Advertisement

ಸಂಸ್ಕೃತಿ, ಸಂಸ್ಕಾರ‌ದಿಂದ ಜೀವನ ವಿಕಾಸ

09:21 AM Jul 30, 2019 | Suhan S |

ದಾವಣಗೆರೆ: ಅಂತರಂಗ-ಬಹಿರಂಗ ಶುದ್ಧಿಗೊಂಡಾಗ ಬದುಕಿನಲ್ಲಿ ಶಾಂತಿ ಕಾಣಲು ಸಾಧ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ| ವೀರಸೋಮೇಶ್ವರ ಜಗದ್ಗುರುಗಳು ಹೇಳಿದ್ದಾರೆ.

Advertisement

ಸೋಮವಾರ, ನಗರದ ಶ್ರೀಮದ್‌ ಅಭಿನವ ರೇಣುಕ ಮಂದಿರದಲ್ಲಿ 24ನೇ ವರ್ಷದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಸಂಗಮ 3ನೇ ದಿನ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಸತ್ಯ ಶುದ್ಧವಾದ ಸಂಸ್ಕಾರ ಮತ್ತು ಸಂಸ್ಕೃತಿ ಅಳವಡಿಸಿಕೊಂಡಾಗ ಜೀವನ ವಿಕಾಸಗೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಪ್ರತಿಪಾದಿಸಿದರು.

ಪ್ರತಿಯೊಬ್ಬ ಮನುಷ್ಯನಿಗೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಪುರುಷಾರ್ಥಗಳ ಅವಶ್ಯಕತೆಯಿದೆ. ಧರ್ಮದ ತಳಹದಿಯ ಮೇಲೆ ಅವೆಲ್ಲವುಗಳನ್ನು ಪಡೆಯಬೇಕಿದೆ. ಒಳ್ಳೆಯದಕ್ಕೂ ಕೆಟ್ಟದ್ದಕ್ಕೂ ಮನುಷ್ಯನ ಮನಸ್ಸೇ ಕಾರಣ. ಮನುಷ್ಯ ಬಾನೆತ್ತರದ ಸಾಧನೆ ಮಾಡಿದರೂ ಕಾಲು ನೆಲದಲ್ಲಿಯೇ ಇರಬೇಕಿದೆ ಎಂದು ಹೇಳಿದರು.

ಜಾಗತೀಕರಣ, ಉದಾರೀಕರಣದ ಜೊತೆಗೆ ಮಾನವೀಯತೆಯ ಅಂತ:ಕರಣ ಬೆಳೆಯುವ ಅವಶ್ಯಕತೆ ಇದೆ. ಶಾಂತಿ ಒಂದಿದ್ದರೆ ಸಕಲ ಸಿರಿ ಸಂಪತ್ತು ಇದ್ದಂತೆ. ಶಾಂತಿಗೆ ಸಮನಾದ ಸಂಪತ್ತು ಇನ್ನೊಂದಿಲ್ಲ. ಆಚಾರ್ಯರು ಮತ್ತು ಶರಣರು ಶಾಂತಿ ಸಮೃದ್ಧಿಯ ಬದುಕಿನ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಬಸವಣ್ಣನವರು ಎರಡು ಕಣ್ಣು ಇದ್ದ ಹಾಗೆ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಆಚಾರ್ಯರು ಮತ್ತು ಶರಣರ ಧಾರ್ಮಿಕ, ಸಾಮಾಜಿಕ ಚಿಂತನೆಗಳು ನಮ್ಮೆಲ್ಲರಿಗೂ ದಾರಿ ದೀಪ ಎಂದರು.

Advertisement

ಇದೇ ಸಂದರ್ಭದಲ್ಲಿ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ, ಆಶೀರ್ವದಿಸಿದರು.

ಕಂದನಕೋವಿ ಶಿವಕುಮಾರ್‌, ಇತರರು ಅತಿಥಿಗಳಾಗಿದ್ದರು. ಹಲವು ಗಣ್ಯರು ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆಯಿತ್ತು ಶುಭ ಹಾರೈಸಿದರು. ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಉಪಸ್ಥಿತರಿದ್ದರು.

ಗದುಗಿನ ಗಾನಭೂಷಣ ವೀರೇಶ ಕಿತ್ತೂರ ಅವರಿಂದ ಭಕ್ತಿಗೀತೆ, ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಜರುಗಿತು. ಜಿ.ಕೆ. ವಿಜಯಕುಮಾರ ಸ್ವಾಗತಿಸಿದರು. ಐನಹಳ್ಳಿ ವಸಂತಕುಮಾರಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next