ಎಲ್ಲರ ಥರ ನಮ್ಮ ಪ್ರೀತಿಯಲ್ಲ. ಮನೆಯಲ್ಲಿ ಒಪ್ಪಲಿಲ್ಲ ಅಂತಂದು ನಾವು ದೂರವಾಗೋ ಮಾತೇ ಇಲ್ಲ. ನೀ ಎಲ್ಲರ ಥರದ ಹುಡ್ಗ ಅಲ್ಲ. ನನಗಾಗಿಯೇ ಚಂದನೆಯ ಪ್ರೀತಿಯ ತಾಜಮಹಲ್ ಕಟ್ಟಿ. ಅದರಲ್ಲಿ ನಮ್ಮ ಪ್ರೀತಿಯ ಕುರುಹುಗಳ ಭದ್ರವಾಗಿರಿಸಿ, ಪ್ರತಿನಿತ್ಯ ನೀನು ನನಗೆ ಪ್ರೀತಿಯ ಬಗ್ಗೆ ಹೇಳುತ್ತಾ, ಪ್ರೀತಿಯೆಂದರೆ ಎರಡು ದೇಹಗಳ ಬೆಸುಗೆ ಅಲ್ಲ ಎರಡು ಆತ್ಮಗಳ ಬೆಸುಗೆ ಎನ್ನುವ ನಿನ್ನ ಸಿ¨ªಾಂತ. ಪ್ರತಿಸಲದ ಭೇಟಿಯಲ್ಲೂ ನಿನ್ನಲ್ಲಿ ನಾ ಹೊಸತನವ ಕಂಡು, ನಿನ್ನಿಂದ ಹೊಸದನ್ನ ಕಲಿತೆ ಎನ್ನೋ ಭಾವನೆ. ಜೀವನದಲ್ಲಿ ಏನೇ ಬಂದರೂ, ಅದನ್ನ ಹೇಗೆ ಎದುರಿಸಬೇಕು ಅಂತ ನೀ ಹೇಳೊ ಜೀವನದ ಸಾರವುಳ್ಳ ಕಥೆಗಳು. ನನ್ನ ಪ್ರತಿ ಗೆಲುವಿನ ಹಿಂದಿನ ಕಾರಣವಾಗಿಬಿಟ್ಟಿವೆ. ನನ್ನ ಜೀವನದ ದಿಕ್ಕನೆ ಬದಲಿಸಿದ ನಿನಗೆ ನನ್ನ ಶರಣು.
ನೀ ಎಲ್ಲ ಪ್ರೇಮಿಗಳ ಥರ ಯಾವತ್ತೂ ಸಿನಿಮಾ, ಪಾರ್ಕ್ ಅಂತ ಸುತ್ತಾಡೋಕೆ ಕರ್ಕೊಂಡು ಹೋಗಲಿಲ್ಲ. ಬದಲಿಗೆ, ಲೈಬ್ರರಿಗೆ ಕರ್ಕೊಂಡು ಹೋಗುತ್ತಿದ್ದೆ. ನನಗಾಗಿ ಒಳ್ಳೊಳ್ಳೆ ಪುಸ್ತಕಗಳನ್ನ ಹುಡುಕಿ ಓದೋಕೆ ಹಚ್ಚುತ್ತಾ ಇದ್ದೆ. ಅದರಲ್ಲಿ ಇರೋ ಮಹತ್ವವನ್ನು ವಿವರಿಸಿ ಹೇಳುತ್ತಿದ್ದೆ.
ನೀ ಮಾಡಿದ ಈ ಅಭ್ಯಾಸ ಇಂದು ನನ್ನ ಪುಸ್ತಕದ ಹುಳುವನ್ನಾಗಿ ಮಾಡಿದೆ.
ನೀನು ನನಗಿಂತ ಬುದ್ಧಿವಂತ; ಜಾಣ. ಮೊದಲ ಸಲ ನಿನನ್ನು ಕಾಲೇಜಿನಲ್ಲಿ ನೋಡಿದಾಗ ಏನೋ ಆಕರ್ಷಣೆ. ಆದರೆ ಅದು ಪ್ರೀತಿ ಅಂತ ಗೊತ್ತಾಗಿದ್ದು ನಿನ್ನ ಅನುಪಸ್ಥಿತಿಯಲ್ಲಿ. ಆದರೆ, ಆ ಕುರಿತು ನಿನ್ನಲ್ಲಿ ಹೇಳುವ ಅಥವಾ ಕೇಳುವ ಧೈರ್ಯ ನನಗೆ ಇರಲಿಲ್ಲ. ನೀನು ಮೊದಲೇ ಕಾಲೇಜಿನ ಟಾಪರ್ ಸೀನಿಯರ್. ನಿನ್ನ ಮಾತಾಡಿಸೋಕೆ ಭಯ ಪಡ್ತಿದ್ದೆ. ಆದರೆ, ನಾನು ಪ್ರಥಮ ಸೆಮ್‌ನಲ್ಲಿ ಕಾಲೇಜಿಗೇ ಫಸ್ಟ್ ಬಂದಾಗ, ನೀನೇ ಬಂದು ನನಗೆ ಶುಭಕೋರಿದೆಯಲ್ಲ; ಆ ದಿನವನ್ನ ನನ್ನ ಜೀವನದಲ್ಲಿ ಯಾವತ್ತು ಮರೆಯೋಕೆ ಆಗಲ್ಲ. ಅಲ್ಲಿಂದ ಶುರುವಾದ ನಮ್ಮ ಸ್ನೇಹ, ಗೊತ್ತಿಲ್ಲದೆ ಪ್ರೀತಿಗೆ ತಿರುಗಿತು. ನನ್ನ ಮೇಲೆ ಪ್ರೀತಿ ಹುಟ್ಟಿದ್ದರೂ ನೀನು ಅದನ್ನು ಮೊದಲು ಹೇಳಿದ್ದು ನನ್ನ ಅಪ್ಪನಿಗೆ. ಅವರ ಅನುಮತಿ ಪಡೆದ ಮೇಲೆ ನೀ ನನಗೆ ನಿನ್ನ ಪ್ರೀತಿಯ ವಿಷಯ ತಿಳಿಸಿದ್ದು. ಇದು ನನಗೆ ತುಂಬಾ ಆಶ್ಚರ್ಯ ಮಾಡಿದ್ದುಂಟು.
ನಾ ಬಯಸದೇನೆ ಇರೋವಷ್ಟು ಪ್ರೀತಿನ ನೀ ನನಗೆ ಕೊಡ್ತಾ ಇದ್ದಿಯ. ಜೀವನ ಪರ್ಯಂತ ನಿನ್ನ ಜೊತೆ ಕಳಿಯೋ ಆ ಪ್ರತಿ ಗಳಿಗೆಯನ್ನು ನಾನು ಮಿಸ್ ಮಾಡಿಕೊಳ್ಳಲ್ಲ.
ದೀಪಾ ಪಾಟೀಲ್, ಧಾರವಾಡ