Advertisement

ಸಭೆಯಲ್ಲಿ ಪ್ರತಿಧ್ವನಿಸಿದ ಬೀದಿ ನಾಯಿ ದಾಳಿ ಪ್ರಕರಣ

09:13 PM Feb 11, 2020 | Lakshmi GovindaRaj |

ಮೈಸೂರು: ನಂಜನಗೂಡಿನ ವಿದ್ಯಾನಗರದಲ್ಲಿ ಬೀದಿ ನಾಯಿ ಮಕ್ಕಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಪ್ರಕರಣ ಜಿಪಂ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿತು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾ.ರಾ.ನಂದೀಶ್‌ ವಿಷಯ ಪ್ರಸ್ತಾಪಿಸಿ ಕ್ರಮಕ್ಕೆ ಒತ್ತಾಯಿಸಿದರು.

Advertisement

ಈ ಬಗ್ಗೆ ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್‌.ವೆಂಕಟೇಶ್‌, ನಂಜನಗೂಡಿನ ವಿದ್ಯಾನಗರದಲ್ಲಿ ಬೀದಿನಾಯಿಗಳು ದಾಳಿ ನಡೆಸಿ 5 ರಿಂದ 7 ವರ್ಷ ವಯಸ್ಸಿನ ಐವರು ಮಕ್ಕಳಿಗೆ ತೀವ್ರ ಗಾಯವಾಗಿದ್ದು, ರೇಬಿಸ್‌ ನಿರೋಧಕ ಚುಚ್ಚುಮದ್ದು ನೀಡಲಾಗಿದೆ ಎಂದು ವಿವರಿಸಿದರು.

ಈ ಬಗ್ಗೆ ಮಾತನಾಡಿದ ಸಾ.ರಾ.ನಂದೀಶ್‌, ಬೀದಿ ನಾಯಿಗಳ ದಾಳಿ, ಚಚ್ಚುಮದ್ದು ದೊರೆಯದಿರುವ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಹೀಗಾಗಿ ಆನೆ ಗಣತಿ, ಹುಲಿ ಗಣತಿ ಮಾಡಿದಂತೆ ಬೀದಿ ನಾಯಿಗಳ ಗಣತಿ ಮಾಡಿ, ಚುಚ್ಚುಮದ್ದನ್ನೇಕೆ ಕೊಡಿಸಬಾರದು ಎಂದು ಪ್ರಶ್ನಿಸಿದರು.

ಪಶುಪಾಲನಾ ಇಲಾಖೆ ಉಪ ನಿರ್ದೇಶಕ, ಬೀದಿ ನಾಯಿ ಹಿಡಿದು ಚುಚ್ಚುಮದ್ದು ಕೊಡುವುದು ಕಷ್ಟದ ಕೆಲಸ, ಕೊಲ್ಲುವುದು ಕೂಡ ಕಷ್ಟದ ಕೆಲಸವೇ, ಪ್ರಾಣಿದಯಾ ಸಂಘಗಳು ಅಡ್ಡಬರುತ್ತವೆ ಎಂದರು.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಾ.ರಾ.ನಂದೀಶ್‌, ಕಾಡಲ್ಲಿರುವ ಹುಲಿ-ಸಿಂಹಗಳನ್ನೇ ಹಿಡಿದು ಚುಚ್ಚುಮದ್ದು ಕೊಡುತ್ತಾರೆ, ಬೀದಿನಾಯಿಗಳನ್ನೇಕೆ ಹಿಡಿದು ಚುಚ್ಚುಮದ್ದು ಕೊಡಿಸೋಕಾಗಲ್ಲ. ಪಂಚಾಯ್ತಿ ಮಟ್ಟದಲ್ಲಿ ಈ ಬಗ್ಗೆ ಕ್ರಮವಹಿಸಿ ಎಂದು ತಿಳಿಸಿದರು.

Advertisement

ಅರ್ಧಂಬರ್ಧ ಮಾಹಿತಿ ಕೊಟ್ರೆ ಸಭೆ ಮಾಡೋಕಾಗಲ್ಲ: ನೀವು ಕೊಡುವ ಶೇಕಡಾವಾರು ಅಂಕಿಅಂಶ ನೋಡೋಕೆ ಕೆಡಿಪಿ ಸಭೆ ಮಾಡುವ ಅವಶ್ಯಕತೆ ಕಾಣಿ¤ಲ್ಲ. ಕೆಡಿಪಿ ಸಭೆಗೆ ಅರ್ಧಂಬರ್ಧ ಮಾಹಿತಿ ಕೊಟ್ರೆ ಹೇಗೆ ಪ್ರಗತಿಪರಿಶೀಲನೆ ಮಾಡೋದು ಎಂದು ಜಿಪಂ ಸಿಇಒ ಕೆ.ಜ್ಯೋತಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹಿಂದಿನಿಂದಲೂ ಹೀಗೆ ನಡೆದುಕೊಂಡು ಬರುತ್ತಿದೆ. ಇಲಾಖಾವಾರು ಪ್ರಗತಿ ವರದಿಯನ್ನು ಜಿಪಂಗೆ ಮುಂಚಿತವಾಗಿಯೂ ಕೊಡುವುದಿಲ್ಲ. ಕೊಟ್ಟರು ಅದು ಅರ್ಧಂಬರ್ಧ ಇರುತ್ತದೆ. ಸಭೆಯ ದಿನ ನಿಮ್ಮ ಬಳಿ ಒಂದು ಮಾಹಿತಿ ಇದ್ದರೆ, ನಮ್ಮ ಬಳಿ ಒಂದು ಮಾಹಿತಿ ಇರುತ್ತೆ. ಶೇ.53, ಶೇ.60 ಸಾಧನೆ ಎಂದರೆ ಏನು ಎಂಬ ವಿವರಬೇಕಲ್ಲ? ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.

ಮುಂದಿನ ಸಭೆಗೆ ತಾಲೂಕುವಾರು ವಿವರವಾದ ಮಾಹಿತಿ ಕೊಡಿ. ಈ ಸಭೆಗೆ ಕೊಟ್ಟಿರುವ ಮಾಹಿತಿಯ ತಾಲೂಕುವಾರು ವಿವರವಾದ ಮಾಹಿತಿಯನ್ನೂ 15 ದಿನಗಳಲ್ಲಿ ಕೊಡಿ, ಮುಂದಿನ ಸಭೆಗೆ ಒಂದು ವಾರ ಮುಂಚಿತವಾಗಿ ಜಿಪಂಗೆ ಸಮಗ್ರವಾದ ಮಾಹಿತಿ ಸಲ್ಲಿಸಬೇಕು ಎಂದು ಜಿಲ್ಲಾಮಟ್ಟದ ಎಲ್ಲ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next