿಯಲು ಬಾರದವರಿಗೆ ನೆಲ ಡೊಂಕು ಎಂಬಂತೆ ಸರ್ಕಾರ ಸುಳ್ಳು ನೆಪ ಹೇಳುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next