Advertisement

ಪ್ರತಿಯೊಬ್ಬ ವ್ಯಕ್ತಿ ಸ್ವಾರ್ಥಿ ಆಗಬೇಕು

07:41 AM Aug 10, 2017 | |

“ಸ್ವಾರ್ಥ’ವನ್ನು ಮತ್ತೂಮ್ಮೆ ಅವಲೋಕಿಸುವ ಅಗತ್ಯವಿದೆ. ಯಾವಾಗ ನಾವು ಕೆಟ್ಟ ಸ್ವಾರ್ಥ ಮತ್ತು ಒಳ್ಳೆಯ ಸ್ವಾರ್ಥದ‌ ನಡುವಿನ ವ್ಯತ್ಯಾಸವನ್ನು ಗುರುತಿಸುವುದಕ್ಕೆ ವಿಫ‌ಲವಾಗುತ್ತೀವೋ, ಆಗ ಬಯಸಿದ್ದನ್ನು ಪಡೆಯಲಾಗದೇ ಒದ್ದಾಡುತ್ತೇವೆ.

Advertisement

ಸ್ವಾರ್ಥ ಎನ್ನುವ ಪದಕ್ಕೆ ಜಗತ್ತಿನಾದ್ಯಂತ ಬರೀ ಕೆಟ್ಟ ಅರ್ಥವನ್ನೇ ಕೊಡಲಾಗಿದೆ. ಸ್ವಾರ್ಥಿಯಾಗುವುದು ಎಂದರೆ ಅತ್ಯಂತ ಕೆಟ್ಟ ಗುಣಗಳನ್ನು ಹೊಂದಿರುವುದು ಎಂಬ ಅರ್ಥ ಕಲ್ಪಿಸಲಾಗಿದೆ. ಅಲ್ಲದೆ ದುರಾಸೆ, ಕ್ರೌರ್ಯ ಮತ್ತು ದಬ್ಟಾಳಿಕೆಯ ವರ್ತನೆಗಳನ್ನೂ ಸ್ವಾರ್ಥದೊಂದಿಗೆ ತಳುಕು ಹಾಕಲಾಗಿದೆ. ಆದರೂ ಜೀವನದಲ್ಲಿ ನಾವು ಬಯಸುವ ಅನೇಕ ಸಂಗತಿಗಳು ನಮ್ಮ ಕೈಗೆ ನಿಲುಕದೇ ಇರುವುದಕ್ಕೆ ನಮ್ಮ “ನಿಸ್ವಾರ್ಥ’ ಗುಣ ಕಾರಣವಾಗಿಬಿಡುತ್ತದೆ! ಅತಿಯಾದ ವಿನಯವಂತಿಕೆೆ, ಅನ್ಯರ ಆಸೆಗಳಿಗೆ ನೀರೆರೆಯುವುದರಲ್ಲೇ ಮಗ್ನವಾಗಿರುವ ಗುಣವೂ ಈ ನಿಸ್ವಾರ್ಥದ ಪರಿಧಿಯಲ್ಲಿ ಬರುತ್ತವೆ. 

“ಸ್ವಾರ್ಥ’ವನ್ನು ಮತ್ತೂಮ್ಮೆ ಅವಲೋಕಿಸಲೇಬೇಕಾದ ಅಗತ್ಯವಿದೆ. ಯಾವಾಗ ನಾವು ಕೆಟ್ಟ ಸ್ವಾರ್ಥ ಮತ್ತು ಒಳ್ಳೆಯ ಸ್ವಾರ್ಥ ಎಂಬ ಎರಡು ಆವೃತ್ತಿಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದಕ್ಕೆ ವಿಫ‌ಲವಾಗುತ್ತೀವೋ, ಆಗ ಬಯಸಿದ್ದನ್ನು ಪಡೆಯಲಾಗದ ಅಸಹಾಯಕರಾಗಿಬಿಡುತ್ತೇವೆ, “ನಿರ್ಭಾಗ್ಯ’ ಹಣೆಪಟ್ಟಿಯನ್ನು ನಮಗೆ ನಾವೇ ಹಚ್ಚಿಕೊಳ್ಳುತ್ತೇವೆ. 

