Advertisement

ಎಲ್ಲೆಡೆ ಸಂಭ್ರಮದ ಗೌರಿ ಪೂಜೆ

11:53 AM Sep 13, 2018 | |

ಬೆಂಗಳೂರು: ನಗರದಲ್ಲಿ ಸಡಗರ ಸಂಭ್ರಮದಿಂದ ಗೌರಿ ಪೂಜಿಸಲಾಯಿತು. ಭಾದ್ರಪದ ಮಾಸದ ಶುಕ್ಲ ಪಕ್ಷದ
ತದಿಗೆಯಂದು ಆಚರಿಸುವ ಗೌರಿ ಹಬ್ಬ ಹೆಂಗೆಳೆಯರ ಪಾಲಿಗೆ ಬಹು ಶ್ರೇಷ್ಠ. ಗೌರಿ ಕುಳ್ಳಿರಿಸುವ ಮಹಿಳೆಯರು ಮುಂಜಾನೆಯೇ ಎದ್ದು ಮಡಿಬಟ್ಟೆ ಉಟ್ಟು ಕಳಶಕ್ಕೆ ಅರಿಶಿನ ಮತ್ತು ಕುಂಕುಮ ಬಳಿದು, ಅಕ್ಷತೆ ಮತ್ತು ನಾಣ್ಯಗಳನ್ನು
ಅದಕ್ಕೆ ಹಾಕಿ, ಹೂವಿನಿಂದ ಅಲಂಕಾರ ಮಾಡಿ ಕಳಸ ಪ್ರತಿಷ್ಠಾಪಿಸಿದರು. ಇನ್ನೂ ಕೆಲವು ಮಹಿಳೆಯರು ಅರಿಶಿಣದಿಂದ ಮಾಡಿದಂತಹ ಗೌರಿ ಮೂರ್ತಿಯನ್ನು ಇಟ್ಟು ಪೂಜೆ ಮಾಡಿದರು. ಹಣ್ಣುಗಳು, ಪಾಯಸ, ಸಿಹಿ ಪದಾರ್ಥಗಳಿಂದ ದೇವರಿಗೆ ನೈವೇದ್ಯ ಮಾಡಿದರು. ಸಂಜೆ ವೇಳೆಗೆ ದೇವಾಲಯಗಳಿಗೆ ತೆರಳಿ ಬಾಗಿನ ಅರ್ಪಿಸಿದರು.

Advertisement

ಹೆಣ್ಣು ಮಕ್ಕಳ ಹಬ್ಬವಾದ ಗೌರಿ ಹಬ್ಬದಂದು ತವರು ಮನೆಯಿಂದ ಬಾಗಿನ ಕೊಡುವುದು ಸಂಪ್ರದಾಯವಾಗಿದೆ. ಅದರಂತೆ ಮಹಿಳೆಯರು ತಮ್ಮ ತವರುಮನೆಯಿಂದ ಬಾಗಿನ ಪಡೆದುಕೊಂಡದಲ್ಲದೆ, ತಮ್ಮ ಮನೆಯ ಹೆಣ್ಣು ಮಕ್ಕಳಿಗೂ ಬಾಗಿನ ನೀಡಿ ಸಂಭ್ರಮಪಟ್ಟರು. ಹೊಸದಾಗಿ ವಿವಾಹವಾದ ಹೆಣ್ಣು ಮಕ್ಕಳು ತವರು ಮನೆಯಲ್ಲಿ ಗೌರಿ ಪೂಜೆ ಮಾಡಿದರು.
 
ದೇವಾಯಗಳಲ್ಲಿ ವಿವಿಧ ಪೂಜೆ: ರಾಗೀಗುಡ್ಡದ ಶ್ರೀಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ, ಗವಿಪುರದ ಶ್ರೀಗವಿ ಗಂಗಾಧರೇಶ್ವರ ದೇವಸ್ಥಾನ, ಅಂಬಾ ಭವಾನಿ, ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ದೇವಸ್ಥಾನ,
ಬನಶಂಕರಿಯ ಬನಶಂಕರಿಮ್ಮ ದೇವಸ್ಥಾನ, ಬಸವ ನಗುಡಿಯ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಸೇರಿದಂತೆ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಲಾಯಿತು. ದೇವಾಲಯಕ್ಕೆ ಆಗಮಿಸಿದ ಕೆಲ ಮಹಿಳೆಯರಿಗೆ ಬಾಗಿನ ನೀಡಲಾಯಿತು.

ನಗರದ ಹಲವು ದೇವಿ ದೇವಾಲಯಗಳಲ್ಲಿ ದೇವಿಗೆ ಬಳೆಲಂಕಾರ, ಮಂಗಳಗೌರಿ ಅಲಂಕಾರ, ಅರಿಶಿಣದ ಅಲಂಕಾರ, ಪಾವರ್ತಿ ಅಲಂಕಾರ, ಗಿರಿಜಾ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದಲೇ ದೇವಾಲಯಗಳಲ್ಲಿ
ಭಕ್ತರು ದೇವರ ದರ್ಶನಕ್ಕೆ ತೆರಳುತ್ತಿದ್ದರು.  

ಗೌರಿ ಪೂಜೆಯಲ್ಲಿ ಮುಸ್ಲಿಂ ಮಹಿಳೆಯರು ಬಿಬಿಎಂಪಿ ಸದಸ್ಯೆ ಎಚ್‌.ಸಿ.ನಾಗರತ್ನ ರಾಮಮೂರ್ತಿ ಅವರು ತಮ್ಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಗೌರಿ ಪೂಜೆಯಲ್ಲಿ ನಟಿ ತಾರಾ ಅನುರಾಧಾ, ಮಾಳವಿಕಾ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಮುಸ್ಲಿಂ ಮಹಿಳೆಯರು ಪೂಜೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಎಲ್ಲರಿಗೂ ಬಾಗಿನ ಸಮರ್ಪಣೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next