Advertisement

ಪ್ರತಿಯೊಬ್ಬರಿಗೂ ಅರ್ಥ ವ್ಯವಸ್ಥೆ ಅರಿವು ಅಗತ್ಯ

11:55 AM Jul 31, 2018 | |

ಚಿಕ್ಕಬಳ್ಳಾಪುರ: ದೇಶ ಎಷ್ಟೇ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿಗೊಂಡರೂ ಆರ್ಥಿಕವಾಗಿ ಸದೃಢಗೊಳ್ಳಬೇಕಾದರೆ ಪ್ರತಿಯೊಬ್ಬರಿಗೂ ದೇಶದ ಅರ್ಥ ವ್ಯವಸ್ಥೆಯ ಅರಿವು ಅಗತ್ಯ. ಹೀಗಾಗಿ ವಿದ್ಯಾರ್ಥಿಗಳನ್ನು ಅರ್ಥಶಾಸ್ತ್ರದ ಅಧ್ಯಯನದ ಕಡೆಗೆ ಹೆಚ್ಚು ಉತ್ತೇಜನಗೊಳಿಸುವ ಕೆಲಸ ವನ್ನು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರು ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಜನಾರ್ದನ್‌ ತಿಳಿಸಿದರು.

Advertisement

ನಗರದ ಬೆಸ್ಟ್‌ ಪಿಯು ಕಾಲೇಜಿನಲ್ಲಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಅರ್ಥಶಾಸ್ತ್ರದ ಉಪನ್ಯಾಸಕರಿಗೆ ಅರ್ಥಶಾಸ್ತ್ರ ವಿಷಯಾಧಾರಿತವಾಗಿ ನಡೆದ ಏಳು ದಿನಗಳ ವಿಶೇಷ ಕಾರ್ಯಾಗಾರವನ್ನು ಉದ್ಘಾ ಟಿಸಿದ ಅವರು ಮಾತನಾಡಿ, ದೇಶ ಆರ್ಥಿಕವಾಗಿ ಮೊದಲು ಸದೃಢ ಆದರೆ ಮಾತ್ರ ಸಾಮಾಜಿಕ, ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ದೇಶದ ಆರ್ಥಿಕ ವ್ಯವಸ್ಥೆ ಆಗುಹೋಗಗಳ ಬಗ್ಗೆ ಚಿಂತನೆ ನಡೆಸಬೇಕು ಎಂದರು.

ಜೀವನೋಪಾಯಕ್ಕೆ ಅರ್ಥಶಾಸ್ತ್ರ ಅನುಕೂಲ: ಬಹಳಷ್ಟು ಮಂದಿಗೆ ಅರ್ಥಶಾಸ್ತ್ರದ ಮಹತ್ವ ಗೊತ್ತಿಲ್ಲ. ದೇಶದ ಅರ್ಥಿಕ ವ್ಯವಸ್ಥೆಗೆ ಆಧಾರವಾಗಿರುವ ಅರ್ಥಶಾಸ್ತ್ರ ಪ್ರತಿಯೊಬ್ಬರಿಗೂ ಜೀವನದ ಪಾಠ ಕಲಿಸುತ್ತದೆ. ಜೀವನದಲ್ಲಿ ಆರ್ಥಿಕ ಶಿಸ್ತು ಇಲ್ಲದೇ ಯಾವುದೇ ವ್ಯಕ್ತಿಯ ಅಥವಾ ಕುಟುಂಬದ ಬೆಳೆವಣಿಗೆ ಆಗಲು ಸಾಧ್ಯವಿಲ್ಲ. ಆರ್ಥಿಕವಾಗಿ ಸ್ವಯಂ ಶಿಸ್ತು ಇಲ್ಲದೇ ಎಷ್ಟೋ ಕುಟುಂಬಗಳು ಇಂದಿಗೂ ಬಡತನದ ಬೇಗುದಿಯಲ್ಲಿ ನರಳಾಡುತ್ತಿವೆ.

ದೇಶದ ಸಮಗ್ರ ಅಭಿವೃದ್ಧಿ ಇಂದು ಅರ್ಥ ವ್ಯವಸ್ಥೆಯ ಮೇಲೆ ನಿಂತಿದೆ. ವಿದ್ಯಾರ್ಥಿಗಳಲ್ಲಿ ಅರ್ಥಶಾಸ್ತ್ರದ ಬಗ್ಗೆ ಆಸಕ್ತಿ ಬೆಳೆಸುವುದು ಅಗತ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಜೀವನೋಪಾಯಕ್ಕೆ ಅರ್ಥಶಾಸ್ತ್ರ ಹೆಚ್ಚು ಅನುಕೂಲ ಕಲ್ಪಿಸಿಕೊಡುತ್ತದೆ. ಅರ್ಥಶಾಸ್ತ್ರ ಬೋಧನೆ ಸುಲಭವಾದರೂ ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಉಪನ್ಯಾಸಕರು ವಿಶೇಷ ಬೋಧನಾ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. 

