Advertisement

ಎಲ್ಲರ ಕಂಗಳಲ್ಲೂ ಕೆಂಪು ಚಂದಿರ

11:06 AM Feb 01, 2018 | |

ಬೆಂಗಳೂರು: ಬುಧವಾರ ಸಂಜೆ ಬಳಿಕ ನಗರದ ಬಹುತೇಕರ ಕಣ್ಣು ಆಕಾಶದತ್ತ ನೆಟ್ಟಿತ್ತು. ಸೂಪರ್‌ ಮೂನ್‌ಗಾಗಿ ಕಾತರದಿಂದ ಕಾಯುತಿತ್ತು. ಇದು ಚಂದ್ರ ಗ್ರಹಣದ ಪ್ರಭಾವ. 150 ವರ್ಷಗಳ ಬಳಿಕ ಸಂಭವಿಸುತ್ತಿರುವ ಚಂದ್ರ ಗ್ರಹಣ ನೋಡಲು ಸಂಜೆ 6 ಗಂಟೆಯಿಂದಲೇ ನಗರದ ಬಹುತೇಕರು ದೂರದರ್ಶಕ, ದುರ್ಬೀನುಗಳನ್ನು ಹಿಡಿದು ಮನೆ, ಬಹುಮಹಡಿ ಕಟ್ಟಡ, ಅಪಾರ್ಟ್‌ಮೆಂಟ್‌ ಮೇಲೇರಿ ಚಂದ್ರೋದಯಕ್ಕಾಗಿ ಕಾದು ಕುಳಿತಿದ್ದರು. ಸಂಜೆ 6.15ರ ಮೋಡದ ಮರೆಯಿಂದ ತುಸುಕಂದುಬಣ್ಣದ ಚಂದಮಾಮಾ ಉದಯಿಸುವುದನ್ನು ಸಾಮೂಹಿಕವಾಗಿ ಬರಿಗಣ್ಣಿನಿಂದ ನೋಡಿ ಖುಷಿ ಪಟ್ಟರು.

Advertisement

6.21ಕ್ಕೆ ಚಂದ್ರ ಪೂರ್ಣವಾಗಿ ಭೂಮಿಯ ನೆರಳು ಚಂದಿರನ ಆವರಿಸಿದ್ದರೂ, ಉದಯವಾಗುವಾಗಲೇ ಬಹುತೇಕ ಚಂದ್ರನ ಭಾಗ ಕೆಂಪು ಬಣ್ಣಕ್ಕೆ ತಿರುಗಿತ್ತು. ಇದನ್ನು ನೋಡಿ ಸಂತಸಪಟ್ಟ ಜನರು, ಕ್ಯಾಮೆರಾಗಳಲ್ಲಿ ಕೆಂಪು ಚಂದಿರನ ಸೆರೆ ಹಿಡಿದರು. ಗ್ರಹಣದ ಚಂದ್ರ ನೆರಳಿನಿಂದಾಗಿ ಕಪ್ಪಾಗಿರುತ್ತಾನೆ ಎಂದು ಭಾವಿಸಿದ್ದ ಜನರಿಗೆ ತುಸುಗೆಂಪು ಬಣ್ಣದ ಚಂದ್ರ ಅತ್ಛರಿ ಮೂಡಿಸಿದ್ದಾನೆ.

ನೆಹರು ತಾರಾಲಯದಲ್ಲಿ ಸೂಪರ್‌ ಮೂನ್‌ ಅಥವಾ ಬ್ಲಿಡ್‌ ಮೂನ್‌ ವೀಕ್ಷಣೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿದ್ದರು. ಖಗೋಳದ ವಿದ್ಯಮಾನಗಳನ್ನು ಬೃಹದಾಕಾರದ ದೂರದರ್ಶಕದ ಮೂಲಕ ವೀಕ್ಷಿಸಲು ಬೇಕಾದ ವ್ಯವಸ್ಥೆ ಮಾಡಿದ್ದರು. ಸಂಜೆ 5 ಗಂಟೆಯಿಂದಲೇ ಮಕ್ಕಳು, ಮಹಿಳೆಯರು ಹಾಗೂ ನಾಗರಿಕರು ಅಪಾರ ಸಂಖ್ಯೆಯಲ್ಲಿ ನೆಹರು ತಾರಾಲಯದಲ್ಲಿ ಸೇರಿದ್ದರು.

