ಅಬುಧಾಬಿ: ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಶನಿವಾರ ಚರ್ಚೆ ನಡೆಸಿದರು. ಇದೇ ವೇಳೆ ಭಾರತ ಮತ್ತು ಯುಎಇ ನಡುವೆ ಆಯಾ ಕರೆನ್ಸಿಗಳಲ್ಲಿ ವ್ಯಾಪಾರ ಒಪ್ಪಂದದ ಪ್ರಾರಂಭವನ್ನು ಘೋಷಿಸಿದರು. ಅಲ್ಲದೆ ಪ್ರಧಾನಿ ಮೋದಿ ಅವರು ಯುಎಇ ಅಧ್ಯಕ್ಷರಿಗೆ ‘’ಪ್ರತಿಯೊಬ್ಬ ಭಾರತೀಯನು ನಿಮ್ಮನ್ನು “ನಿಜವಾದ ಸ್ನೇಹಿತ” ಎಂದು ನೋಡುತ್ತಾನೆ ಎಂದು ಹೇಳಿದರು.
“ಎರಡೂ ದೇಶಗಳ ಕರೆನ್ಸಿಗಳಲ್ಲಿ ವ್ಯಾಪಾರ ಇತ್ಯರ್ಥಕ್ಕಾಗಿ ಶನಿವಾರ ಸಹಿ ಹಾಕಲಾದ ಒಪ್ಪಂದವು ಭಾರತ ಮತ್ತು ಯುಎಇ ನಡುವಿನ ಬಲವಾದ ಆರ್ಥಿಕ ಸಹಕಾರ ಮತ್ತು ಪರಸ್ಪರ ನಂಬಿಕೆಯನ್ನು ಸೂಚಿಸುತ್ತದೆ” ಎಂದು ಪ್ರಧಾನಿ ಹೇಳಿದರು, ಒಪ್ಪಂದವು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಗಳನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.
“ಅಬುಧಾಬಿಯಲ್ಲಿರಲು ಮತ್ತು ನಿಮ್ಮನ್ನು ಭೇಟಿಯಾಗಲು ನನಗೆ ಸಂತೋಷವಾಗಿದೆ. ಆತ್ಮೀಯ ಸ್ವಾಗತಕ್ಕಾಗಿ ನಾನು ನಿಮಗೆ ಧನ್ಯವಾದಗಳು… ಪ್ರತಿಯೊಬ್ಬ ಭಾರತೀಯನು ನಿಮ್ಮನ್ನು ನಿಜವಾದ ಸ್ನೇಹಿತನಂತೆ ನೋಡುತ್ತಾನೆ” ಎಂದು ಯುಎಇ ಅಧ್ಯಕ್ಷರಿಗೆ ಪ್ರಧಾನಿ ಹೇಳಿದರು.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಅಧಿಕೃತ ಭೇಟಿಯಲ್ಲಿರುವ ಪ್ರಧಾನಿ ಮೋದಿ, ಕಳೆದ ವರ್ಷ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಭಾರತ-ಯುಎಇ ವ್ಯಾಪಾರವು 20% ರಷ್ಟು ಬೆಳೆದಿದೆ ಎಂದು ಹೇಳಿದರು.
ನಮ್ಮ ದ್ವಿಪಕ್ಷೀಯ ವ್ಯಾಪಾರವು ಶೇಕಡಾ 20 ರಷ್ಟು ಹೆಚ್ಚಿದೆ. ಇದೇ ಮೊದಲ ಬಾರಿಗೆ ನಾವು 85 ಬಿಲಿಯನ್ ಯುಎಸ್ ಡಾಲರ್ ವ್ಯಾಪಾರ ಸಾಧಿಸಿದ್ದೇವೆ. ಶೀಘ್ರದಲ್ಲೇ ಇದು 100 ಬಿಲಿಯನ್ ಗುರಿ ತಲುಪಲಿದೆ. ನಾವು ನಿರ್ಧರಿಸಿದರೆ ಜಿ20ಗಿಂತ ಮೊದಲೇ ನಾವು ಈ ಗಡಿ ದಾಟಬಹುದು ಎಂದು ಮೋದಿ ಹೇಳಿದರು.
ಇದನ್ನೂ ಓದಿ:Goa: ಕದಂಬ ಕಾರ್ಪೊರೇಷನ್ ಪ್ರಯಾಣಿಕರಿಗಾಗಿ ‘ಲೈವ್ ಬಸ್ ಟ್ರ್ಯಾಕ್ ಆ್ಯಪ್’ ಬಿಡುಗಡೆ
ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ ಮುಂಬರುವ COP-28 ಸಮ್ಮೇಳನದಲ್ಲಿ ಭಾಗವಹಿಸುವ ಉದ್ದೇಶವನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ. ಯುಎಇಯ COP-28 ಅಧ್ಯಕ್ಷ ಸ್ಥಾನಕ್ಕೆ ಸಂಪೂರ್ಣ ಬೆಂಬಲವನ್ನು ಪ್ರಧಾನಮಂತ್ರಿ ಭರವಸೆ ನೀಡಿದರು.