Advertisement

ಕಾಂಗ್ರೆಸ್‌ನ 5 ನಗರಸಭಾ ಸದಸ್ಯರ ಉಚ್ಚಾಟನೆ

01:24 PM Jun 27, 2023 | Team Udayavani |

ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭಾ ಚುನಾ ವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್‌ ಪಕ್ಷದೊಳಗೆ ಈಗ ಉಚ್ಚಾಟನೆ ಪರ್ವ ಶುರುವಾಗಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Advertisement

ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಎರಡನೇ ಅವಧಿಗೆ ಚುನಾವಣೆ ನಡೆಸಲು ಕೆಲವೇ ದಿನಗಳು ಬಾಕಿ ಇರುವಾಗಲೇ ಪಕ್ಷದಿಂದ ನಗರಸಭಾ ಚುನಾವಣೆಯಲ್ಲಿ ಗೆದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೇರಿದ 5 ಮಂದಿ ಸದಸ್ಯರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.

ಉಚ್ಛಾಟನೆಗೊಂಡವರು: 7ನೇ ವಾರ್ಡ್‌ನ ಸದಸ್ಯ ಸತೀಶ್‌, 13ನೇ ವಾರ್ಡ್‌ನ ನಗರಸಭಾ ಸದಸ್ಯರಾಗಿ ರುವ ಮಾಜಿ ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್‌ ಕಿರಣ್‌ ಅವರ ತಾಯಿ ನಿರ್ಮಲಾ ಪ್ರಭು, 15ನೇ ವಾರ್ಡ್‌ ಸದಸ್ಯ ಅಂಬರೀಶ್‌, 20ನೇ ವಾರ್ಡ್‌ನ ನರಸಿಂಹಮೂರ್ತಿ ಹಾಗೂ 27ನೇ ವಾರ್ಡ್‌ನ ನೇತ್ರಾವತಿ ಪಕ್ಷದಿಂದ ಉಚ್ಚಾಟನೆಗೊಂಡವರು. ವಿಧಾನಸಭಾ ಚುನಾ ವಣೆಯಲ್ಲಿ 5 ನಗರಸಭಾ ಸದಸ್ಯರು ಕಾಂಗ್ರೆಸ್‌ ಟಿಕೆಟ್‌ ಸ್ಥಳೀಯ ಕೆಪಿಸಿಸಿ ಸದಸ್ಯರಾಗಿದ್ದ ವಿನಯ್‌ ಶಾಮ್‌ ಕೊಡದೇ ಇರುವುದ್ದಕ್ಕೆ ಅಸಮಾಧಾನಗೊಂಡು ಕಾಂಗ್ರೆಸ್‌ ತೊರೆದು ಆಗಿನ ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್‌ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು.

ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ!: 5 ಮಂದಿ ಸದಸ್ಯರನ್ನು ಉಚ್ಚಾಟನೆ ಮಾಡಿರುವ ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷರಾದ ಮಾಜಿ ಕೇಂದ್ರ ಸಚಿವ ಕೆ. ರೆಹಮಾನ್‌ ಖಾನ್‌ ಅವರ ಲೆಟರ್‌ಹೆಡ್‌ ಇರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪತ್ರದಲ್ಲಿ 28-4-2023 ದಿನಾಂಕ ನಮೂದಾಗಿದೆ. ಆದರೆ, ಉಚ್ಛಾಟಿತ ಸದಸ್ಯರು ಏ.27 ರಂದು ಆಗ ಸಚಿವರಾಗಿದ್ದ ಡಾ.ಕೆ.ಸುಧಾಕರ್‌ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಸೇರಿದ ಮಾರನೇ ದಿನವೇ ಅಂದರೆ ಏ.28ರಂದೇ 5 ಮಂದಿ ಸದ್ಯರನ್ನು ಉಚ್ಛಾಟಿಸಲಾಗಿದ್ದು, 2 ತಿಂಗಳ ಬಳಿಕ ಆದೇಶ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಶಿಸ್ತು ಕ್ರಮದ ಬಗ್ಗೆ ಸುಳಿವು ನೀಡಿದ್ದ ಶಾಸಕ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೇರಿದ ಕೆಲ ನಗರಸಭಾ ಸದಸ್ಯರು ಮತ್ತೆ ಕಾಂಗ್ರೆಸ್‌ ಪಕ್ಷವನ್ನು ಹಿಂಬಾಲಿಸುತ್ತಿರುವ ಕುರಿತು ಈ ಹಿಂದೆ ಶಾಸಕ ಪ್ರದೀಪ್‌ ಈಶ್ವರ್‌, ತಮ್ಮ ಕಚೇರಿ ಉದ್ಭಾಟನೆ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ ಯಾವುದೇ ಕಾರಣಕ್ಕೂ ಪಕ್ಷಕ್ಕೆ ದ್ರೋಹ ಬಗೆದವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಖಡಕ್‌ ಆಗಿ ಹೇಳಿದ್ದರು.

Advertisement

ಚನಾವಣೆಗೆ ಕೆಲವೇ ದಿನ ಬಾಕಿ: ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಎರಡನೇ ಅವಧಿ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್‌ 5 ಮಂದಿ ನಗರಸಭಾ ಸದಸ್ಯರನ್ನು ಉಚ್ಛಾಟನೆ ಮಾಡಿದ್ದು, ಮುಂದಿನ ಬೆಳೆವಣಿಗೆಗಳನ್ನು ಕಾದು ನೋಡಬೇಕಿದೆ.