ವಿದ್ಯಾರ್ಥಿಗಳಿಗೆ ಸುಲಭ ಕಲಿಕೆ ಬೇಕು: ಮುಖ್ಯ ಅತಿಥಿಗಳಾಗಿದ್ದ ಗೌರಿಬಿದನೂರಿನ ಅರ್ಚಾಯ ಪಿಯು ಕಾಲೇಜಿನ ಪ್ರಾಂಶುಪಾಲ ಬಿ.ಎಸ್‌. ರಾಜಶೇಖರ್‌ ಮಾತನಾಡಿ, ಮನುಷ್ಯ ಜೀವನದಲ್ಲಿ ಉತ್ತಮ ಪ್ರಗತಿ ಸಾಧಿಸಬೇಕಾದರೆ ಅರ್ಥಶಾಸ್ತ್ರದ ಬಗ್ಗೆ ಕನಿಷ್ಠ ತಿಳುವಳಿಕೆ ಹೊಂದಿರಬೇಕು. ಅರ್ಥಶಾಸ್ತ್ರ ವಿಷಯದಲ್ಲಿ ಉಪನ್ಯಾಸಕರಿಗೆ ಎಷ್ಟೇ ಅನುಭವ ವಿದ್ದರೂ ವಿದ್ಯಾರ್ಥಿಗಳಿಗೆ ಸುಲಭವಾಗಿ ಕಲಿಸುವ ಅಗತ್ಯವಿದೆ. ಇದರಿಂದ ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವ್ಯವಹಾರ ಅಧ್ಯಯನ ಹಾಗೂ ಅರ್ಥಶಾಸ್ತ್ರ ಅಧ್ಯಯನಕ್ಕೆ ದೇಶದಲ್ಲಿ ಸಾಕಷ್ಟು ಮಹತ್ವವಿದ್ದು, ವಿದ್ಯಾರ್ಥಿಗಳು ಅರ್ಥಶಾಸ್ತ್ರ ಅಧ್ಯಯನಕ್ಕೆ ವಿಶೇಷ ಆದ್ಯತೆ ನೀಡುವ ಮೂಲಕ ತಮ್ಮ ಆರ್ಥಿಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.

Advertisement

ಕಾರ್ಯಾಗಾರದ ಅಧ್ಯಕ್ಷತೆಯನ್ನು ಬೆಸ್ಟ್‌ ಪಿಯು ಕಾಲೇಜಿನ ಪ್ರಾಂಶುಪಾಲ ಪಿ.ರಘುನಾಥ ವಹಿಸಿದ್ದರು. ವೇದಿಕೆಯಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಎಸ್‌.ಎನ್‌.ಮುಂಜುನಾಥ್‌, ಶಿಡ್ಲಘಟ್ಟದ ಮಳ್ಳೂರು ವಿವೇಕಾನಂದ ಪಿಯು ಕಾಲೇಜಿನ ಸಹ ಸಂಯೋಜಕ ಜಿ.ಎಂ. ಚಂದ್ರಕುಮಾರ್‌, ಗೌರಿಬಿದನೂರು ಸರ್ಕಾರಿ ಪಿಯು ಕಾಲೇಜಿನ ಸಂಯೋಜಕ ಆರ್‌.ಆದಿಶೇಷರಾವ್‌, ಬಾಗೇಪಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮಿತಿ ಸದಸ್ಯ ಬಿ. ಮಂಜುನಾಥ್‌ ಸೇರಿದಂತೆ ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳಿಂದ ಆಗಮಿಸಿದ್ದ ಅರ್ಥಶಾಸ್ತ್ರದ ಉಪನ್ಯಾಸಕರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಉಪನ್ಯಾಸಕರು ಶ್ರಮಿಸುವ ಮೂಲಕ ಸಮಾಜದಲ್ಲಿ ತಮಗೆ ಇರುವ ಗೌರವ ಕಾಪಾಡಿಕೊಳ್ಳಬೇಕು. ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಕಾಲೇಜುಗಳಿಗೆ ಬರುತ್ತಿದ್ದಾರೆ. ಅವರನ್ನು ಉಪನ್ಯಾಸಕರು ತಮ್ಮ ಮಕ್ಕಳು ಎಂಬ ಭಾವನೆಯಿಂದ ನೋಡಿಕೊಳ್ಳಬೇಕಿದೆ. ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಕುಸಿಯುತ್ತಿದ್ದು, ಫ‌ಲಿತಾಂಶದಲ್ಲಿ ಇಳಿಕೆ ಕಂಡು ಬರುತ್ತಿದೆ. ಈ
ಬಗ್ಗೆ ಗಂಭೀರ ಚಿಂತನೆ ಮಾಡಬೇಕು.
 ಎಸ್‌.ಜನಾರ್ದನ್‌, ಉಪ ನಿರ್ದೇಶಕರು, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next