ಒಳ್ಳೆಯ ಸ್ವಾರ್ಥವು  ನಿರ್ದಿಷ್ಟ(ಅಗತ್ಯ) ಸಮಯದಲ್ಲಿ  ನಮ್ಮ ಬಗ್ಗೆ ನಾವು ಕಾಳಜಿ ಮಾಡಿಕೊಳ್ಳುವುದಕ್ಕೆ ಪ್ರೋತ್ಸಾಹಿಸುತ್ತದೆ ಮತ್ತು ನಮ್ಮ ಅಗತ್ಯಗಳನ್ನು ಈಡೇರಿಸಿಕೊಳ್ಳುವ ಧೈರ್ಯ ತುಂಬುತ್ತದೆ. ನಮ್ಮ ಒಳ್ಳೆಯ ಸ್ವಾರ್ಥ ಸುತ್ತಲಿರುವವರಿಗೂ ದೀರ್ಘ‌ಕಾಲದಲ್ಲಿ ಒಳ್ಳೆಯದನ್ನು ಮಾಡುತ್ತದೆ. ಒಳ್ಳೆಯ ಸ್ವಾರ್ಥದಲ್ಲಿ ಇನ್ನೊಬ್ಬರಿಗೆ ಹಾನಿ ಇರುವುದಿಲ್ಲ. ಇನ್ನೊಂದೆಡೆ ಹೆಸರೇ ಸೂಚಿಸುವಂತೆ “ಕೆಟ್ಟ ಸ್ವಾರ್ಥ’ದ ಉದ್ದೇಶ “ಸ್ವಹಿತಾಸಕ್ತಿಯೇ ಪರಮೋತ್ಛ ಗುರಿ’ ಎನ್ನುವುದು. ಈ ಸ್ವಾರ್ಥದಲ್ಲಿ ದೀರ್ಘ‌ಕಾಲಿಕ ಪರಿಹಾರಗಳಿರುವುದಿಲ್ಲ, ತಾತ್ಕಾಲಿಕ ಮೇಲುಗೈ ಅಷ್ಟೇ ಇರುತ್ತದೆ. ಕೆಟ್ಟ ಸ್ವಾರ್ಥದಲ್ಲಿ ನಾವು ಸಂಪನ್ಮೂಲಗಳನ್ನು ಕ್ರೋಡೀಕರಿಸಿಕೊಳ್ಳುವುದು ಮುಂದೆ ಎಲ್ಲರಿಗೂ ಉಪಯೋಗವಾಗಲಿ ಎಂಬ ಕಾರಣಕ್ಕಲ್ಲ, “ಈಗ ನನಗೆಲ್ಲವೂ ಸಿಗಬೇಕು, ನನಗಷ್ಟೇ ಸಿಗಬೇಕು’ ಎಂಬುದಕ್ಕಷ್ಟೆ!

