ಕುಂದಾಪುರ: ಮನುಷ್ಯನ ಹುಟ್ಟು, ಬದುಕು, ಸಾವು ಹಾಗೂ ಪರಿಸರಕ್ಕೂ ನಿಕಟ ಸಂಬಂಧವಿದೆ. ಪರಿಸರವಿಲ್ಲದ ಮನುಷ್ಯನ ಬದುಕು ಕಷ್ಟ. ಏಕೆಂದರೆ ತನ್ನ ಆಹಾರ, ಬಟ್ಟೆ, ವಸತಿ ಇದೆಲ್ಲದ್ದಕ್ಕೂ ಆತ ಪ್ರಕೃತಿಯ ಮೇಲೆ ಅವಲಂಬಿತನಾಗಿದ್ದಾನೆ. ಇದರಿಂದಾಗಿ ಪರಿಸರದ ಮೇಲೆ ಹೆಚ್ಚಿನ ಒತ್ತಡ ಬಿದ್ದು, ಸಾಕಷ್ಟು ಅಸಮತೋಲನಗಳಾಗಿವೆ. ಸುಸ್ಥಿರ ಪರಿಸರ ಅಭಿವೃದ್ಧಿಯ ಜತೆಗೆ ಜೀವ ವೈವಿಧ್ಯತೆ ಕಾಪಾಡುವುದು ನಮ್ಮೆಲ್ಲರ ಹೊಣೆ ಎಂದು ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ| ಕೆ. ಕೃಷ್ಣ ಹೇಳಿದರು.
ಅವರು ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಜು. 11ರಂದು ಇಕೋ ಕ್ಲಬ್‌ನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ| ದೋಮ ಚಂದ್ರಶೇಖರ್ ಮಾತನಾಡಿ, ಪರಿಸರ ಕಾಳಜಿ ಎನ್ನುವುದು ಪರಿಸರದ ಉಳಿವಿಗಾಗಿ ಎನ್ನುವುದಕ್ಕಿಂತಲೂ ಅದು ನಮ್ಮ ಉಳಿವಿಗಾಗಿ ಮಾಡುವ ಒಂದು ಹೋರಾಟ. ನಿಸರ್ಗ ಒಂದು ದೊಡ್ಡ ಪಾಠಶಾಲೆ. ಇಕೋ ಕ್ಲಬ್‌ನ ಮೂಲಕ ಪರಿಸರವನ್ನು ಗ್ರಹಿಸಬೇಕು, ಅನುಭವಿಸ ಬೇಕು ಹಾಗೂ ಆನಂದಿಸಬೇಕು ಎಂದವರು ತಿಳಿಸಿದರು.
ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ವಾಣಿಜ್ಯ ಉಪನ್ಯಾಸಕಿ ನಂದಾ ರೈ ಪರಿಚಯಿಸಿದರು. ವಾಣಿಜ್ಯ ಉಪನ್ಯಾಸಕಿ ಅವಿತಾ ಕೊರೈಯಾ ವಂದಿಸಿದರು. ಇಕೋ ಕ್ಲಬ್‌ನ ಸಂಯೋಜಕ ಸುಧೀರ್ ಕುಮಾರ್ ಹೇರಿಕುದ್ರು ಕಾರ್ಯಕ್ರಮ ನಿರೂಪಿಸಿದರು.