Advertisement

ವಿವಾದದ ಕಿಡಿ ಹೊತ್ತಿಸಿದ ಇವಿಎಂ ಸಾಗಾಟ ವಿಡಿಯೋ

02:24 AM May 22, 2019 | sudhir |

ಹೊಸದಿಲ್ಲಿ: ಲೋಕಸಭೆ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇವಿಎಂ ಗಳ ತಿರುಚುವಿಕೆಯ ಕೂಗು ಮತ್ತೂಮ್ಮೆ ಪ್ರತಿಧ್ವನಿಸಿದೆ. ಸೋಮವಾರ ರಾತ್ರಿಯಿಂದೀಚೆಗೆ ಅನಧಿಕೃತ ಸಂಗ್ರಹ ಕೊಠಡಿಗಳಿಂದ ವಿದ್ಯುನ್ಮಾನ ಮತಯಂತ್ರಗಳನ್ನು ಖಾಸಗಿ ವಾಹನಗಳಲ್ಲಿ ಸಾಗಾಟ ಮಾಡುತ್ತಿರುವಂತಹ ವಿಡಿಯೋ ಗಳು ಏಕಾಏಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ ತೊಡಗಿವೆ. ಈ ವಿಡಿಯೋಗಳು ಹರಿದಾಡುತ್ತಲೇ, ಜನಾ ದೇಶವನ್ನೇ ತಿರುಚಲಾಗುತ್ತಿದೆಯೇ ಎಂಬ ಸಂಶಯವನ್ನು ಹಲವು ರಾಜಕೀಯ ಪಕ್ಷಗಳು ಹೊರಹಾಕಿವೆ. ಆದರೆ, ಇದು ಆಧಾರರಹಿತ ಆರೋಪವಾಗಿದ್ದು, ಇವಿಎಂಗಳು ಸುರಕ್ಷಿತ ವಾಗಿವೆ ಎಂದು ಚುನಾವಣ ಆಯೋಗ ಸ್ಪಷ್ಟನೆ ನೀಡಿದೆ.

Advertisement

ಇವಿಎಂ ತಿರುಚುವಿಕೆಯಂಥ ಆರೋಪಗಳನ್ನು ಹಿಂದಿ ನಿಂದಲೂ ವಿಪಕ್ಷಗಳು ಮಾಡುತ್ತಲೇ ಬಂದಿವೆ. ಆದರೆ, ಮಂಗಳವಾರ ಉತ್ತರಪ್ರದೇಶ, ಬಿಹಾರ, ಹರ್ಯಾಣ, ಪಂಜಾಬ್‌ನಂಥ ರಾಜ್ಯಗಳಲ್ಲಿ ಸ್ಟ್ರಾಂಗ್‌ರೂಂಗಳಿಂದ ಇವಿಎಂಗಳನ್ನು ಬೇರೆಡೆಗೆ ಸಾಗಾಟ ಮಾಡುತ್ತಿರುವ ಹಾಗೂ ಯಾವುದೋ ದಾಸ್ತಾನು ಕೊಠಡಿಯಲ್ಲಿದ್ದ ಇವಿಎಂಗಳನ್ನು ಎಣಿಕಾ ಕೇಂದ್ರಕ್ಕೆ ಸಾಗಾಟ ಮಾಡುತ್ತಿರುವಂಥ ವಿಡಿಯೋ ಗಳು ಬಹಿರಂಗವಾಗಿವೆ. ಈ ಪೈಕಿ ಕೆಲವು ಇವಿಎಂಗಳು ಮತ್ತು ವಿವಿಪ್ಯಾಟ್‌ಗಳು ಸ್ಥಳೀಯ ಅಂಗಡಿ ಗಳಲ್ಲಿ, ಕೆಲವನ್ನು ಖಾಸಗಿ ವಾಹನಗಳಲ್ಲಿ ಇಟ್ಟಿದ್ದು ಕೂಡ ವಿಡಿಯೋದಲ್ಲಿ ಕಂಡುಬಂದಿದೆ.