ಗೌರಿಬಿದನೂರಲ್ಲಿ ಹಲವರ ಉಚ್ಚಾಟನೆಗೆ ಶಿಫಾರಸು : ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ತೊರೆದ ಮಾರನೇ ದಿನವೇ ನಗರಸಭಾ ಸದಸ್ಯರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಆದರೆ, ಜಿಲ್ಲೆಯ ಗೌರಿಬಿದನೂರಲ್ಲಿ ಕಾಂಗ್ರೆಸ್‌ ಸೋಲಿಗೆ ಕಾರಣರಾದ ಹಲವು ಮುಖಂಡರನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಜೂ.26 ರಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೆ.ಎನ್‌.ಕೇಶವರೆಡ್ಡಿ ಕೆಪಿಸಿಸಿ ಶಿಸ್ತು ಸಮಿತಿಗೆ ಶಿಫಾರಸು ಮಾಡಿದ್ದಾರೆ. ಶಿಫಾರಸು ಆದವರಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಚ್‌.ವಿ.ಮಂಜುನಾಥ, ಹಾಲಿ ಕೋಚಿಮುಲ್‌ ನಿರ್ದೇಶಕರಾಗಿರುವ ಕೆ.ಕಾಂತರಾಜ್‌, ಜಿಪಂ ಮಾಜಿ ಉಪಾಧ್ಯಕ್ಷರಾಗಿರುವ ಪಿ.ವಿ.ರಾಘವೇಂದ್ರ ಹನುಮಾನ್‌, ನಗರಸಭೆ ಮಾಜಿ ಅಧ್ಯಕ್ಷರಾದ ನರಸಿಂಹಮೂರ್ತಿ ಗೌರಿಬಿದನೂರು ಮಾಜಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಅಬ್ದುಲ್‌ ಹಾಗೂ ಪಿಎಲ್‌ಡಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಚಿಕ್ಕಣ್ಣ ಸೇರಿದ್ದಾರೆ.

ವಿಪ್‌ ಉಲ್ಲಂಘಿಸಿದರೂ ಮತ್ತೆ ಪಕ್ಷ ಸೇರ್ಪಡೆ: ಈ ಹಿಂದೆ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ವೇಳೆ ಕಾಂಗ್ರೆಸ್‌ ಜಾರಿ ಮಾಡಿದ್ದ ವಿಪ್‌ ಉಲ್ಲಂಘಿಸಿ ಬಿಜೆಪಿಗೆ ಅಡ್ಡ ಮತದಾನ ಮಾಡಿದ್ದ 7 ಮಂದಿ ಕಾಂಗ್ರೆಸ್‌ ಸದಸ್ಯರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಆದರೆ, ವಿಪ್‌ ಉಲ್ಲಂಘನೆ ವಿಚಾರ ಮುಂದಿಟ್ಟುಕೊಂಡು ಜಿಲ್ಲಾ ಕಾಂಗ್ರೆಸ್‌ ಅವರ ಸದಸ್ಯತ್ವ ರದ್ದತಿಗಾಗಿ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ಸೂಕ್ತ ಸಾಕ್ಷ್ಯ ಒದಗಿಸದ ಕಾರಣ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ 7 ಸದಸ್ಯರ ಅರ್ಜಿ ಎತ್ತಿ ಹಿಡಿದು ಸದಸ್ಯರಾಗಿ ಮುಂದುವರೆಯುವಂತೆ ಆಗಿನ ಜಿಲ್ಲಾಧಿಕಾರಿಗಳಾಗಿದ್ದ ಆರ್‌.ಲತಾ ಆದೇಶ ಹೊರಡಿಸಿದ್ದರು. ಬಳಿಕ ಚುನಾವಣೆ ಘೋಷಣೆಗೂ ಮೊದಲು 7 ಮಂದಿ ನಗರಸಭಾ ಸದಸ್ಯರನ್ನು ಮತ್ತೆ ಕಾಂಗ್ರೆಸ್‌ ಪಕ್ಷದೊಳಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಬಿಜೆಪಿಗೆ ಹೋದ 5 ಮಂದಿ ಸದಸ್ಯರನ್ನು 6 ವರ್ಷ ಕಾಲ ಉಚ್ಚಾಟನೆ ಮಾಡಲಾಗಿದ್ದು, ಸದಸ್ಯರ ಕಾನೂನು ಹೋರಾಟ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಸದಸ್ಯತ್ವ ರದ್ದುಗೊಳಿಸಲು ಕ್ರಮ ವಹಿಸುವಂತೆ ಸೂಚನೆ : ಇನ್ನೂ ಕೆಪಿಸಿಸಿ ಶಿಸ್ತು ಸಮಿತಿ ಚಿಕ್ಕಬಳ್ಳಾಪುರ ನಗರಸಭೆಯ 5 ಮಂದಿ ಸದಸ್ಯರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವರ ಸದಸ್ಯತ್ವ ರದ್ದುಗೊಳಿಸಲು ಕಾನೂನು ರೀತ್ಯ ಕ್ರಮ ವಹಿಸುವಂತೆ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷರಾದ ಕೆ.ರೆಹಮಾನ್‌ ಖಾನ್‌ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದ ಕೆ.ಎನ್‌.ಕೇಶವರೆಡ್ಡಿ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next