ದುರದೃಷ್ಟವಶಾತ್‌, ನಾವು ಅನೇಕ ಬಾರಿ ಈ ಎರಡೂ ಸ್ವಾರ್ಥಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವಲ್ಲಿ ಗೊಂದಲಗೊಂಡುಬಿಡುತ್ತೇವೆ. ಆ ಮೂಲಕ ನಮ್ಮ ಅಗತ್ಯಗಳನ್ನು ಕಡೆಗಣಿಸುತ್ತೇವೆ. ಹೀಗೆಯೇ ಮಾಡುತ್ತಾ ಹೋದರೆ ನಾವು ಯಾರಿಗೆ ಒಳ್ಳೆಯದನ್ನು ಮಾಡಲು ಬಯಸುತ್ತೇವೋ ಅವರಿಗೆ ಹಾನಿ ಮಾಡುತ್ತೇವೆ.  ಉದಾಹರಣೆಗೆ, ನಮಗೆ ಪ್ರತಿದಿನ ಒಂದು ಗಂಟೆ ಪರ್ಸನಲ್‌ ಟೈಮ್‌ ಅಗತ್ಯವಿರುತ್ತದೆ ಎಂದುಕೊಳ್ಳಿ. ಆ ಪರ್ಸನಲ್‌ ಟೈಂ ಸಿಕ್ಕುಬಿಟ್ಟರೆ ನಾವು ಒಳ್ಳೆಯ ಪೋಷಕರಾಗಿ, ಪತಿಯಾಗಿ/ಪತ್ನಿಯಾಗಿ, ಸ್ನೇಹಿತರಾಗಿ, ರೂಂಮೇಟ್‌ಗಳಾಗಿ ದಿನವನ್ನು ಮುಕ್ತಾಯಗೊಳಿಸಬಹುದು. ದಿನಕ್ಕೆ ಒಂದು ತಾಸು ಚೆನ್ನಾಗಿ ಸ್ನಾನ ಮಾಡುವುದರಿಂದಲೋ ಅಥವಾ ಒಬ್ಬರೇ ಅಡ್ಡಾಡಿಕೊಂಡು ಬರುವುದರಿಂದಲೋ, ಇಲ್ಲವೇ ಹಳೆಯ ಗೆಳೆಯರೊಡನೆ ಒಂದಿಷ್ಟು ಹರಟೆಹೊಡೆಯುವುದರಿಂದಲೋ ನಿಮ್ಮ ಮನಸ್ಸು ಪ್ರಫ‌ುಲ್ಲಗೊಳ್ಳುತ್ತದೆ ಎಂದರೆ ಆ ಟೈಮ್‌ ನಿಮಗೆ ಅತ್ಯಗತ್ಯ ಎಂದರ್ಥ. ಅದನ್ನು ಪಡೆದುಕೊಳ್ಳಲು ಮುಂದಾಗುವುದು ಒಳ್ಳೆಯ ಸ್ವಾರ್ಥ. ಆದರೆ “ಜವಾಬ್ದಾರಿ’ಯ ಹೆಸರಲ್ಲಿ ಅಥವಾ “ನಿಸ್ವಾರ್ಥ’ದ ಹೆಸರಲ್ಲಿ ನಾವು ಈ ಚಿಕ್ಕ ಅಗತ್ಯಗಳನ್ನು ಮನದ ಮೂಲೆಯಲ್ಲಿ ತಳ್ಳುತ್ತಾ ಹೋಗುತ್ತೇವೆ. ಕೊನೆಗೆ ಈ ಅಗತ್ಯಗಳು ತಲೆಯಲ್ಲಿ ಜಮೆಯಾಗುತ್ತಾ ಅವು ನಮ್ಮ ಪ್ರೀತಿಪಾತ್ರರ ಮೇಲಿನ ಸಿಟ್ಟಿನಲ್ಲೋ, ಜಗಳದಲ್ಲೋ ಪರ್ಯಾವಸಾನವಾಗಿಬಿಡುತ್ತವೆ!

Advertisement

ಅಥವಾ ಇನ್ನೊಂದು ಉದಾಹರಣೆಯನ್ನೇ ನೋಡಿ. ಊಟವಾದ ತಕ್ಷಣ ಅರ್ಧಗಂಟೆ ನಿಮ್ಮ ಮನಸ್ಸು ಕೆಲ ಹೊತ್ತು ತುಂಬಾ ಫ್ರೆಶ್‌ ಆಗಿ, ಸೃಜನಾತ್ಮಕವಾಗಿ ಇರುತ್ತದೆ ಎಂದುಕೊಳ್ಳಿ. ಆ ಸಮಯದಲ್ಲಿ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡರೆ ನಿಮ್ಮ ತಲೆಯಲ್ಲಿರುವ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕುಬಿಡಬಲ್ಲದು. ಆದರೆ ಊಟವಾದ ತಕ್ಷಣ ಅಡುಗೆ ಪಾತ್ರೆಗಳನ್ನು ಎತ್ತಿಡುವ, ಕಿಚನ್‌ ಅನ್ನು ಕ್ಲೀನ್‌ ಮಾಡುವ ಪರಿಪಾಠ ನಿಮ್ಮ ಮನೆಯಲ್ಲಿದ್ದರೆ ಏನಾಗುತ್ತದೆ? ಎಲ್ಲರೂ ಕ್ಲೀನ್‌ ಮಾಡುವಾಗ ನಾನು ಮಾತ್ರ ಎದ್ದುಹೋದರೆ ತೀರಾ ಸ್ವಾರ್ಥಿಯೆನಿಸಿಕೊಳ್ಳುತ್ತೇನೆ ಎಂದು ಭಾವಿಸಿ ಕಸಪೊರಕೆ/ ಪಾತ್ರೆ ಹಿಡಿದುಕೊಂಡು ನಿಲ್ಲುತ್ತೀರಿ. ನಿಮ್ಮ ಕ್ರಿಯೇಟಿವ್‌ ಸಮಯ ಕಿಚನ್‌ ಸಿಂಕಿನೊಳಗೆ ಹರಿದುಹೋಗುತ್ತದ್ದಷ್ಟೆ.