ಉತ್ತರಪ್ರದೇಶದಲ್ಲಿ ಈ ಕುರಿತು ಬಿಎಸ್‌ಪಿ ನಾಯಕರೊಬ್ಬರು ಪ್ರಶ್ನೆ ಮಾಡುತ್ತಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ. ಮೀಸಲು ಇವಿಎಂಗಳನ್ನು ದುರ್ಬಳಕೆ ಮಾಡಿಕೊಳ್ಳ ಲಾಗುತ್ತಿದೆ ಎಂದು ಮಿರ್ಜಾಪುರದ ಕಾಂಗ್ರೆಸ್‌ ಘಟಕ ಆರೋಪ ಮಾಡಿದೆ. ಘಟನೆ ಖಂಡಿಸಿ ಉ.ಪ್ರದೇಶದ ಹಲ ವೆಡೆ ವಿವಿಧ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಇದೇ ವೇಳೆ, ಇವುಗಳೆಲ್ಲ ಮೀಸಲು ಇವಿಎಂ ಗಳಾಗಿವೆ ಎಂದು ಅಧಿಕಾರಿಗಳು ಸ್ಪಷ್ಪನೆ ನೀಡಿದ್ದಾರೆ. ಆದರೆ, ಈ ಇವಿಎಂಗಳ ಸಾಗಾಟದ ಬಗ್ಗೆ ಅಭ್ಯರ್ಥಿಗಳಿಗೇಕೆ ಮಾಹಿತಿ ನೀಡಿಲ್ಲ ಹಾಗೂ ಖಾಸಗಿ ವಾಹನಗಳಲ್ಲಿ ಏಕೆ ಸಾಗಾಟ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಮುಂಬಯಿ ಕಾಂಗ್ರೆಸ್‌ ಅಧ್ಯಕ್ಷ ಮಿಲಿಂದ್‌ ದೇವೊರಾ ಅವರೂ ಇವಿಎಂಗಳ ಭದ್ರತೆ ಕುರಿತು ಆತಂಕ ವ್ಯಕ್ತಪಡಿಸಿದ್ದು, ಅವುಗಳಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಕೋರಿ ಮಹಾರಾಷ್ಟ್ರ ಮುಖ್ಯ ಚುನಾವಣ ಅಧಿಕಾರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಸ್ಟ್ರಾಂಗ್‌ ರೂಂಗಳ ಸುತ್ತಲೂ ಕೆಲವು ಅನುಮಾನಾಸ್ಪದ ಚಲನವಲನಗಳು ನಡೆಯುತ್ತಿವೆ ಎಂದೂ ಆರೋಪಿಸಿದ್ದಾರೆ.

ಇವಿಎಂಗಳು ಸುರಕ್ಷಿತ: ಆಯೋಗ
ಉತ್ತರದ ರಾಜ್ಯಗಳಲ್ಲಿ ಕೇಳಿಬಂದಿರುವ ಇವಿಎಂ ತಿರುಚುವಿಕೆ ಮತ್ತು ಸಾಗಾಟದ ಆರೋಪಗಳನ್ನು ಚುನಾವಣ ಆಯೋಗ ಅಲ್ಲಗಳೆದಿದೆ. ಎಲ್ಲ ಯಂತ್ರಗಳೂ ಸುರಕ್ಷಿತ ಹಾಗೂ ಭದ್ರವಾಗಿವೆ. ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಸಮ್ಮುಖದಲ್ಲೇ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳಿಗೆ ಸೀಲ್‌ ಹಾಕಲಾಗಿದೆ. ಇದರ ವಿಡಿಯೋ ಚಿತ್ರೀಕರಣವೂ ನಡೆದಿದೆ. ಸ್ಟ್ರಾಂಗ್‌ ರೂಂಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ. ಸಿಪಿಎಎಫ್ ಭದ್ರತೆಯೂ ಇದೆ. ಪ್ರತಿ ಅಭ್ಯರ್ಥಿಯ ಒಬ್ಬ ಪ್ರತಿನಿಧಿಗೆ ದಿನದ 24 ಗಂಟೆಯೂ ಸ್ಟ್ರಾಂಗ್‌ ರೂಂ ಕಡೆ ಗಮನ ಹರಿಸುವ ಅವಕಾಶವನ್ನೂ ನೀಡಲಾಗಿದೆ. ಹೀಗಾಗಿ, ಈಗ ಕೇಳಿಬರುತ್ತಿರುವ ಆರೋಪಗಳೆಲ್ಲವೂ ಆಧಾರರಹಿತ ಎಂದು ಆಯೋಗವು ಸ್ಪಷ್ಟನೆ ನೀಡಿದೆ.

