Advertisement

ಎಲ್ಲವೂ ಕುಟುಂಬಕ್ಕಾಗಿ ಪ್ರತಿಪಕ್ಷಗಳ ಒಕ್ಕೂಟಗಳತ್ತ: ಪ್ರಧಾನಿ ಆಕ್ರೋಶ

10:29 PM Jul 18, 2023 | Team Udayavani |

ನವದೆಹಲಿ: ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್‌ ನೇತೃತ್ವದ 26 ಪ್ರತಿಪಕ್ಷಗಳ ಸಭೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕಟಕಿಯಾಡಿದ್ದಾರೆ. ಅದೇನಿದ್ದರೂ “ಕುಟುಂಬದಿಂದ ಕುಟುಂಬಕ್ಕಾಗಿ, ಕುಟುಂಬಕ್ಕೋಸರ” ಎಂದಿದ್ದಾರೆ.

Advertisement

ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹದ ರಾಜಧಾನಿ ಪೋರ್ಟ್‌ಬ್ಲೇರ್‌ನಲ್ಲಿ ವೀರ ಸಾವರ್ಕರ್‌ ವಿಮಾನ ನಿಲ್ದಾಣದ ಟರ್ಮಿನಲ್‌ ಅನ್ನು ವರ್ಚುವಲ್‌ ಆಗಿ ಉದ್ಘಾಟಿಸಿದ ಅವರು, “ಪ್ರತಿಪಕ್ಷಗಳದ್ದು ಭ್ರಷ್ಟಾಚಾರವನ್ನು ಪ್ರೋತ್ಸಾಹಿಸಲು ಕರೆದಿರುವ ಸಭೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಇದು ಕಠಿಣ ಭ್ರಷ್ಟಾಚಾರದ ಸಮ್ಮೇಳನ. 2024ರಲ್ಲಿ ಜನರು ಮತ್ತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೇ ಬಹುಮತ ನೀಡಿ ಆಯ್ಕೆ ಮಾಡಲು ಮನಸ್ಸು ಮಾಡಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ವಿರುದ್ಧ ಭ್ರಷ್ಟಾಚಾರದ ಆರೋಪಗಳಿದ್ದರೂ, 26 ಪ್ರತಿಪಕ್ಷಗಳು ಅದಕ್ಕೆ ಬೆಂಬಲ ನೀಡುತ್ತಿವೆ’ ಎಂದು ಆರೋಪಿಸಿದರು.

ಪ್ರಜಾಪ್ರಭುತ್ವ ಎನ್ನುವುದು ಜನರಿಂದ ಜನರಿಗಾಗಿ ಜನರಿಗೋಸ್ಕರ. ಆದರೆ, ಕುಟುಂಬ ರಾಜಕೀಯ ವ್ಯವಸ್ಥೆಯನ್ನು ನೆಚ್ಚಿಕೊಂಡವರಿಗೆ ಎಲ್ಲವೂ ಕುಟುಂಬದಿಂದ ಕುಟುಂಬಕ್ಕಾಗಿ ಮತ್ತು ಕುಟುಂಬಕ್ಕೋಸ್ಕರ. ಅವರಿಗೆ ದೇಶಕ್ಕಿಂತ ಕುಟುಂಬವೇ ಮೊದಲು. ಆದರೆ, ನಮಗೆ ದೇಶವೇ ಮೊದಲು ಎಂದಿದ್ದಾರೆ ಮೋದಿ. “ಪ್ರತಿಪಕ್ಷಗಳು ಹೊಂದಿರುವ ಏಕೈಕ ಕನಿಷ್ಠ ಸಾಮಾನ್ಯ ಕಾರ್ಯಕ್ರಮವೆಂದರೆ ಕುಟುಂಬಕ್ಕಾಗಿ ಭ್ರಷ್ಟಾಚಾರದ ಪ್ರಮಾಣವನ್ನು ಹೆಚ್ಚಿಸುವುದು’ ಎಂದರು. ಇದೇ ವೇಳೆ, ವಿಮಾನ ನಿಲ್ದಾಣದ ಆವರಣದಲ್ಲಿ ವೀರ ಸಾವರ್ಕರ್‌ ಪ್ರತಿಮೆಯನ್ನೂ ಲೋಕಾರ್ಪಣೆ ಮಾಡಲಾಯಿತು.

ಟರ್ಮಿನಲ್‌ ವೈಶಿಷ್ಟ್ಯವೇನು?
ಪೋರ್ಟ್‌ ಬ್ಲೇರ್‌ನಲ್ಲಿರುವ ವೀರ ಸಾವರ್ಕರ್‌ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಎನ್‌ಐಟಿಬಿಯನ್ನು (ನೂತನ ಸಂಯೋಜಿತ ನಿಲ್ದಾಣ ಕಟ್ಟಡ) ಮೋದಿ ಉದ್ಘಾಟಿಸಿದ್ದಾರೆ. ಇದರ ವಿಶೇಷಗಳು ಇಲ್ಲಿವೆ…

1. ಕಟ್ಟಡ ಪರಿಸರಸ್ನೇಹಿಯಾಗಿದೆ. ಪೂರ್ಣ ಕಟ್ಟಡವನ್ನೇ ಶೇ.100 ಪ್ರಾಕೃತಿಕ ಬೆಳಕಿನಿಂದಲೇ ಬೆಳಗುವಂತೆ ಮಾಡಲಾಗಿದೆ. ಪಕ್ಕಾ ಲೆಕ್ಕಾಚಾರ ಹಾಕಿ ಸೂರ್ಯನ ಬೆಳಕು ಒಳಕ್ಕೆ ಬರುವಂತೆ ಛಾವಣಿ ಸಿದ್ಧಪಡಿಸಲಾಗಿದೆ. ದಿನಕ್ಕೆ 12 ಗಂಟೆಗಳ ಕಾಲ ಹೀಗೆ ಬೆಳಕು ಬರುತ್ತದೆ.
2. ಹೆಚ್ಚೆಚ್ಚು ಪ್ರಯಾಣಿಕರು ಬಂದರೂ ನಿಭಾಯಿಸಲು ಸಾಧ್ಯವಾಗುವಂತೆ ನಿರ್ಮಿಸಲಾಗಿದೆ. ಇದಕ್ಕಾಗಿ 707.73 ಕೋಟಿ ರೂ. ವ್ಯಯಿಸಲಾಗಿದೆ.
3. ಕಟ್ಟಡ ಒಟ್ಟು 40,837 ಚ.ಮೀ. ವಿಸ್ತಾರವಿದೆ. ಇದರಲ್ಲಿ 1200 ಪ್ರಯಾಣಿಕರನ್ನು ಹಿಡಿಸಬಹುದು. ವರ್ಷಕ್ಕೆ 40 ಲಕ್ಷ ಪ್ರಯಾಣಿಕರು ಒಳಪ್ರವೇಶಿಸಲು ಸಾಧ್ಯವಿದೆ.
4. ಅತ್ಯಾಧುನಿಕ ಸೌಲಭ್ಯಗಳಿವೆ. ಮೂರಂತಸ್ತಿನ ಕಟ್ಟಡದಲ್ಲಿ 28 ಚೆಕ್‌ ಇನ್‌ ಕೌಂಟರ್‌ಗಳು, ಪ್ರಯಾಣಿಕರು ಹತ್ತಿಳಿಯಲು ಮೂರು ಬೋರ್ಡಿಂಗ್‌ ಸೇತುವೆಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next