ಕೆಲವೊಂದು ಆಭರಣಗಳನ್ನು ನಾವು ಆರೋಗ್ಯ್ ದೃಷ್ಟಿಯಿಂದ ಧರಿಸುತ್ತಿದ್ದರೆ ಇನ್ನೂ ಕೆಲವು ಆಭರಣಗಳನ್ನು ಪ್ಯಾಷನ್ ಗಾಗಿ ಧರಿಸುತ್ತೇವೆ. ಮತ್ತೆ ಕೆಲವು ಆಭರಣಗಳನ್ನು ಸಂಪ್ರದಾಯ, ಸಂಸ್ಕೃತಿಯ ಕಾರಣಕ್ಕಾಗಿ ಧರಿಸುತ್ತೇವೆ. ಹೀಗೆ ನಾವು ಧರಿಸುವ ಪ್ರತಿಯೊಂದು ಆಭರಣಗಳ ಹಿಂದೆಯೂ ಒಂದಲ್ಲಾ ಒಂದು ಕಾರಣ ಅಡಗಿರುವುದನ್ನು ಗಮನುಸಬಹುದಾಗಿದೆ. ಹಾಗೆ ನಾವು ಹಾಕಿಕೊಳ್ಳುವ ಉಂಗುರಕ್ಕೂ ಒಂದು ಕಾರಣ, ಮಹತ್ವ ಇರುವುದನ್ನು ಗಮನಿಸಬಹುದು.
ಉಂಗುರ ಎಂದ ಕೂಡಲೆ ನಮಗೆ ನೆನಪಾಗುವುದು ಒಂದು ದುಂಡನೆಯ ಆಕಾರ. ಅದು ಬೆರಳಿಗೆ ಹಾಕಿಕೊಳ್ಳುವ ಕೈ ಉಂಗುರ ಇರಬಹುದು ಅಥವಾ ಕಾಲಿಗೆ ಹಾಕಿಕೊಳ್ಳುವ ಕಾಲುಂಗುರ ಇರಬಹುದು. ಈ ಉಂಗುರ ಎನ್ನುವುದಕ್ಕೆ ಸುಮಾರು 2500 ವರ್ಷಗಳ ಇತಿಹಾಸ ಇದೆ ಎಂದೇ ಹೇಳಬಹುದು. ಹಿಚ್ಹೈಟ್ ನಾಗರಿಕತೆಯು ಉಂಗುರಗಳನ್ನು ನಿರ್ಮಾಣ ಮಾಡಿತು. ಇದರಲ್ಲಿ ಸಿಗ್ನೆಟ್ ಉಂಗುರಗಳು ಸೇರಿವೆ. ಈಜಿಪ್ಟ್ ನ ಹಳೆಯ ನಾಗರಿಕರು ಲೋಹದ ಉಂಗುರವನ್ನು ತಯಾರಿಸಿ ವಿವಿಧ ಬೆರಳುಗಳಿಗೆ ಧರಿಸುತ್ತಿದ್ದರು.
ಈ ಉಂಗುರದಲ್ಲಿ ಲೋಹ, ಪ್ಲ್ಯಾಸ್ಟಿಕ್, ಕಲ್ಲು, ಕಟ್ಟಿಗೆ, ಮೂಳೆ, ಗಾಜು, ಹರಳು ರತ್ನ ವಜ್ರ, ಮಾಣಿಕ್ಯ, ನೀಲಮಣಿ ಅಥವಾ ಪಚ್ಚೆ ಯಂತಹ ವಸ್ತುಗಳನ್ನು ಬಳಸಲಾಗುತಿತ್ತು. ಇದನ್ನು ಧರಿಸುವ ವ್ಯಕ್ತಿಗಳು ತಮ್ಮ ತಮ್ಮ ರಾಶಿಗೆ ತಕ್ಕಂತೆ ತಮಗೆ ಬೇಕಾದ ರೀತಿಯಲ್ಲಿ ಉಂಗುರಗಳನ್ನು ಧರಿಸುತ್ತಿದ್ದರು. ಅಂದರೆ ಮೇಷ ರಾಶಿಗೆ ಒಂದು ತರಹದ ಉಂಗುರ, ಮೀನಾ ರಾಶಿಗೆ ಒಂದು ತರಹದ ಉಂಗುರ ಹೀಗೆ ಒಂದೊಂದು ರಾಶಿಯವರು ಒಂದೊಂದು ಹವಳ, ಮುತ್ತು ಗಳಿಂದ ಮಾಡಿದ ಉಂಗುರ ಧರಿಸುತ್ತಿದ್ದರು. ಈ ರಾಶಿಗಳ ಮೇಲೆ ಧರಿಸುವ ಉಂಗುರಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಜನರು ನೀಡುತ್ತಿದ್ದರು.
ಈ ಉಂಗುರಗಳಲ್ಲಿ ಈಗೀಗ ಪ್ಯಾಷನ್ ಗಳ ಅಳವಡಿಕೆ ಆಗಿರುವುದನ್ನು ಗಮನಿಸಬಹುದು. ಒಂದೊಂದು ಉಂಗುರವು ಒಂದೊಂದು ತರಹದ ಡಿಸೈನ್ ಅನ್ನು ಹೊಂದಿರುತ್ತದೆ. ಅದನ್ನು ಧರಿಸಲು ಇಷ್ಟ ಪಡುವವರು ನಮಗೆ ಬೇಕಾದ ರೀತಿಯ ಉಂಗುರವನ್ನು ಧರಿಸಬಹುದಾಗಿದೆ.
ಹಾಗೆ ಈ ಉಂಗುರವನ್ನು ಬರಿ ಉಂಗುರದ ಬೆರಳಿಗೆ ಮಾತ್ರ ಹಾಕಿಕೊಳ್ಳುವುದಿಲ್ಲ. ಅದರ ಬದಲಾಗಿ ಕೈಯಲ್ಲಿ ಇರುವ ಎಲ್ಲಾ ಬೆರಳುಗಳಿಗೂ ಉಂಗುರವನ್ನು ಧರಿಸಲಾಗುತ್ತದೆ. ಕೆಲವರು ಜ್ಯೋತಿಷ್ಯ ವನ್ನು ನಂಬಿ ಹೆಬ್ಬೆರಳು ತೋರುಬೆರಳು ಅಥವಾ ಕಿರುಬೆರಳುಗಳಿಗೆ ಹಾಕಿಕೊಳ್ಳುತ್ತಾರೆ. ಇನ್ನೂ ಕೆಲವರು ಪ್ಯಾಷನ್ ಗಾಗಿ ತಮಗೆ ಇಷ್ಟವಾದ ಬೆರಳಿಗೆ ಧರಿಸುತ್ತಾರೆ. ಹೀಗೆ ಈ ಉಂಗುರವನ್ನು ತೊಡುವಲ್ಲಿಯೂ ಕೆಲವು ಕುತೂಹಲವಾದ ಅಂಶಗಳು ಅಡಗಿವೆ. ಈ ಮದುವೆಯ ಮುನ್ನ ಮದುವೆ ನಿಶ್ಚಯದ ಸಂದರ್ಭದಲ್ಲಿ ಮದುವೆಯ ಗುರುತಿಗಾಗಿ ಈ ಉಂಗುರವನ್ನು ಕೂಡ ಧರಿಸಲಾಗುತ್ತದೆ.
ಮಧುರಾ ಎಲ್ ಭಟ್ಟ
ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರ ಉಜಿರೆ