Advertisement

ಸೋಲನ್ನು ಒಪ್ಪಿಕೊಳ್ಳಿ: ಬಿಜೆಪಿ
ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಯೆತ್ತಿರುವ ವಿಪಕ್ಷಗಳ ವಿರುದ್ಧ ಬಿಜೆಪಿ ಕಿಡಿಕಾರಿದೆ. ದೇಶದ ಜನರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತೆ ಆಡಳಿತದ ಚುಕ್ಕಾಣಿ ನೀಡಿದರೆ, ಅದನ್ನು ಘನತೆಯಿಂದ ಸ್ವೀಕರಿಸಿ ಸೋಲೊಪ್ಪಿಕೊಳ್ಳಿ ಎಂದೂ ಬಿಜೆಪಿ ಸಲಹೆ ನೀಡಿದೆ. ಇವಿಎಂ ತಿರುಚುವಿಕೆ ಆರೋಪ ಹಿನ್ನೆಲೆ ಮಂಗಳವಾರ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, “ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಅಮರೀಂದರ್‌ ಸಿಂಗ್‌ ಗೆಲುವು ಸಾಧಿಸಿ, ಅಧಿಕಾರಕ್ಕೆ ಬಂದಾಗ ಇವಿಎಂಗಳೆಲ್ಲ ಸರಿಯಾಗಿರುತ್ತದೆ. ಆದರೆ, ಮೋದಿ ಮತ್ತೆ ಅಧಿಕಾರಕ್ಕೇರುತ್ತಾರೆ ಎನ್ನುವಾಗ ಮಾತ್ರ ಇವರಿಗೆಲ್ಲ ಇವಿಎಂ ಮೇಲಿನ ನಂಬಿಕೆ ಕಳೆದುಹೋಗುತ್ತದೆೆ’ ಎಂದಿದ್ದಾರೆ.

ಇವಿಎಂ: ಪ್ರಣವ್‌ ಕಳವಳ
ಇವಿಎಂ ಕುರಿತ ವಿವಾದಕ್ಕೆ ಸಂಬಂಧಿಸಿ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಆರೋಪ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಜನಾದೇಶವನ್ನು ತಿರುಚುವಂಥ ಘಟನೆಗಳು ನಡೆಯುತ್ತಿವೆ ಎಂಬ ಆರೋಪವು ಅತ್ಯಂತ ಕಳವಳಕಾರಿಯಾಗಿದ್ದು, ಚುನಾವಣ ಆಯೋಗಕ್ಕೆ ಸಾಂಸ್ಥಿಕ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಇದೆ. ಎಲ್ಲ ರೀತಿ ಅನುಮಾನ ಗಳಿಗೂ ಕೊನೆ ಹಾಡುವ ಕೆಲಸವನ್ನು ಆಯೋಗ ಮಾಡಬೇಕು. ಭಾರತೀಯ ಪ್ರಜಾತಂತ್ರದ ಮೂಲ ಆಶಯವನ್ನೇ ಪ್ರಶ್ನಿಸುವಂಥ ಪರಿಸ್ಥಿತಿಗೆ ಆಯೋಗ ಅವಕಾಶ ಕಲ್ಪಿಸ ಬಾರದು. ಎಲ್ಲ ಇವಿಎಂಗಳ ಸುರಕ್ಷತೆ ಚುನಾವಣ ಆಯೋಗದ ಹೊಣೆಗಾರಿಕೆಯಾಗಿದೆ ಎಂದಿದ್ದಾರೆ ಪ್ರಣವ್‌.

ಬಿಹಾರದಲ್ಲಿ ನೆತ್ತರ ಹೊಳೆ!
ಇವಿಎಂ ಕುರಿತ ವಿಡಿಯೋಗಳು ಹರಿದಾಡಿದ ಬೆನ್ನಲ್ಲೆ ಬಿಹಾರದ ವಿಪಕ್ಷಗಳ ಮೈತ್ರಿಯ ನಾಯಕರು ಸುದ್ದಿಗೋಷ್ಠಿ ನಡೆಸಿದ್ದಾರೆ. ಆರ್‌ಎಲ್‌ಎಸ್‌ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹಾ, ಆರ್‌ಜೆಡಿ ರಾಜ್ಯಾಧ್ಯಕ್ಷ ರಾಮಚಂದ್ರ ಪರ್ವೆ, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಮದನ್‌ ಮೋಹನ್‌ ಝಾ ಮತ್ತಿತರರು ಮಾತನಾಡಿ, “ಹಿಂದೆಲ್ಲ ನಾವು ಮತಗಟ್ಟೆ ಲೂಟಿಯಂಥ ಪ್ರಕರಣಗಳನ್ನು ಕೇಳಿದ್ದೆವು. ಈಗ ಫ‌ಲಿತಾಂಶವನ್ನೇ ಲೂಟಿ ಮಾಡುವ ಯತ್ನ ನಡೆಯುತ್ತಿದೆ. ಇವಿಎಂಗಳನ್ನು ತಿರುಚುವಂಥ ದುಸ್ಸಾಹಸಕ್ಕೆ ಯಾರಾದರೂ ಕೈಹಾಕಿದರೆ, ಬಿಹಾರದ ಬೀದಿ ಬೀದಿಗಳಲ್ಲಿ ನೆತ್ತರ ಹೊಳೆ ಹರಿಯಲಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next