ಪುತ್ತೂರು: ಉದ್ಯೋಗ ನಿಮಿತ್ತ ಜನರು ಹುಟ್ಟೂರನ್ನು ತೊರೆದು ಎಲ್ಲೆಲ್ಲೋ ನೆಲೆಸಿರುತ್ತಾರೆ. ಮತದಾನ ದಿನ ಬಂತೆಂದರೆ ಊರಿಗೆ ಬರುವ ಅನಿವಾರ್ಯತೆ ಎಲ್ಲರದು. ಪ್ರಸ್ತುತ ತಂತ್ರಜ್ಞಾನ ಎಷ್ಟೋ ಮುಂದುವರಿದಿದೆ. ಹಾಗಿರುವಾಗ ಮತದಾರ ಎಲ್ಲಿ ಇದ್ದಾನೋ ಅಲ್ಲೇ ಇದ್ದುಕೊಂಡು ತನ್ನ ಕ್ಷೇತ್ರದ ತನ್ನ ನೆಚ್ಚಿನ ಅಭ್ಯರ್ಥಿಗೆ ಮತದಾನ ಮಾಡುವಂತಿದ್ದರೆ ಚೆನ್ನಲ್ಲವೆ? ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ನಲ್ಲಿ ಇಂತಹ ತಂತ್ರಜ್ಞಾನ ಸಾಧ್ಯವಿಲ್ಲವೇ? ಸಣ್ಣಪುಟ್ಟ ಮಾರ್ಪಾಡಿನೊಂದಿಗೆ ಇದು ಸಾಧ್ಯ. ಹೇಗೆನ್ನುತ್ತೀರಾ? ನನ್ನದೊಂದು ಸಲಹೆ ಇಲ್ಲಿದೆ…
EVM ಯಂತ್ರದಲ್ಲಿ ಬೆರಳಚ್ಚು ಸಂವೇದಕ ಬಳಸಬೇಕು ಹಾಗೂ ಸರಿಯಾದ ವ್ಯಕ್ತಿಯೇ ಮತಚಲಾಯಿಸಲು ಬಂದಿಹನೇ ಎಂದು ಪತ್ತೆಹಚ್ಚಿ, ಹೌದೆಂದಾದಲ್ಲಿ ಮಾತ್ರ ಮತ ಚಲಾಯಿಸಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಕೂಡಲೇ ಅಲರ್ಟ್ ಆಗಬೇಕು. ಮತಗಟ್ಟೆಯ ಅಧಿಕಾರಿಗಳು ಮತ ಚಲಾಯಿಸಲು ಬಂದ ವ್ಯಕ್ತಿಯ ವೋಟರ್ ಐಡಿ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯನ್ನು ಗಣಕಯಂತ್ರದಲ್ಲಿ ನಮೂದಿಸಿ, ಆತನ ಗುರುತನ್ನು ಖಚಿತಪಡಿಸಿ ಬಳಿಕ ಮತ ಚಲಾಯಿಸಲು ಅನುವು ಮಾಡಬೇಕು. ಆತ ಚಲಾಯಿಸಿದ ಮತ ಆತನ ವೋಟರ್ ಐಡಿಯ ಕ್ಷೇತ್ರಕ್ಕನುಗುಣವಾಗಿ ಆತನ ಕೇತ್ರದ ಅಭ್ಯರ್ಥಿಗೆ ಮತ ಚಲಾವಣೆಗೊಳ್ಳಬೇಕು. ಹೀಗೆ ಮಾಡಿದ್ದೇ ಆದರೆ ಯಾರು ಯಾವುದೇ ಮತಗಟ್ಟೆಯಲ್ಲಿ ಬೇಕಾದರೂ ಮತ ಚಲಾಯಿಸಬಹುದು. ಇದರಿಂದ ಸಮಯ, ಓಡಾಟದ ಖರ್ಚು ಅಲ್ಲದೇ ಕಳ್ಳ ಮತದಾನವನ್ನೂ ತಡೆಗಟ್ಟಬಹುದು. ಹೇಗೂ ಸರಕಾರ ಆಧಾರ್ ವಿತರಣೆ, ಜೋಡಣೆಗೆ ದುಡ್ಡು ವ್ಯಯಿಸುತ್ತಿದೆ. ಅದರ ಜತೆಗೇ ಫೂಲ್ ಪ್ರೂಫ್ ಓಟಿಂಗ್ ಪ್ರಕ್ರಿಯೆ ಜಾರಿ ಮಾಡಬಹುದು. ಹೆಚ್ಚುಕಮ್ಮಿ ಸಿಮ್ ಕಾರ್ಡ್ ಹಾಗೂ ಪೇಟಿಎಂಗೆ ಆಧಾರ್ ಜೋಡಣೆಗೆ ಇದೇ ಕ್ರಮ ಅನುಸರಿಸುತ್ತಿರುವುದು. ಅದೇ ತಂತ್ರಜ್ಞಾನ ಬಳಸಿ ವೋಟಿಂಗ್ ಯಂತ್ರದಲ್ಲೂ ಮಾರ್ಪಾಡು ತರಬಹುದು ಎಂಬುದು ದೂರದ ಊರಿನಲ್ಲಿರುವ ಮತದಾರನಾಗಿ ನನ್ನ ಅಭಿಪ್ರಾಯ.
— ಆದಿತ್ಯ ಕೆ., ಪುತ್ತೂರು