ಹೊಸಕೋಟೆ: ಪ್ರತಿಯೊಬ್ಬ ನಾಗರೀಕ ಪ್ರಜೆಯೂ ಕಾನೂನಿನ ಬಗ್ಗೆ ತಿಳಿವಳಿಕೆ ಹೊಂದಬೇಕಾದ್ದು ಅಗತ್ಯವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ವಿನಾಯಕ ಎನ್. ಮಾಯಣ್ಣನವರ್ ಹೇಳಿದರು. ಅವರು ನಗರದ ನ್ಯಾಯಾಲಯದ ಆವರಣದಲ್ಲಿ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲಾ ವರ್ಗದವರಿಗೂ ಕಾನೂನಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕಿನಾದ್ಯಂತ ಡಿ.9 ರಿಂದ ಡಿ.12ರವರೆವಿಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸ್ವಸ್ಥ ಸಮಾಜ ನಿರ್ಮಾಣಗೊಳ್ಳಲು ಪ್ರತಿಯೊಬ್ಬರೂ ಕಾನೂನನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು.
ಈ ಉದ್ದೇಶದಿಂದ ಜಾಗೃತಿ ಮೂಡಿಸಲು ಸಂಪನ್ಮೂಲ ವ್ಯಕ್ತಿಗಳಿಂದ ಮೋಟಾರು ವಾಹನ ಕಾಯಿದೆ, ರಸ್ತೆ ಸುರಕ್ಷತೆ, ಭಾರತದ ಸಂವಿಧಾನ, ಪರಿಸರ ಸಂರಕ್ಷಣೆ, ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ, ಫೋಕ್ಸೋ ಕಾಯಿದೆ, ಬಾಲಾಪರಾಧಿ ನ್ಯಾಯ ಕಾಯಿದೆ, ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮ, ನ್ಯಾಯಾಲಯಗಳ ಸ್ಥಾಪನೆ ಮತ್ತು ಕಾರ್ಯನಿರ್ವಹಣೆ, ಸಕಾಲ,
ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ದೂರುಗಳ ಪ್ರಾಧಿಕಾರ, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು, ಕಾರ್ಮಿಕರ ಸವಲತ್ತುಗಳು, ರಾಜಿ ಸಂಧಾನ, ಪರಿಸರ ಮಾಲಿನ್ಯ ತಡೆಗಟ್ಟುವಿಕೆ, ಸ್ವತ್ತು ಹಸ್ತಾಂತರ ಕಾಯಿದೆ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ, ಸಾಮಾನ್ಯ ಕಾನೂನುಗಳ ಬಗ್ಗೆ ಉಪನ್ಯಾಸ ಸಹ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಆರ್.ಬಿ.ಗಿರೀಶ್, ಸಹಾಯಕ ಸರಕಾರಿ ಅಭಿಯೋಜಕ ಎಂ.ಎಲ್. ಚಂದ್ರಾರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಸುಬ್ರಮಣಿ, ಪದಾಧಿಕಾರಿಗಳಾದ ಎಸ್.ಎಂ.ಹನುಮಂತರಾವ್, ಕೆ.ರಮೇಶ್, ಟಿ.ವಿ. ಆಂಜಿನಪ್ಪ, ಎಸ್. ಶ್ರೀನಿವಾಸ್ ಮುಂತಾದವರು ಭಾಗವಹಿಸಿದ್ದರು.