ಭೋಪಾಲ್: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯ ಪ್ರದೇಶದ ವಿದಿಶಾದಲ್ಲಿ ಗುರುವಾರ (ಜ.26 ರಂದು) ಸಂಜೆ ನಡೆದಿದೆ.
ಬಿಜೆಪಿಯ ಮಾಜಿ ಕಾರ್ಪೋರ್ಟರ್ ಸಂಜೀವ್ ಮಿಶ್ರಾ, 45, ಅವರ ಪತ್ನಿ ನೀಲಂ (42), ಅವರ ಮಕ್ಕಳಾದ ಅನ್ಮೋಲ್ (13), ಸಾರ್ಥಕ್ (7) ಮೃತ ದುರ್ಧೈವಿಗಳು.
ಸಂಜೀವ್ ಮಿಶ್ರಾ ಅವರ ಇಬ್ಬರು ಮಕ್ಕಳಲ್ಲಿ ಅನ್ಮೋಲ್ ಕಳೆದ 5 ವರ್ಷದಿಂದ ಅನುವಂಶಿಯ ಕಾಯಿಲೆಯಿಂದ ಬಳಲುತ್ತಿದ್ದರು. ತಂದೆಯಾಗಿ ತನ್ನೆಲ್ಲಾ ಪ್ರಯತ್ನ ಪಟ್ಟು ಚಿಕಿತ್ಸೆ ಕೊಡಿಸಿದರೂ, ಕಾಯಿಲೆ ಇದೆ ಎನ್ನುವ ಮಾನಸಿಕ ವೇದನೆ ಸಂಜಯ್ ಅವರಲ್ಲಿತ್ತು. ಇದೇ ಕಾರಣದಿಂದ ಗುರುವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ “ದೇವರು ಶತ್ರುವಿನ ಮಕ್ಕಳನ್ನೂ ಈ ಕಾಯಿಲೆಯಿಂದ ಪಾರು ಮಾಡಲಿ, ನಾನು ಇನ್ನು ಮಗುವನ್ನು ಉಳಿಸಲು ಆಗುವುದಿಲ್ಲ. ನಾನು ಜೀವಂತವಾಗಿ ಇರಲು ಸಾಧ್ಯವಿಲ್ಲ” ಎಂದು ಸಂಜೀವ್ ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ ಕಂಡು ಕೆಲ ಸ್ನೇಹಿತರು ಸಂಜೀವ್ ಅವರ ಮನೆಗೆ ಬಂದಿದ್ದಾರೆ. ಬಾಗಿಲು ಒಡೆದು ನೋಡುವಾಗ ನಾಲ್ವರು ಅಸ್ವಸ್ಥರಾಗಿ ಬಿದ್ದಿದ್ದರು. ನಾಲ್ವರನ್ನೂ ಆಸ್ಪತ್ರೆಗೆ ಕರೆ ತಂದರೂ, ಅವರು ಅಲ್ಲಿ ಮೃತ ಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಪೋಸ್ಟ್ ಮಾರ್ಟಂ ಬಳಿಕ ನಾಲ್ವರೂ ಸೆಲ್ಫೋಸ್ ಮಾತ್ರೆಗಳನ್ನು ಸೇವಿಸಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.