ನೆಹರೂ ತಾರಾಲಯದಲ್ಲಿ 5 ಟೆಲಿಸ್ಕೋಪ್‌ ಮತ್ತು 2 ಬೈನಾಕ್ಯುಲರ್‌ಗಳ ವ್ಯವಸ್ಥೆ ಮಾಡಲಾಗಿತ್ತು. ತಾರಾಲಯಕ್ಕೆ ಬಂದ ಸುಮಾರು 2 ಸಾವಿರ ಜನರು ಸಾಲಿನಲ್ಲಿ ನಿಂತು ಈ ಉಪಕರಣಗಳ ಮೂಲಕ ಚಂದ್ರ ಗ್ರಹಣ ವೀಕ್ಷಿಸಿದರು. 6.21ಕ್ಕೆ ಪೂರ್ಣ ಗ್ರಹಣವಾಗಿದ್ದರೂ, ಸಂಜೆ 6.56ರ ಸುಮಾರಿಗೆ ಚಂದ್ರ ಸ್ಪಷ್ಟವಾಗಿ ಕಾಣಿಸಿಕೊಂಡ. ಚಂದ್ರ ಇನ್ನಷ್ಟು ಮೇಲಕ್ಕೆ ಬರುತ್ತಿದ್ದಂತೆ ಬರಿಗಣ್ಣಿನಲ್ಲೇ ವೀಕ್ಷಿಸಿದರು.

ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕ, ಪೋಷಕರು, ಆಡಳಿತ ಮಂಡಳಿಯ ಸದಸ್ಯರು ಸಾಮೂಹಿಕವಾಗಿ ಗ್ರಹಣ ಹಿಡಿದ ಹುಣ್ಣಿಮೆ ಚಂದ್ರನ ವೀಕ್ಷಣೆ ಮಾಡಿದ್ದಾರೆ. ಹಾಗೆಯೇ ವಿವಿಧ ಸಂಘ, ಸಂಸ್ಥೆಗಳಿಂದ ಸಾಮೂಹಿಕವಾಗಿ ಚಂದ್ರನನ್ನು ನೋಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ.

Advertisement

ಚಂದಿರನೊಂದಿಗೆ ಸೆಲ್ಫಿ: ಗ್ರಹಣದ ಚಂದಿರನನ್ನು ಹತ್ತಿರದಿಂದ ನೋಡಬೇಕೆಂಬ ಬಯಕೆಯಿಂದ ಅನೇಕರು ತಮ್ಮ ಮೊಬೈಲ್‌ ಹಾಗೂ ಕ್ಯಾಮಾರದಲ್ಲಿ ಝೂಮ್‌ ಮಾಡಿ ಚಂದ್ರನನ್ನು ನೋಡಿದ್ದಾರೆ. ಇದೇ ವೇಳೆ ಚಂದ್ರನ ಜತೆ ಸೆಲ್ಫಿ ತೆಗೆದುಕೊಂಡರು. ನಂತರ ಅದನ್ನು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ ಸೇರಿದಂತೆ ಸಾಮಾಜಿಕ  ಲತಾಣದಲ್ಲಿ
ಸ್ಟೇಟಸ್‌ ಹಾಗೂ ಡಿಸ್‌ಪ್ಲೇ ಪಿಕ್ಚರ್‌ಯಾಗಿ(ಡಿಪಿ) ಮಾಡಿಕೊಂಡಿದ್ದರು.

ಸಿಹಿತಿಂಡಿ ಹಂಚಿಕೆ: ಗ್ರಹಣ ಸಂದರ್ಭದಲ್ಲಿ ಟೌನ್‌ಹಾಲ್‌ ಎದುರು ಪ್ರಗತಿಪರ ಸಂಘಟನೆಯ ಕಾರ್ಯಕರ್ತರು ಕಡ್ಲೆಪುರಿ, ಹೋಳಿಗೆ, ಜೂಸ್‌ ವಿತರಿಸಿದರು. ಗ್ರಹಣದ ಸಂದರ್ಭದಲ್ಲಿ ಏನನ್ನೂ ತಿನ್ನಬಾರದು ಎಂಬ ಆಚರಣೆಯನ್ನು ವಿರೋಧಿಸುವ ಸಲುವಾಗಿ ಸಾರ್ವಜನಿಕರಿಗೆ ಉಚಿತವಾಗಿ ತಿಂಡಿ ವಿತರಿಸಿದ್ದಾರೆ. ಹಾಗೆಯೇ ನಗರದ ಬಹುತೇಕ ಕಡೆಗಳಲ್ಲಿ ಸಾಮೂಹಿಕ ಚಂದ್ರ ಗ್ರಹಣ ವೀಕ್ಷಣೆಯ ನಂತರ ಟೀ, ಕಾಫಿ, ತಿಂಡಿ ಸವಿದಿದ್ದಾರೆ.

