ವರದಿ: ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಸೋತು, ಬಾದಾಮಿಯಲ್ಲಿ ಗೆದ್ದು ರಾಜಕೀಯ ಭವಿಷ್ಯ ಉಳಿಸಿಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೆ ನಮ್ಮ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂಬ ಒಕ್ಕೊರಲಿನ ಕೂಗು ಬಾದಾಮಿ-ಗುಳೇದಗುಡ್ಡ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರಿಂದ ಕೇಳಿ ಬಂದಿದೆ.
ಹೌದು. ಕಳೆದೆರಡು ದಿನಗಳ ಹಿಂದೆ ನಿಯೋಗದ ಮೂಲಕ ಬೆಂಗಳೂರಿಗೆ ತೆರಳಿದ್ದ ಬಾದಾಮಿ ಮತ್ತು ಗುಳೇದಗುಡ್ಡ ಬ್ಲಾಕ್ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು, ಪ್ರಮುಖರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸಾಹೇಬ್ರೆ ನೀವು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ನಿಲ್ಲಬೇಕು. ನಾವು ಮತ್ತೆ ನಿಮ್ಮನ್ನು ಗೆಲ್ಲಿಸುತ್ತೇವೆ. ನೀವು ಮತ್ತೂಂದು ಬಾರಿ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ಒತ್ತಾಯಿಸಿದ್ದಾರೆ. ಬಾದಾಮಿ ಕ್ಷೇತ್ರಕ್ಕೆ ಮತ್ತೂಮ್ಮೆ ಸಿದ್ದರಾಮಯ್ಯ ಅವರೇ ಸ್ಪರ್ಧಿಸಬೇಕೆಂಬ ಬೇಡಿಕೆಯ ಹಿಂದೆ ಕಾಂಗ್ರೆಸ್ ಹಿರಿಯ ನಾಯಕರ ಲೆಕ್ಕಾಚಾರವೂ ಇದೆ ಎನ್ನಲಾಗಿದೆ.
ಸಿದ್ದರಾಮಯ್ಯ ಈ ಕ್ಷೇತ್ರದ ಶಾಸಕರಾದ ಬಳಿಕ ಎಂದಿಗೂ ಆಗದಂತಹ ಹಲವಾರು ಪ್ರಮುಖ ಕಾರ್ಯಗಳು ಆಗಿವೆ. ಮಾಜಿ ಸಿಎಂ ಪ್ರತಿನಿಧಿಸುವ ಕ್ಷೇತ್ರ ಎಂಬ ಖ್ಯಾತಿ ಬಾದಾಮಿ ಪಡೆದಿದ್ದರಿಂದ ಆಡಳಿತ ಪಕ್ಷದವರೂ, ಸಿದ್ದರಾಮಯ್ಯ ಇಡುವ ಪ್ರಸ್ತಾವನೆಗಳಿಗೆ ತುಟಿ ಪಿಟಕ್ ಎನ್ನದೇ ಅನುಮೋದನೆ ನೀಡುತ್ತ ಬಂದಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಅವರ ಪುತ್ರ ಡಾ|ಯತೀಂದ್ರ ಅವರಿಗೆ ವರುಣಾ ಕ್ಷೇತ್ರದಲ್ಲಿ ಗಟ್ಟಿ ನೆಲೆ ಕಟ್ಟಿ ಕೊಡುವ ಜತೆಗೆ ತಾವು ಉತ್ತರ ಕರ್ನಾಟಕ ಭಾಗದಿಂದ ಸ್ಪರ್ಧಿಸಿ ಈ ಭಾಗದಿಂದ ಪಕ್ಷದ ಹೆಚ್ಚಿನ ಶಾಸಕರನ್ನು ಆಯ್ಕೆ ಮಾಡಿಕೊಂಡು, ಮತ್ತೂಂದು ಬಾರಿ ಸಿಎಂ ಹುದ್ದೆಗೇರಬೇಕೆಂಬುದು ಅವರ ಲೆಕ್ಕಾಚಾರ. ಇದಕ್ಕೆ ಕ್ಷೇತ್ರದ ಪ್ರಮುಖರು ಕೈ ಜೋಡಿಸಿದ್ದಾರೆ.