“ನನಗೆ ಏನು ಬೇಕು?’, “ಏನಿದ್ದರೆ ನನ್ನ ಮತ್ತು ಸುತ್ತಲಿರುವವರ ಜೀವನವನ್ನು ಸುಖಕರವಾಗಿಸಬಲ್ಲೆ?’ ಎನ್ನುವ ಬಗ್ಗೆ ನಮಗೆ ಸ್ಪಷ್ಟ ಅರಿವಿರಬೇಕು. ಇದನ್ನೇ ಒಳ್ಳೆಯ ಸ್ವಾರ್ಥವೆನ್ನುವುದು. ನನ್ಮ ಸಾಮರ್ಥಯ ವೃದ್ಧಿ ಹೇಗಾಗಬೇಕು, ಯಾವ ಕೆಲಸ ಮಾಡಿದರೆ ವ್ಯಕ್ತಿಗತವಾಗಿ ಮತ್ತು ವೃತ್ತಿಗತವಾಗಿ ಬೆಳೆಯುತ್ತೇನೆ/ಯಾವ ಕೆಲಸ ಮಾಡದಿದ್ದರೆ ಸುಖವಾಗಿರುತ್ತೇನೆ, ಯಾರಿಗೆ ಸಮಯ ಕೊಡಬೇಕು/ಕೊಡಬಾರದು ಎನ್ನುವುದನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು.  ಅಂದರೆ ಸ್ವಾರ್ಥದೆಡೆಗಿನ ನಮ್ಮ ಭಾವನೆ, ಯೋಚನೆಗಳನ್ನು ಮರು ವಿಶ್ಲೇಷಣೆಗೊಳಪಡಿಸಿ ಮತ್ತೆ ನೀಟಾಗಿ ನಿಲ್ಲಿಸಲೇಬೇಕು. ಕೆಟ್ಟ ಸ್ವಾರ್ಥವ್ಯಾವುದು, ಒಳ್ಳೆಯ ಸ್ವಾರ್ಥವ್ಯಾವುದು ಎಂದು ವಿಂಗಡಿಸಿದಾಗಲೇ ನಮ್ಮ ಆದ್ಯತೆಗಳ ಈಡೇರಿಕೆಗೆ ಮುಂದಾಗಲು ಸಾಧ್ಯವಾಗುತ್ತದೆ.  ನಮ್ಮ ಬಹುತೇಕ ಕೆಲಸಗಳು, ವರ್ತನೆಗಳು ಸುತ್ತಲಿರುವವರನ್ನು ಆ ಕ್ಷಣಕ್ಕೆ ಖುಷಿಪಡಿಸುವುದಕ್ಕೆ ಸೀಮಿತವಾಗಿಬಿಡುತ್ತವೆ. ಆದರೆ ಇದರಿಂದ ದೀರ್ಘ‌ಕಾಲಿಕ ಲಾಭವೇನೂ ಇರುವುದಿಲ್ಲ. ಟಿ.ವಿ ನೋಡುತ್ತಾ ಕುಳಿತ ಹುಡುಗನೊಬ್ಬ ತನ್ನ ತಂದೆಯ ಸ್ಕೂಟರ್‌ ಸದ್ದು ಕೇಳುತ್ತಿದ್ದಂತೆಯೇ 