ಮನೆಯಲ್ಲೇ ಮಾಜಿ ಪ್ರಧಾನಿ ಪೂಜೆ 
ಬೆಂಗಳೂರು: ಚಂದ್ರಗ್ರಹಣ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ  ಚ್‌.ಡಿ.ದೇವೇಗೌಡರು ಪದ್ಮನಾಭನಗರದ ನಿವಾಸದಲ್ಲಿ ವಿಶೇಷ ಪೂಜೆ ಆಯೋಜಿಸಿದರೆ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ತಮಿಳುನಾಡಿನ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ಪ್ರತಿ ತಿಂಗಳ ಹುಣ್ಣಿಮೆಯಂದು ದೇವೇಗೌಡರು ತಮ್ಮ ನಿವಾಸದಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ನೆರವೇರಿಸಲಿದ್ದು, ಇಂದು ಹುಣ್ಣಿಮೆ ಹಾಗೂ ಚಂದ್ರಗ್ರಹಣ ಬಂದಿರುವುದರಿಂದ ವಿಶೇಷ ಪೂಜೆ ಸಲ್ಲಿಸಿದರು. ಗ್ರಹಣ ಹಿನ್ನೆಲೆಯಲ್ಲಿ ಹೊರಗೆ ಎಲ್ಲೂ ಹೋಗದ ದೇವೇಗೌಡರು ದಿನವಿಡೀ ತಮ್ಮ ನಿವಾಸದಲ್ಲೇ ಮುಖಂಡರ ಜತೆ ಸಮಾಲೋಚನೆಯಲ್ಲಿ ತೊಡಗಿದ್ದರು. ಮತ್ತೂಂದೆಡೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಗ್ರಹಣ ಹಿನ್ನೆಲೆಯಲ್ಲಿ ತಮಿಳುನಾಡಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದರು ಎಂದು ಹೇಳಲಾಗಿದೆ.

ಗ್ರಹಣದ ನಂತರ ದೇವಸ್ಥಾನಗಳ ಸ್ವಚತೆ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನದ ನಂತರ ನಗರದ ಬಹುತೇಕ ದೇವಸ್ಥಾನದಲ್ಲಿ ಯಾವುದೇ ಸೇವೆ ಇರಲಿಲ್ಲ. ಗವಿ ಗಂಗಾಧರೇಶ್ವರ ದೇವಸ್ಥಾನ, ಬಸವನಗುಡಿಯಡ್ಡಗಣೇಶ
ದೇವಸ್ಥಾನ, ಇಸ್ಕಾನ್‌, ಬನಶಂಕರಿ ದೇವಸ್ಥಾನ, ಕಾಡು ಮಲ್ಲೇಶ್ವರ ದೇವಸ್ಥಾನ, ರಾಗಿಗುಡ್ಡದ ಪ್ರಸನ್ನಾಂಜನೇಯ ದೇವಸ್ಥಾನ, ಕೋಟೆ ವೆಂಕಟೇಶ್ವರಸ್ವಾಮಿ ದೇವಸ್ಥಾನ ಸೇರಿ ಹಲವೆಡೆ ಗ್ರಹಣ ಮುಗಿದ ನಂತರ ದೇವಸ್ಥಾನ ಶುಚಿಗೊಳಿಸಿ, ವಿಶೇಷ ಪೂಜೆ ನಡೆಸಿದ್ದಾರೆ. ಬಹುತೇಕರು ಮನೆಗಳಲ್ಲಿ ಗ್ರಹಣದ ಹಿನ್ನೆಲೆಯಲ್ಲಿ ನೀರು ಸೇರಿದಂತೆ ಇತರೆ ಸಾಮಗ್ರಿಗೆ ಗರಿಕೆ ಹುಲ್ಲನ್ನು ಹಾಕಿದ್ದರು. ಗ್ರಹಣ ಮುಕ್ತಾಯದ ನಂತರ ಮನೆ ಸ್ವತ್ಛಮಾಡಿ, ಸ್ನಾನದ ನಂತರ ಬಿಸಿಯಾಗಿ ಆಹಾರ ತಯಾರಿಸಿಕೊಂಡು ಊಟ ಮಾಡಿದ್ದಾರೆ. ಗ್ರಹಣದ ಹಿನ್ನೆಲೆಯಲ್ಲಿ ಬುಧವಾರ ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ನಗರದ ಬಹುತೇಕ ಹೋಟೆಲ್‌ನಲ್ಲಿ ಗ್ರಾಹಕರೇ ಇರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next