Advertisement

ಪ್ರತಿ ವರ್ಷವೂ ತಪ್ಪದ ನೆರೆಯ ಹೊರೆ; ಕಾರ್ಯಕತವಾಗದ ಶಾಶ್ವತ ಪರಿಹಾರ

04:11 PM Jul 18, 2022 | Team Udayavani |

ದಾವಣಗೆರೆ: ಪ್ರತಿ ಬಾರಿ ಮಳೆಗಾಲದಲ್ಲಿ ತುಂಗಭದ್ರಾ ನದಿಯ ನೆರೆಯಿಂದಾಗಿ ಇನ್ನಿಲ್ಲದ ಸಮಸ್ಯೆ ಅನುಭವಿಸುವ ಹೊನ್ನಾಳಿಯ ಬಾಲರಾಜ್‌ಘಾಟ್‌, ಸಾಸ್ವೇಹಳ್ಳಿಯ ಕೆಲ ಭಾಗ, ಹರಿಹರದ ಗಂಗಾನಗರ, ಬೆಂಕಿನಗರದ ನಿವಾಸಿಗಳಿಗೆ ಈ ಕ್ಷಣಕ್ಕೂ ಶಾಶ್ವತ ಪರಿಹಾರ ಅಕ್ಷರಶಃ ಮರೀಚಿಕೆಯಾಗಿದೆ.

Advertisement

ಪ್ರತಿ ಮಳೆಗಾಲದಲ್ಲಿ ಜಿಲ್ಲೆಯ ಜೀವನದಿ ತುಂಗಭದ್ರೆಯಲ್ಲಿ ನೆರೆ ಉಂಟಾಗಿ ನೂರಾರು ಮನೆಗಳಿಗೆ ನೀರು ನುಗ್ಗುವುದು, ನಿವಾಸಿಗಳನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವುದು, ಸರ್ಕಾರ ನಿಮ್ಮ ಸಮಸ್ಯೆಯನ್ನು ಬಗೆಹರಿಸಲಿದೆ ಎಂಬ ಭರವಸೆ ನೀಡುವುದು ಪ್ರತೀತಿ ಇದೆ. ಪ್ರತಿ ಮಳೆಗಾಲದಲ್ಲಿ ಉಂಟಾಗುವ ನೆರೆಯ ಸಮಸ್ಯೆಗೆ ಶಾಶ್ವತ ಪರಿಹಾರ ಎಂಬುದು ಭರವಸೆ, ಮಾತುಗಳಲ್ಲೇ ಉಳಿದಿದೆ. ದಶಕಗಳೇ ಕಳೆದರೂ ಸಮಸ್ಯೆ ಈಗಲೂ ಸಮಸ್ಯೆಯಾಗಿಯೇ ಉಳಿದಿದೆ. ಜನರ ಪಾಲಿಗೆ ಶಾಶ್ವತ ಪರಿಹಾರ ಹಾವು ಸಾಯಲ್ಲ, ಕೋಲು ಮುರಿಯಲ್ಲ ಎನ್ನುವಂತಾಗಿದೆ.