ಇನ್ನೊಂದು ಪ್ರಮುಖ ವಿಷಯವೆಂದರೆ ಬಾದಾಮಿ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬಂದ ಬಳಿಕ ಮೇಲ್ನೋಟಕ್ಕೆ ಒಗ್ಗಟ್ಟು ಪ್ರದರ್ಶನ ಗೊಳ್ಳುತ್ತಿದೆ. ಪಕ್ಷದೊಳಗೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ, ಸಿದ್ದರಾಮಯ್ಯ ಅವರಿಗಾಗಿ ಅವೆಲ್ಲ ಬಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಬೇರೆ ಕ್ಷೇತ್ರಕ್ಕೆ ಹೋದರೆ, ಇಲ್ಲಿ ಟಿಕೆಟ್ ಗಾಗಿಯೇ ದೊಡ್ಡ ಪೈಪೋಟಿ ನಡೆಯುತ್ತದೆ. ಟಿಕೆಟ್ ಸಿಗದವರು, ಪಕ್ಷದೊಳಗಿದ್ದರೂ ಒಳ ರಾಜಕಾರಣ ಮೂಲಕ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರೇ ಈ ಕ್ಷೇತ್ರದಿಂದ ಸ್ಪರ್ಧಿಸಿದರೆ, ಬಾದಾಮಿ ಕ್ಷೇತ್ರದ ಪ್ರತಿಯೊಬ್ಬರೂ ಅವರ ಗೆಲುವಿಗಾಗಿ ದುಡಿಯುತ್ತಾರೆಂದು ಪಕ್ಷದ ಮೂಲಗಳು ತಿಳಿಸಿವೆ.
ಅಭಿವೃದ್ಧಿಗೆ ವೇಗ: ಸಿದ್ದರಾಮಯ್ಯ, ಕ್ಷೇತ್ರದ ಜನರ ಋಣ ತೀರಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಸ್ವಾಭಾವಿಕವಾಗಿ ಮಾಜಿ ಸಿಎಂ ಸ್ಪರ್ಧಿಸುವ ಕ್ಷೇತ್ರ ಇದಾಗಿದ್ದರಿಂದ ಇಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಹಾಗೂ ಕ್ಷೇತ್ರದ ಜನರ ನಿರೀಕ್ಷೆಗಳೂ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಜನರ ನಿರೀಕ್ಷೆ ಹುಸಿಯಾಗದಂತೆ ಕ್ಷೇತ್ರದಲ್ಲಿ ಈವರೆಗೆ ಸುಮಾರು 2600 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾರ್ಯಗಳು, ಏತ ನೀರಾವರಿ ಯೋಜನೆಗಳು, ಬಾದಾಮಿ, ಕೆರೂರ ಹಾಗೂ 18 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ, ಕ್ಷೇತ್ರಾದ್ಯಂತ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ ಹೀಗೆ ಹಲವು ಕಾರ್ಯ ನಡೆದಿವೆ. ಸಿದ್ದರಾಮಯ್ಯ ಅವರು ನಮ್ಮ ಕ್ಷೇತ್ರದಿಂದ ಆಯ್ಕೆಯಾಗಿದ್ದು, ನಮಗೆಲ್ಲ ಅನುಕೂಲವೇ ಆಗಿದೆ. ಅವರು ತಿಂಗಳಿಗೊಮ್ಮೆ ಕ್ಷೇತ್ರಕ್ಕೆ ಬಂದರೂ ಅನುದಾನ ತಂದು ನಿರಂತರ ಕೆಲಸ ಮಾಡಿಸುತ್ತಿದ್ದಾರೆ ಎಂಬುದು ಕಾಂಗ್ರೆಸ್ ಪಕ್ಷದ ಪ್ರಮುಖರ ಪ್ರತಿಕ್ರಿಯೆ.