Advertisement
ಮಳೆಗಾಲದ ಆರಂಭದ ದಿನಗಳಲ್ಲಿ ಕಾಯಿಲೆ ಬೀಳುವ ಸಂದರ್ಭಗಳೇ ಹೆಚ್ಚು. ಈ ಬಗ್ಗೆ ಸಾರ್ವ ಜನಿಕರು ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಅಗತ್ಯ ಕ್ರಮವಹಿಸಬೇಕಿದೆ. ಮಳೆ ಶುರುವಾಗುತ್ತಿರು ವಂತೆಯೇ ಆರೋಗ್ಯ ಸಮಸ್ಯೆಗಳಾದ ಕೆಮ್ಮು, ಶೀತ, ನೆಗಡಿ ಮುಂತಾದ ಸೋಂಕಿನ ಕಾಯಿಲೆಗಳು ಕಾಣಿಸಿಕೊಳ್ಳಲಿದೆ.
Related Articles
Advertisement
ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ: ಡೆಂಘೀ ಜ್ವರದಲ್ಲಿ ರೋಗಿಯ ದೇಹದ ಉಷ್ಣತೆ ಸಾಮಾನ್ಯಕ್ಕಿಂತಲೂ ಹೆಚ್ಚಾಗುವುದರ ಜೊತೆಗೆ ಕೀಲು ಹಾಗೂ ದೇಹದ ಮಾಂಸಖಂಡಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳಲಿದೆ. ಚರ್ಮದ ಮೇಲೆ ಕೆಂಪು – ಕಪ್ಪು ಮಚ್ಚೆಗಳು ಮತ್ತು ಒಮ್ಮೊಮ್ಮೆ ಮೂಗು – ಬಾಯಿಯಲ್ಲಿ ರಕ್ತಸ್ರಾವವೂ ಕಂಡುಬರಬಹುದು. ಕೈಫಾಯ್ಡ ಜ್ವರದಲ್ಲಿ ರೋಗಿಯು ಜ್ವರದ ಜೊತೆಯಲ್ಲಿಯೇ ತಲೆನೋವು, ಹೊಟ್ಟೆ ನೋವು, ವಾಂತಿ, ಕೆಲವೊಮ್ಮೆ ಅತಿಸಾರದಂತಹ ಸಮಸ್ಯೆ ಕಾಣಿಸಿಕೊಳ್ಳಲಿದೆ. ಇಲಿ ಜ್ವರದಲ್ಲಿ ರೋಗಿ ನಿತ್ರಾಣ ನಾಗಿ, ಆತನ ರಕ್ತದೊತ್ತಡವು ಕಡಿಮೆಯಾಗಲಿದೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ವಿಪರೀತ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಂಡರೂ, ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಿಸಿ ಕೊಳ್ಳಬೇಕು ಎಂಬುದು ವೈದ್ಯಾಧಿಕಾರಿಗಳ ಸಲಹೆ.
ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಿ: ಮಳೆ ಗಾಲದಲ್ಲಿ ಸೊಳ್ಳೆಗಳಿಂದ ಜ್ವರ, ಮಲೇರಿಯಾ, ಡೆಂಘೀ ಸೇರಿದಂತೆ ಬಹುತೇಕ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ. ಆದ್ದರಿಂದ ಸಾರ್ವ ಜನಿಕರು, ಗ್ರಾಮ ಪಂಚಾಯಿತಿಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಮಹಾ ನಗರಪಾಲಿಕೆ ಅಧಿಕಾರಿಗಳು ಸೊಳ್ಳೆ ಉತ್ಪತ್ತಿ ಯಾಗದಂತೆ ನೋಡಿಕೊಳ್ಳಬೇಕು. ಇದರ ಜೊತೆಗೆ ಸಾರ್ವಜನಿಕರು ಸಿಕ್ಕಲ್ಲೆಲ್ಲಾ ತ್ಯಾಜ್ಯ ಸುರಿಯುವುದನ್ನು ಕಡಿಮೆ ಮಾಡಬೇಕು. ಮನೆಯ ಅಕ್ಕಪಕ್ಕ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಆಗ ಸೊಳ್ಳೆಗಳ ಸಂತಾನೋತ್ಪತ್ತಿ ತಪ್ಪಿ, ಸಾಂಕ್ರಾಮಿಕ ರೋಗ ತಡೆಗಟ್ಟಬಹುದು.
ಪರಿಸರ ಸ್ವಚ್ಛವಾಗಿಡಿ: ಉತ್ತಮ ಆರೋಗ್ಯಕ್ಕಾಗಿ ಹಾಗೂ ಯಾವುದೇ ರೋಗಗಗಳು ಕಾಣಿಸಿಕೊಳ್ಳದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕುದಿಸಿ ಆರಿಸಿದ ನೀರು, ಬಿಸಿಯಾದ ಊಟ, ಶುದ್ಧವಾದ ಆಹಾರ ಪದಾರ್ಥ ಸೇವಿಸಬೇಕು. ಬಯಲು ಶೌಚಾವನ್ನು ಬಿಟ್ಟು, ಶೌಚಗೃಹ ಬಳಸಬೇಕು. ತ್ಯಾಜ್ಯ ವಸ್ತುಗಳನ್ನು ನಿಗಧಿತ ಸ್ಥಳದಲ್ಲಿ ವಿಲೇವಾರಿ ಮಾಡುವ ಮೂಲಕ ಗ್ರಾಮ, ಬಡಾವಣೆ, ಮನೆಗಳ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.
● ಸತೀಶ್ ದೇಪುರ