ನವದೆಹಲಿ: ಕಳೆದ 6 ವರ್ಷಗಳಲ್ಲಿ ಮೂರನೇ ಬಾರಿಗೆ ಅಂಟಾರ್ಕ್ಟಿಕ್ ಸಮುದ್ರದ ಮಂಜುಗಡ್ಡೆ ಮಟ್ಟವು ದಾಖಲೆ ಮಟ್ಟದಲ್ಲಿ ಇಳಿಕೆಯಾಗಿದ್ದು, ಇದು ಧ್ರುವೀಯ ವಿಜ್ಞಾನಿಗಳನ್ನು ಬೆಚ್ಚಿಬೀಳಿಸಿದೆ.
4 ದಶಕಗಳಿಂದಲೂ ಅಂಟಾರ್ಕ್ಟಿಕ್ ಸಮುದ್ರದ ಮಂಜುಗಡ್ಡೆ ಕುರಿತು ಉಪಗ್ರಹ ಪರಿವೀಕ್ಷಣೆ ನಡೆದಿದ್ದು, ಕಳೆದ ವಾರ ದಾಖಲಾದಷ್ಟು ಕಡಿಮೆ ಪ್ರಮಾಣದ ಮಂಜುಗಡ್ಡೆ ಹಿಂದೆಂದೂ ಕಂಡುಬಂದಿಲ್ಲ ಎಂದು “ದಿ ಗಾರ್ಡಿಯನ್’ ವರದಿ ಮಾಡಿದೆ.
2022ರ ಫೆ.25ರಂದು ಮಂಜುಗಡ್ಡೆ ಪ್ರಮಾಣವು 1.92 ದಶಲಕ್ಷ ಚದರ ಕಿ.ಮೀ.ಗೆ ಇಳಿದಿತ್ತು. 1979ರಿಂದ ಆರಂಭವಾದ ಉಪಗ್ರಹ ಪರಿವೀಕ್ಷಣೆಯ ಆಧಾರದಲ್ಲಿ ನೋಡಿದರೆ, ಇದು ಸಾರ್ವಕಾಲಿಕ ಇಳಿಕೆ. ಪ್ರಸಕ್ತ ವರ್ಷದ ಫೆ.25ರಂದು ಈ ದಾಖಲೆ ಕೂಡ ಮುರಿದು, ಸಮುದ್ರದ ಮಂಜುಗಡ್ಡೆ ಮಟ್ಟ 1.79 ದಶಲಕ್ಷ ಚದರ ಕಿ.ಮೀ.ಗೆ ತಲುಪಿದೆ. ಈ ಹಿಂದಿನ ದಾಖಲೆ ವೇಳೆ ಮಂಜುಗಡ್ಡೆ ಮಟ್ಟದ ಇಳಿಕೆಯು 1,36,000 ಚದರ ಕಿ.ಮೀ. ಆಗಿತ್ತು. ಇದು ಆಸ್ಟ್ರೇಲಿಯಾದ ದ್ವೀಪ ರಾಜ್ಯ ತಾಸ್ಮೇನಿಯಾದ ಒಟ್ಟು ಗಾತ್ರದ ದುಪ್ಪಟ್ಟು ಪ್ರಮಾಣಕ್ಕೆ ಸಮ.
ಸಮುದ್ರದ ಮಂಜುಗಡ್ಡೆ ಪ್ರಮಾಣದ ಕರಗುವಿಕೆ ಮತ್ತು ಸಮುದ್ರದ ಮಟ್ಟ ಏರಿಕೆಯ ನಡುವೆ ಪರೋಕ್ಷ ಸಂಬಂಧವಿದೆ. ಅಂಟಾರ್ಕ್ಟಿಕ್ ಖಂಡದ ಪಶ್ಚಿಮದಲ್ಲಿರುವ ಅಮಂಡ್ಸನ್ ಮತ್ತು ಬೆಲ್ಲಿಂಗಾಸನ್ ಸಮುದ್ರಗಳಲ್ಲಿ ಮಂಜುಗಡ್ಡೆಯ ಭಾರೀ ಕರಗುವಿಕೆಯು ಕಳವಳಕಾರಿ. ಏಕೆಂದರೆ, ಈ ಪ್ರದೇಶದಲ್ಲೇ ಥ್ವೈಟ್ಸ್ ಎಂಬ ನೀರ್ಗಲ್ಲು (ಇದನ್ನು ಡೂಮ್ಸ್‌ಡೇ ಗ್ಲೆಷಿಯರ್ ಎಂದೂ ಕರೆಯುತ್ತಾರೆ) ಇದೆ. ಇದರಲ್ಲಿ ಸಮುದ್ರ ಮಟ್ಟವನ್ನು ಅರ್ಧ ಮೀಟರ್‌ನಷ್ಟು ಏರಿಸುವಷ್ಟು ಪ್ರಮಾಣದ ನೀರಿದೆ ಎನ್ನುತ್ತಾರೆ ವಿಜ್ಞಾನಿಗಳು.