ಹೊನ್ನಾಳಿ ಪಟ್ಟಣದ ಬಾಲರಾಜ್‌ಘಾಟ್‌ ಪ್ರತಿವರ್ಷ ನೆರೆಗೆ ತುತ್ತಾಗುತ್ತಲೇ ಇದೆ. ಮಳೆಗಾಲ ಪ್ರಾರಂಭವಾದರೆ ಇಲ್ಲಿನ ಜನರಿಗೆ ಸಮಸ್ಯೆಯೂ ಆರಂಭ.ಯಾವುದೇ ಕ್ಷಣದಲ್ಲಾದರೂ ತುಂಗಭದ್ರೆಯ ನೀರು ಮನೆಗಳಿಗೆ ನುಗ್ಗಬಹುದು ಎಂಬ ಆತಂಕದಿಂದಲೇ ಜೀವ ಕೈಯಲ್ಲಿ ಹಿಡಿದುಕೊಂಡು ಕಾಲ ಕಳೆಯಬೇಕಾಗುತ್ತದೆ. ಪ್ರತಿ ಮಳೆಗಾಲದಲ್ಲಿ ಸ್ಥಳಾಂತರದ ರೀತಿಯ ಸರ್ಕಸ್‌ ನಡೆಯುತ್ತಲೇ ಇರುತ್ತದೆ. ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ಗಾಢಪ್ರಯತ್ನ ನಡೆದಿಲ್ಲ ಎನ್ನುವುದಕ್ಕೆ ಈ ವರ್ಷವೂ ಬಾಲರಾಜಘಾಟ್‌ ಜನರು ನೆರೆಗೆ ತುತ್ತಾಗಿರುವುದೇ ಜ್ವಲಂತ ಸಾಕ್ಷಿ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಬಾಲರಾಜ್‌ ಘಾಟ್‌ ಜನರು ಅನುಭವಿಸುತ್ತಿರುವ ಸಮಸ್ಯೆಗೆ ಶಾಶ್ವತವಾದ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮಲ್ಲೇದೇವರಕಟ್ಟೆ ಬಳಿ 29.5 ಎಕರೆ ಜಾಗದಲ್ಲಿ ಮನೆ ಒದಗಿಸಲಾಗುವುದು ಮತ್ತು ನದಿ ನೀರು ನುಗ್ಗಿ ಬರುವುದನ್ನು ತಡೆಯಲು 400 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅಲ್ಲದೆ ಏನೇ ಆಗಲಿ, ಸ್ಥಳಾಂತರ ಮಾಡಿಯೇ ತೀರಲಾಗುವುದು ಎಂದಿರುವುದು ನಿವಾಸಿಗಳಲ್ಲಿ ಆಶಾಭಾವನೆ ಮೂಡಿಸಿದೆ. ಭರವಸೆ ನಿಜವಾಗಿಯೂ ಕಾರ್ಯರೂಪಕ್ಕೆ ಬರಲಿ ಎಂಬ ನಿರೀಕ್ಷೆ ಇಲ್ಲಿನ ಜನರದ್ದಾಗಿದೆ.

ಹರಿಹರದ ಗಂಗಾನಗರ, ಬೆಂಕಿನಗರಗಳ ಜನರು ಸಹ ಪ್ರತಿ ಮಳೆಗಾಲದಲ್ಲಿ ನೆರೆಯ ಸಮಸ್ಯೆಗೆ ಸಿಲುಕುವಂತಾಗಿದೆ. ತುಂಗ ಭದ್ರಾ ನೀರು ಮನೆಗಳಿಗೆ ನುಗ್ಗಿ ಬರುವುದರಿಂದ ಕಾಳಜಿ ಕೇಂದ್ರಕ್ಕೆ ಹೋಗುವುದು, ನೀರಿನ ಪ್ರಮಾಣ ಕಡಿಮೆ ಆಗುತ್ತಿರುವಂತೆ ಮನೆಗಳಿಗೆ ವಾಪಸ್‌ ಆಗುವುದು ಸಂಪ್ರದಾಯದಂತಾಗಿದೆ. ಗಂಗಾನಗರ ಮತ್ತು ಬೆಂಕಿನಗರಗಳ ಕೆಲವು ಜನರಿಗೆ ಬೇರೆ ಕಡೆ ನಿವೇಶನ ಒದಗಿಸುವ ಪ್ರಯತ್ನ ನಡೆದಿದೆ. ಆದರೆ ಹಲವರಲ್ಲಿ ಅಲ್ಲಿಗೆ ತೆರಳುವ ಇರಾದೆ ಇಲ್ಲ. ಪ್ರತಿ ವರ್ಷ ಉಂಟಾಗುವ ಪ್ರವಾಹ ಪರಿಸ್ಥಿತಿಗೆ ಶಾಶ್ವತ ಪರಿಹಾರ ಒದಗಿಸಲು 15 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗೆ ಅನುಮೋದನೆ ದೊರೆತು ಕೆಲಸ ಪ್ರಾರಂಭ ಆಗುವುದನ್ನ ಜನರ ಕಾಯುತ್ತಿದ್ದಾರೆ.

