Advertisement

ಕಾನೂನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ

03:33 PM May 18, 2018 | Team Udayavani |

ಚಿಕ್ಕಮಗಳೂರು: ದೇಶದಲ್ಲಿ ನೆಮ್ಮದಿಯಿಂದ ಬದುಕಬೇಕಾದರೆ ಕಾನೂನಿಗೆ ಬೆಲೆ ಕೊಡುವ ಮೂಲಕ ಕಾನೂನನ್ನು ಗೌರವಿಸುವುದು ಬಹಳ ಮುಖ್ಯ ಎಂದು ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಸಿ.ಜೆ.ಎಂ ಶ್ರೀರಾಮ್‌ ನಾರಾಯಣ್‌ ಹೆಗ್ಡೆ ಹೇಳಿದರು.

Advertisement

ಜ್ಯೋತಿನಗರದ ಮಂಜಯ್ಯಶೆಟ್ಟಿ ನರಸಿಂಹಶೆಟ್ಟಿ ಶಿಕ್ಷಣ ಕಾಲೇಜು ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಜಯ್ಯಶೆಟ್ಟಿ ನರಸಿಂಹಶೆಟ್ಟಿ ಶಿಕ್ಷಣ ಕಾಲೇಜು ಆಶ್ರಯದಲ್ಲಿ ವಿಶ್ವ ರೆಡ್‌ಕ್ರಾಸ್‌ ದಿನದ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಸಾವಿರಾರು ಕಾನೂನುಗಳಿವೆ.

ಅವುಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಕಾನೂನನ್ನು ನಾವುಗಳು ಪಾಲಿಸಲಿ ಬಿಡಲಿ. ಆದರೆ, ಕಾನೂನು ನಮ್ಮನ್ನು ಹಿಂಬಾಲಿಸುತ್ತದೆ ಎಂದರು. ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ 150 ವರ್ಷಗಳ ಹಿಂದೆಯೇ ಉದ್ಭವವಾಗಿದೆ. ಸಂಸ್ಥೆಯು ಜನರಿಗೆ ಅರಿವು ಮೂಡಿಸುವ ಕೆಲಸದ ಜೊತೆಗೆ ಆ ಸಂಸ್ಥೆಯಲ್ಲಿ ಲಕ್ಷಾಂತರ ಜನರು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು. 

ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಅಧ್ಯಕ್ಷ ಡಾ| ಕೆ. ಸುಂದರಗೌಡ ಮಾತನಾಡಿ, ದೇಶ ಭ್ರಷ್ಟಾಚಾರದಲ್ಲಿ ಸಿಲುಕಿ ಒದ್ದಾಡುತ್ತಿದೆ. ಹಿರಿಯರು ಕಿರಿಯರನ್ನು ಒಳ್ಳೆಯ ದಾರಿಗೆ ತರುವ ಕೆಲಸ ಮಾಡಬೇಕಾಗಿದೆ. ಶಿಕ್ಷಕರು ಮತ್ತು ವಕೀಲರು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಮನವಿ ಮಾಡಿದರು. ವಕೀಲರ ಸಂಘದ ಅಧ್ಯಕ್ಷ ಬಿ.ಟಿ.ದುಷ್ಯಂತ್‌ ಮಾತನಾಡಿ, ಸಮಾಜದ ಅಸ್ತಿತ್ವಕ್ಕೆ ಹೋರಾಡಬೇಕಾಗಿದ್ದು, ಕಾನೂನು ಪರಿಪಾಲನೆ ಎಲ್ಲರ ಕರ್ತವ್ಯವಾಗಿದೆ. ಸಂವಿಧಾನ ಮುರಿಯಲು ರಾಜಕೀಯ ಪಕ್ಷಗಳ ಮುಖಂಡರು ಮುಂದಾಗಿದ್ದು, ಅದಕ್ಕೆ ನಾವುಗಳು ಅವಕಾಶ ಮಾಡಿಕೊಡಬಾರದು. ಶಿಕ್ಷಕರು ಮುಂದಿನ ಪೀಳಿಗೆಯ ಶಿಲ್ಪಿಗಳಾಗಿ ರೂಪುಗೊಳ್ಳಬೇಕೆಂದು ತಿಳಿಸಿದರು.

ಮಂಜಯ್ಯಶೆಟ್ಟಿ ನರಸಿಂಹಶೆಟ್ಟಿ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಬಿ.ಎಸ್‌.ಶಿವರುದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನದ ಚೌಕಟ್ಟಿನಲ್ಲಿರುವ ಕಾನೂನನ್ನು ಎಲ್ಲರೂ ಗೌರವಿಸುವುದರ ಜೊತೆಗೆ ಪಾಲಿಸಬೇಕು ಎಂದು ಹೇಳಿದರು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಸಿ.ಎಂ. ರಾಜೇಶ್‌ ಮಾತನಾಡಿದರು. ವಕೀಲ ಕೆ.ಎನ್‌. ಚಂದ್ರಶೇಖರ್‌ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ವಿಕ್ಟಿಮ್‌ ಕಾಂಪೆನ್‌ಸೇಷನ್‌ ಸ್ಕೀಮ್‌ ಬಗ್ಗೆ ಉಪನ್ಯಾಸ ನೀಡಿದರು. ದೈಹಿಕಶಿಕ್ಷಕ ಬೆಳ್ಳಿಯಪ್ಪ ಸ್ವಾಗತಿಸಿದರು. ಅಮೃತ ನಿರೂಪಿಸಿದರು. ಉಪನ್ಯಾಸಕ ಬಿ.ಎನ್‌. ನಾಗೇಶ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next