Advertisement

ಕರ್ತವ್ಯ ಪಾಲನೆ ಎಲ್ಲರ ಜವಾಬ್ದಾರಿ

12:12 PM Nov 27, 2018 | |

ಬೀದರ: ಈ ದೇಶದ ಪ್ರತಿಯೊಬ್ಬ ಪ್ರಜೆ ಸಂವಿಧಾನಿಕ ಹಕ್ಕುಗಳು ಅನುಭವಿಸಲು ಮುಂದಾಗುತ್ತಾರೆ. ಆದರೆ, ಸಂವಿಧಾನಿಕ ಕರ್ತವ್ಯಗಳನ್ನು ಪಾಲಿಸದೇ ಇರುವುದು ವಿಪರ್ಯಾಸ. ಆದ್ದರಿಂದ ಪ್ರತಿಯೊಬ್ಬರು ಸಂವಿಧಾನವನ್ನು ಚೆನ್ನಾಗಿ ಅರಿತು ಅದರ ಆಶೆಯಗಳಡಿ ನಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಮನಗೊಳಿ ಪ್ರೇಮಾವತಿ ಹೇಳಿದರು.

Advertisement

ನಗರದ ನೌಬಾದ್‌ನ ದಲಿತ ಮಹಾಸಭಾ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸಮಾಜ ಕಲ್ಯಾಣ ಇಲಾಖೆ, ಮಾನವ ಬಂಧುತ್ವ ವೇದಿಕೆ ಹಾಗೂ ದಲಿತ ಮಹಾಸಭಾಗಳ ಸಹಯೋಗದಲ್ಲಿ ಭಾರತ ಸಂವಿಧಾನ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಜಾತಿ, ಧರ್ಮ, ಭಾಷೆ, ಸಂಸ್ಕೃತಿ ಹೊಂದಿದ್ದರೂ ಈ ದೇಶದ ಪ್ರತಿಯೊಬ್ಬ ಪ್ರಜೆ ಸಂವಿಧಾನವನ್ನು ತಾಯಿ ರೂಪದಲ್ಲಿ ಸ್ವೀಕರಿಸಿ ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ಕೋಮುವಾದ ತಡೆಗಟ್ಟಲು ಮುಂದೆ ಬರುವಂತೆ ಕರೆ ನೀಡಿದರು. 

ರಾಷ್ಟ್ರದ ಐಕ್ಯತೆ, ರಾಷ್ಟ್ರ ಲಾಂಛನ, ರಾಷ್ಟ್ರಗೀತೆ, ರಾಷ್ಟ್ರಧ್ವಜ ಇದೆಲ್ಲದರ ಬಗ್ಗೆ ಪ್ರತಿಯೊಬ್ಬರಿಗೆ ಗೌರವ ಇರಬೇಕು. ವಿಭಿನ್ನ ಭಾಷೆ ಹಾಗೂ ಸಂಸ್ಕೃತಿಯಿಂದ ಬದುಕುತ್ತಿರುವ ನಾವೆಲ್ಲರು ಈ ದೇಶದ ಸಂವಿಧಾನವನ್ನು ದೈವ ರೂಪವಾಗಿ ಪೂಜಿಸಬೇಕು. ಮತದಾನವೆಂಬ ವ್ಯವಸ್ಥೆ ಮೂಲಕ ಉತ್ತಮರನ್ನು ಚುನಾಯಿಸಿ ಅವರಿಂದ ಮೂಲಭೂತ ಸೌಕರ್ಯಗಳನ್ನು ಮಾಡಿಸಬೇಕು. ಆಗ ಮಾತ್ರ ನಾವು ಪ್ರಜಾಪ್ರಭುತ್ವದ ಪ್ರಭುಗಳಾಗಲು ಸಾಧ್ಯ ಎಂದರು.

ಭಾರತ ಸಂವಿಧಾನ ಬಹು ವಿಸ್ತಾರ ಹಾಗೂ ಶ್ರೇಷ್ಠ ಸಂವಿಧಾನವಾಗಿದೆ. ಇಲ್ಲಿ ಪ್ರತಿಯೊಬ್ಬರಿಗೆ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಹಕ್ಕುಗಳನ್ನು ನೀಡುವ ಮೂಲಕ ತನಗಿಷ್ಟವಾದುದನ್ನು ಸ್ವೀಕರಿಸುವ ಹಾಗೂ ತಿರಸ್ಕರಿಸುವ ಮುಕ್ತ ಅವಕಾಶ ಕಲ್ಪಿಸಿದ ಜಗತ್ತಿನ ಮೊದಲ ಸಂವಿಧಾನ ಎನಿಸಿಕೊಂಡಿದೆ ಎಂದು ಹೇಳಿದರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್‌. ರಾಘವೇಂದ್ರ ಅವರು ಸಂವಾದಕರ ಪ್ರಶ್ನೆಗಳಿಗೆ ಉತ್ತರಿಸಿ, ಸಂವಿಧಾನವನ್ನು ಅಷ್ಟು ಸರಳವಾಗಿ ಬದಲಿಸಲು ಸಾಧ್ಯವಿಲ್ಲ. ಸಂವಿಧಾನ ತಿದ್ದುಪಡಿ ಅಗತ್ಯವಿದ್ದಾಗ ಅದು ಜನರ ಬಳಿ ಅಭಿಪ್ರಾಯ ಸ್ವೀಕರಿಸಿ, ಲೋಕಸಭೆ ಹಾಗೂ ರಾಜ್ಯಸಭೆ ಜೊತೆಗೆ ದೇಶದ ಅರ್ಧದಷ್ಟು ರಾಜ್ಯಗಳ ಶಾಸನ ಸಭೆಗಳಲ್ಲಿ 2/3 ಮೆಜಾರಿಟಿಯಲ್ಲಿ ಪಾಸಾಗಿ ರಾಷ್ಟ್ರಪತಿಗಳ ಅಂಕಿತ ಪಡೆಯಬೇಕಾಗುತ್ತದೆ. ನಮ್ಮ ವ್ಯತಿರಿಕ್ತ ವ್ಯವಸ್ಥೆ ಬಗ್ಗೆ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಂಡಲ್ಲಿ ನೈಜ ಪ್ರಜಾಪ್ರಭುತ್ವ ವಾದಿಗಳಾಗಲು ಸಾಧ್ಯ ಎಂದರು. 

ಅಧ್ಯಕ್ಷತೆ ವಹಿಸಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಸಿ ಚಂದ್ರಶೇಖರ ಮಾತನಾಡಿದರು. ಸರ್ಕಾರಿ ಬಾಲಕಿಯರ
ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವಿಠಲದಾಸ ಪ್ಯಾಗೆ ವಿಶೇಷ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅನಿಲಕುಮಾರ ಮೇಲೊಡ್ಡಿ, ದಲಿತ ಮಹಾಸಭಾ ಅಧ್ಯಕ್ಷ ಪ್ರದೀಪ ಜಂಜಿರೆ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಮಹೇಶ ಗೋರನಾಳಕರ್‌, ವಸತಿ ನಿಲಯದ ಮೇಲ್ವಿಚಾರಕ ಬಕ್ಕಪ್ಪ, ಜೋಸೆಫ್‌, ವಿಲಾಸ ಮದನಕರ್‌, ರಮೇಶ, ಅರುಣ ಪಟೇಲ, ಮಧುಶ್ರೀ, ಲಕ್ಕಿ ಪ್ರಥ್ವಿರಾಜ ಸೇರಿದಂತೆ ಅನೇಕರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next