ರೂಮಿಗೆ ಓಡಿಹೋಗಿ ಓದುತ್ತಾ ಕುಳಿತಂತೆ ನಟಿಸುತ್ತಾನೆ. ರೂಮು ಪ್ರವೇಶಿಸುವ ಅಪ್ಪನೋ ತನ್ನ ಮಗ ಓದುತ್ತಾ ಕುಳಿತಿರುವುದನ್ನು ನೋಡಿ ಹಿರಿಹಿರಿ ಹಿಗ್ಗಿ ಶಭಾಷ್‌! ವೆರಿ ಗುಡ್‌! ಎಂದು ಅಭಿಮಾನ ಪಟ್ಟು, ಮಗನ ತಲೆ ನೇವರಿಸುತ್ತಾನೆ. ಆ ಕ್ಷಣದಲ್ಲಿ ಮಗನಿಗೂ-ಅಪ್ಪನಿಗೂ 
ಸಂತಸಪಡುತ್ತಾರೆ ಎನ್ನುವುದು ನಿಜ. ಆದರೆ ಇದರಿಂದಾಗಿ ಮುಂದೆ ಆಗುವುದೇನು? ಅವನ ಫ‌ಲಿತಾಂಶ ಹೇಗಿರುತ್ತದೆ? ಮಗನ ಬಗ್ಗೆ ಅಪ್ಪನಿಗೆ ಆಗಬಹುದಾದ ನಿರಾಸೆ ಎಷ್ಟು? ಮಗನಲ್ಲಿ ಹುಟ್ಟಬಹುದಾದ ಕೀಳರಿಮೆ ಎಷ್ಟು? ಉತ್ತರ ನಿಮಗೂ ಗೊತ್ತಿದೆ.   “ಆದರೆ ಓದದೇ ಟಿ.ವಿ ನೋಡುತ್ತಾ ಕುಳಿತಿರೆ ಅಪ್ಪ ಬೈಯ್ತಾನಲ್ಲ!’ ಎಂದು ಈ ಹುಡುಗ ಪ್ರಶ್ನೆಯಿಡುತ್ತಿದ್ದಾನೆ ಎಂದುಕೊಳ್ಳಿ. ಅವನಿಗೆ ನೀವೇನು ಉತ್ತರಿಸುತ್ತೀರಿ? “ಆ ಟೈಮಲ್ಲಿ ಓದೋಕ್ಕೆ ನಿನಗೆ ಮೂಡ್‌ ಇಲ್ಲ, ಎಂದಾದರೆ ಬೇರೇ ಟೈಮಲ್ಲಿ ಓದಿನಿ ಅಂತ ನಿನ್ನ ಅಪ್ಪನಿಗೆ ಹೇಳು. ಮೊದಲು ಕಿರಿಕಿರಿ ಮಾಡಿದರೂ ನಂತರ ಅರ್ಥಮಾಡಿಕೊಳ್ಳುತ್ತಾರೆ’ ಎಂದೇ ಅಲ್ಲವೇ?  ಇದೇ ವಿಷಯವನ್ನು ಈಗ ನಾವೆಲ್ಲ ಸ್ವಯಂ ಅಪ್ಲೆ„ ಮಾಡಿಕೊಳ್ಳೋಣ. ನಾವೆಲ್ಲರೂ ನಮ್ಮ ಉದ್ದೇಶಗಳ ಪ್ರತಿನಿಧಿಗಳಾಗಬೇಕು, ನಮ್ಮ ಸುತ್ತಲಿರುವವರಿಗೆ “ನಾನು ಸೋಮಾರಿ ಅಥವಾ ಕಲ್ಲೆದೆಯವನಲ್ಲ’ ಎನ್ನುವುದನ್ನು ಅರ್ಥಮಾಡಿಸಬೇಕು. ನನಗೆ ಈ ದಾರಿ ಇಷ್ಟ, ನನಗೆ ಇದು ಬೇಕು, ಈ ದಾರಿಯಲ್ಲಿ ಸಾಗಿದರೆ ನಾನೂ  ಖುಷಿಯಾಗಿರುತ್ತೇನೆ, ನಿಮ್ಮನ್ನೂ ಖುಷಿಯಾಗಿಡುತ್ತೇನೆ ಎಂದು ಮನವರಿಕೆ ಮಾಡಿಸಬೇಕು. 

ಒಂದು ವಿಷಯ ಅರ್ಥ ಮಾಡಿಕೊಳ್ಳಿ. ತ್ಯಾಗಮಯಿ ಆಗುತ್ತೇನೆ ಎಂದು ಹೊರಟವರೆಲ್ಲರೂ ಅಸಮಾಧಾನದ ಆಗರಗಳಾಗುವ ಸಾಧ್ಯತೆಯೇ ಹೆಚ್ಚು. ಪ್ರತಿಯೊಬ್ಬ ಮನುಷ್ಯನೂ ಸ್ವಾರ್ಥಿಯಾಗಬೇಕು. ಆದರೆ ಅದು ಒಳ್ಳೆಯ ಸ್ವಾರ್ಥವೋ, ಕೆಟ್ಟ ಸ್ವಾರ್ಥವೋ ಎನ್ನುವುದು ಮುಖ್ಯವಾಗುತ್ತದೆ!

ಅಲೆನ್‌ ಡೆ ಬಾಟನ್‌, ಬ್ರಿಟನ್‌ ಮೂಲದ‌ ಖ್ಯಾತ ಲೇಖಕ, ಉದ್ಯಮಿ

Advertisement

Udayavani is now on Telegram. Click here to join our channel and stay updated with the latest news.

Next