Advertisement

ಸ್ಮಾರ್ಟ್‌ಸಿಟಿ ಕಾಮಗಾರಿ ತ್ವರಿತಕ್ಕೆ ಸೂಚನೆ

03:25 PM Sep 29, 2021 | Team Udayavani |

ಹುಬ್ಬಳಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಂಗಳವಾರ ವೀಕ್ಷಣೆ ಮಾಡಿದರು.

Advertisement

ವಿಳಂಬದಿಂದಾಗಿ ಜನರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಬೇಸರ ವ್ಯಕ್ತಪಡಿಸುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಆದಷ್ಟು ಬೇಗೆ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಉಣಕಲ್ಲ ಕೆರೆ ಅಭಿವೃದ್ಧಿ, ಉಣಕಲ್ಲ ಸಂತೆ ಮಾರುಕಟ್ಟೆ ಕಾಮಗಾರಿ ವೀಕ್ಷಿಸಿದ ಶೆಟ್ಟರ, ಮಾರುಕಟ್ಟೆ ಸೌಂದರ್ಯ ಹೆಚ್ಚಾಗಿದೆ. ಆದರೆ ಮಳೆ, ಗಾಳಿಯಂತಹ ಸಂದರ್ಭದಲ್ಲಿ ಸಂತೆ ಮಾರುಕಟ್ಟೆ ಕಷ್ಟವಾಗುತ್ತಿದೆ. ಮೇಲೆ ಗಾಜು ಅಳವಡಿಸುವ ಕುರಿತು ಅಧಿಕಾರಿಗಳಿಗೆ ಸೂಚಿಸಿದರು.

ವಾರಕ್ಕೊಮ್ಮೆ ಸಂತೆ ನಡೆಯುತ್ತಿದ್ದು, ಉಳಿದ ಸಂದರ್ಭದಲ್ಲಿ ಈ ಸ್ಥಳವನ್ನು ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಇನ್ನಿತರೆ ಚಟುವಟಿಕೆಗಳಿಗೆ ಪೂರಕವಾಗಿ ನಿರ್ಮಿಸಲಾಗಿದೆ ಎಂದು ಎಂಡಿ ಶಕೀಲ್‌ ಅಹ್ಮದ್‌ ಉತ್ತರಿಸಿದರು.

ಅಕ್ಕಪಕ್ಕದಲ್ಲಿ ಚರಂಡಿಯನ್ನು ಮುಂದಿನ ನಾಲಾಗೆ ಜೋಡಿಸುವ ಕುರಿತು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ತೋಳನಕೆರೆ ಅಭಿವೃದ್ಧಿ ಕಾಮಗಾರಿ ಸಾಕಷ್ಟು ವಿಳಂಬವಾಗಿದ್ದು, ನಿಧಾನಗತಿಯಿಂದಾಗಿ ಜನರು ಬೇಸರ ವ್ಯಕ್ತಪಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ತಿಂಗಳಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡು ಉದ್ಘಾಟನೆಯಾಗಬೇಕು. ರಾಮಲಿಂಗೇಶ್ವರ ನಗರದಿಂದ ಬರುವ ಒಳಚರಂಡಿ ನೀರು ಕೆರೆಗೆ ಸೇರದಂತೆ ಕ್ರಮ ವಹಿಸಬೇಕು ಎಂದರು. ನಂತರ ಇಂದಿರಾ ಗಾಜಿನಮನೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ವೀಕ್ಷಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಆರಂಭದಲ್ಲಿ ಕಾಮಗಾರಿಗಳು ವಿಳಂಬವಾದ ಪರಿಣಾಮ ಇನ್ನೂ ಪೂರ್ಣಗೊಂಡಿಲ್ಲ. ಬಹುತೇಕ ಕೆಲಗಳು ಮುಗಿಯುವ ಹಂತಕ್ಕೆ ಬಂದಿವೆ. ಕೆಲ ಕಾಮಗಾರಿಗಳು ಖುಷಿ ನೀಡಿವೆ. ಆಗಿರುವ ನ್ಯೂನತೆಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎರಡನೇ ಹಂತದಲ್ಲಿ ಉಣಕಲ್ಲ ಕೆರೆ ಸುತ್ತಲೂ ವಾಕಿಂಗ್‌ ಪಾಥ್‌ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಆಗಲಿವೆ. ನಡುವಿನ ವಿವೇಕಾನಂದ ಪ್ರತಿಮೆ ಬದಲಿಸಿ ಇನ್ನೂ ಎತ್ತರದ ಪ್ರತಿಮೆ ಸ್ಥಾಪನೆಗೆ ಚಿಂತನೆ ಮಾಡಲಾಗಿದೆ. ಪ್ರಸಿಡೆಂಟ್‌ ಹೋಟೆಲ್‌ ಮುಂಭಾಗದಲ್ಲಿ ಮಳೆ ನೀರು ಸಂಗ್ರಹಕ್ಕೆ ಪರಿಹಾರ ನೀಡಲಾಗಿದೆ. ಸಿಆರ್‌ಎಫ್‌ ಬಿಲ್‌ ಬಾಕಿ ಉಳಿದಿದ್ದ ಕಾರಣ ಸಚಿವ ಸಿ.ಸಿ.ಪಾಟೀಲರೊಂದಿಗೆ ಮಾತನಾಡಿ ಶೇ.50 ಬಿಲ್‌ ಪಾವತಿ ಮಾಡಲಾಗಿದೆ. ಹೀಗಾಗಿ ಕಾಮಗಾರಿ ಆರಂಭವಾಗಿವೆ ಎಂದರು.

ಸ್ಮಾರ್ಟ್‌ಸಿಟಿ ಎಂಡಿ ಶಕೀಲ್‌ ಅಹ್ಮದ್‌, ಡಿಜಿಎಂ ಬಸವರಾಜ, ಪಾಲಿಕೆ ನೂತನ ಸದಸ್ಯರಾದ ರಾಜಣ್ಣ ಕೊರವಿ, ಉಮೇಶ ಕೌಜಗೇರಿ, ತಿಪ್ಪಣ್ಣ ಮಜ್ಜಗಿ, ರಾಮಣ್ಣ ಬಡಿಗೇರ, ಪಾಲಿಕೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next