Advertisement

ಕಾಳಿದಾಸನ ಪ್ರತಿ ಅಕ್ಷರವೂ ಸಾಹಿತ್ಯ ರತ್ನ: ಸ್ವಾಮೀಜಿ

09:42 AM Jan 11, 2019 | |

ವಿಜಯಪುರ: ಕವಿತ್ವದಲ್ಲಿ ಕವಿರತ್ನ ಕಾಳಿದಾಸ ಮೇರು ಪರ್ವತ ಎನಿಸಿರುವ ಕಾಳಿದಾಸನ ಲೇಖನಿಯಿಂದ ಜಿನುಗಿದ ಒಂದೊಂದು ಅಕ್ಷರ ಕೇವಲ ಸಾಹಿತ್ಯವಲ್ಲ. ಅದೊಂದು ಸಾಹಿತ್ಯದ ಅಮೂಲ್ಯ ಸಾಹಿತ್ಯ ರತ್ನ ಎಂದು ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಶ್ರೀಗಳು ಹೇಳಿದರು.

Advertisement

ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಏರ್ಪಡಿಸಿದ್ದ ಕುಮಾರ ಸಂಭವಂ ಮಹಾಕಾವ್ಯ ಕುರಿತಾದ ಚಿಂತನಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಳಿದಾಸ ಸಾಹಿತ್ಯ ಲೋಕದ ಮೇರುಪರ್ವತ. ಪೂರ್ಣ ಪ್ರಜ್ಞೆಯ ಸತ್ಯವನ್ನು ಸಾಹಿತ್ಯ ರೂಪವಾಗಿ ಉಣಬಡಿಸಿದ ಮಹರ್ಷಿ ವಾಲ್ಮೀಕಿ ಸೇರಿದಂತೆ ಇತರೆ ಮಹಾಕಾವ್ಯ ರಚಿಸಿದ ದಾರ್ಶನಿಕರ ಸಾಲಿಗೆ ಸೇರುತ್ತಾರೆ.

ಕಾಳಿದಾಸನ ಹೆಸರಿನಲ್ಲಿಯೇ ವಿಶಾಲಾರ್ಥವಿದೆ. ಜ್ಞಾನ ಭಂಡಾರವಿದೆ. ಆತನ ಹೆಸರಿನ ಅರ್ಥ ಕೇವಲ ಸರಸ್ವತಿಗೆ ಅಷ್ಟೇ ಗೊತ್ತು ಎಂದು ದೊಡ್ಡ ಪಂಡಿತರು ಕಾಳಿದಾಸನ ಜ್ಞಾನದ ಹಿರಿಮೆ ಕೊಂಡಾಡಿದ್ದಾರೆ ಎಂದರು. ಕಾಳಿದಾಸನ ಕಾವ್ಯ ಸೊಬಗು, ಉಪಮೇಯಗಳ ಪ್ರಯೋಗವನ್ನು ಸರಿಗಟ್ಟಲು ಯಾರಿಗೂ ಸಾಧ್ಯವಿಲ್ಲ, ಕಾಳಿದಾಸನಿಗೆ ಕಾಳಿದಾಸನೇ ಸಾಟಿ ಎಂದು ಬಣ್ಣಿಸಿದರು. ಹಿರಿಯ ಸಂಸ್ಕೃತ ಪಂಡಿತ ಡಾ| ಎಂ.ಇ. ರಂಗಾಚಾರ್ಯ ಮಾತನಾಡಿ, ಕಾಳಿದಾಸ ಭಗವಂತನನ್ನು ಅರಿತ ಮಹಾಕವಿ. ತನ್ನ ಅರಿವನ್ನು ಜಗತ್ತಿಗೆ ಪ್ರಸಾರ ಮಾಡಿದ ಮಹಾನ್‌ ಚೇತನ. ಯಾವ ರೀತಿ ಪ್ರಮೇಯಗಳನ್ನು ಬಳಸಿ ಕಾಳಿದಾಸ ಅನುಪಮವಾದ ಸಾಹಿತ್ಯವನ್ನು ಉಣಬಡಿಸಿದ್ದಾನೆ ಎಂಬುದಕ್ಕೆ ನಿದರ್ಶನವೊಂದನ್ನು ನೀಡಿದ ರಂಗಾಚಾರ್ಯರು ‘ರಘುವಂಶ ಕಾವ್ಯದಲ್ಲಿ ಬರುವಂತೆ, ಅಲ್ಲಿನ ರಾಣಿಯೊಬ್ಬಳಿಗೆ ಎಲ್ಲ ದೇಶದ ಮಣ್ಣನ್ನು ತಿನ್ನುವ ಆಸೆಯಾಗುತ್ತದೆ,’ ಈ ವಿಷಯವನ್ನೇ ಕಾಳಿ ಮಹಾತಾಯಿ ತನ್ನ ಮಗನ ಭವಿಷ್ಯದ ದಿಗ್ವಿಜಯಕ್ಕಾಗಿ ಆತ ಶಿಶುವಿದ್ದಾಗಲೇ ಎಲ್ಲ ದೇಶದ ಮಣ್ಣಿನ ರುಚಿ ಆತನಿಗೆ ಗೊತ್ತಾಗಲಿ ಎಂದು ಆ ತಾಯಿ ಬಯಸುತ್ತಾಳೆ ಎಂದು ಕಾಳಿದಾಸ ಅರ್ಥಪೂರ್ಣ ವಿವರಣೆ ನೀಡುತ್ತಾನೆ. ಈ ವಿಷಯದಲ್ಲಿಯೇ ಕಾಳಿದಾಸನ ಕಾವ್ಯ ವಿದ್ವತ್ತು ತಿಳಿದುಕೊಳ್ಳಬಹುದು ಎಂದರು. ಎಸ್‌.ಎ. ಜಿದ್ದಿ ಅಧ್ಯಕ್ಷತೆ ವಹಿಸಿದ್ದರು. ನಿತ್ಯಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next