Advertisement

ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಅಪಾಯದ ಮಟ್ಟ ಮುಟ್ಟುತ್ತಿದ್ದಂತೆಯ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಕ್ಕಡಗಾತ್ರಿಗೆ ಬಹುತೇಕ ಅಕ್ಕಪಕ್ಕದ ಊರುಗಳ ಸಂಪರ್ಕ ಕಡಿತವಾಗುತ್ತದೆ. ಉಕ್ಕಡಗಾತ್ರಿ ಮತ್ತು ಫತೇಪುರ, ಉಕ್ಕಡಗಾತ್ರಿ- ತಿಮ್ಮೇನಹಳ್ಳಿ, ತುಮ್ಮಿನಕಟ್ಟೆ ರಸ್ತೆಗಳು ಸಹ ಸಂಪೂರ್ಣ ಮುಳುಗಡೆಗೆ ಒಳಗಾಗುತ್ತವೆ. ಕೆಲವೊಮ್ಮೆ ಉಕ್ಕಡಗಾತ್ರಿ ಜಲದಿಗ್ಭಂಧನಕ್ಕೂ ಒಳಗಾಗುತ್ತದೆ. ಒಮ್ಮೆ ಹಲವಾರು ದಿನಗಳ ಕಾಲ ಇಡೀ ಊರು ನೀರಿನಲ್ಲಿ ಮುಳುಗಿತ್ತು.

ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಉಕ್ಕಡಗಾತ್ರಿ ಜನರು ಮಳೆಗಾಲದಲ್ಲಿ ಅನುಭವಿಸುವ ಸಮಸ್ಯೆ ಬಗೆಹರಿಸಲು ಸೂಕ್ತ ಪ್ರಯತ್ನ ನಡೆದಿಲ್ಲ. ಹರಿಹರ ತಾಲೂಕಿನ ಚಿಕ್ಕಬಿದರೆ-ಸಾರಥಿ ನಡುವಿನ ಸೇತುವೆ ಮುಳುಗಡೆಯೂ ಸಮಸ್ಯೆಯಾಗಿಯೇ ಉಳಿದಿವೆ. ತುಂಗಭದ್ರಾ ನದಿ ಉಕ್ಕಿ ಹರಿದರೆ ಜಿಲ್ಲೆಯ 50ಕ್ಕೂ ಹೆಚ್ಚು ಗ್ರಾಮದಲ್ಲಿ ಸಮಸ್ಯೆ ಎದುರಾಗುತ್ತದೆ. ಮುಖ್ಯವಾಗಿ ನೆರೆಯಿಂದ ತತ್ತರಿಸಿ ಹೋಗುವ ಬಾಲರಾಜ್‌ಘಾಟ್‌, ಗಂಗಾನಗರ, ಬೆಂಕಿನಗರದ ಸಮಸ್ಯೆಯನ್ನು ಶಾಶ್ವತವಾಗಿ ಬಗೆ ಹರಿಸುವ ದಿಟ್ಟ ಕೆಲಸ ಪ್ರಾಮಾಣಿಕವಾಗಿ ನಡೆಯಬೇಕಿದೆ.

ಹೊನ್ನಾಳಿ ಪಟ್ಟಣದ ಬಾಲರಾಜ್‌ ಘಾಟ್‌ನಲ್ಲಿ ವಾಸಿಸುತ್ತಿರುವ ಜನರಿಗೆ ಮಲ್ಲೇದೇವರಕಟ್ಟೆ ಗ್ರಾಮದ ಬಳಿ 29.2 ಎಕರೆ ಜಮೀನಿನಲ್ಲಿ ಲೇಔಟ್‌ ಮಾಡಿ ಸೂರು ಕೊಡುವ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಹಿಂದೆ ಇಲ್ಲಿನ ಜನರಿಗೆ ತುಂಗಭದ್ರ ಬಡಾವಣೆಯಲ್ಲಿ ಮನೆ ಕಟ್ಟಿಸಿಕೊಡಲಾಗಿದೆ. ಈ ಭಾಗದಲ್ಲಿ ಜನರು ನಮಗೆ ಮನೆ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ಯಾರಿಗೆ ಮನೆಗಳನ್ನು ಕೊಟ್ಟಿಲ್ಲವೋ ಸಂಪೂರ್ಣ ತನಿಖೆ ಮಾಡಿಸಿ ಪಟ್ಟಿ ಮಾಡಿ ಸೂರಿಲ್ಲದವರಿಗೆ ಸೂರು ನೀಡುವ ವ್ಯವಸ್ಥೆ ಮಾಡಲಾಗುವುದು. ಬಾಲರಾಜ್‌ಘಾಟ್‌ ಸೇರಿದಂತೆ ಇತರ ನದಿ ತಟದಲ್ಲಿ ತಡೆಗೋಡೆ ನಿರ್ಮಿಸಲು 400 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಎಂ.ಪಿ. ರೇಣುಕಾಚಾರ್ಯ,
ಸಿಎಂ ರಾಜಕೀಯ ಕಾರ್ಯದರ್ಶಿ

*ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next