ಕುಷ್ಟಗಿ: ಪಟ್ಟಣದ ಮುಖ್ಯ ರಸ್ತೆಗಳಲ್ಲಿ ವಾಹನ ದಟ್ಟನೆ ಹೆಚ್ಚುತ್ತಿರುವ ಜೊತೆಗೆ ಧೂಳಿನ ಪ್ರಮಾಣವೂ ಹೆಚ್ಚಾಗುತ್ತಿದ್ದು, ಇದರಿಂದ ಪಟ್ಟಣ ಧೂಳುಮಯ ರಸ್ತೆಯಲ್ಲಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ.
ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಬಸ್ ನಿಲ್ದಾಣ ಮಾರ್ಗದಲ್ಲಿ ಧೂಳು ಹೆಚ್ಚಾಗಿದೆ. ಬಸ್, ಲಾರಿ ಇತರೇ ವಾಹನಗಳು ಸಂಚರಿಸಿದರೆ ರಸ್ತೆಯೇ ಕಾಣದಷ್ಟು ಧೂಳು ಏಳುತ್ತದೆ. ಧೂಳಿನಿಂದಾಗಿ ಜನ ತೊಂದರೆ ಅನುಭವಿಸುತ್ತಿದ್ದರೂ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಧೂಳಿನಿಂದ ಶ್ವಾಸಕೋಶ, ಉಸಿರಾಟ ಹಾಗೂ ಚರ್ಮರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.
ಮುಖ್ಯ ರಸ್ತೆಗಳಲ್ಲಿನ ಗುಂಡಿಗಳನ್ನು ಮರಂ ಮಣ್ಣು ಹಾಕಿ ಮುಚ್ಚಿದ್ದು, ಇದೀಗ ಅದೇ ಮಣ್ಣು ವಾಹನಗಳ ಓಡಾಟದಿಂದ ಮೇಲೇಳುತ್ತಿರುವುದು ಮತ್ತೂಂದು ಸಮಸ್ಯೆಗೆ ಕಾರಣವಾಗಿದೆ. ಅಲ್ಲದೇ ಮುಖ್ಯ ರಸ್ತೆಗಳ ಅಕ್ಕಪಕ್ಕದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದಲ್ಲಿ ಚರಂಡಿ ತುಂಬಿ ರಸ್ತೆಗೆ ಹರಿಯುವ ಸಂದರ್ಭದಲ್ಲಿ ಮಣ್ಣು ರಸ್ತೆಯಲ್ಲಿ ಹರಡಿಕೊಳ್ಳುತ್ತದೆ. ಒಣಗಿದ ಮೇಲೆ ವಾಹನಗಳ ಓಡಾಟದಿಂದ ಧೂಳು ಮೇಲೇಳುತ್ತಿದೆ.
ರಸ್ತೆ ಬದಿಯ ಅಂಗಡಿಕಾರರು ನಿತ್ಯ ಧೂಳು ಜಾಡಿಸಿ ಬೇಸತ್ತು ಹೋಗಿದ್ದಾರೆ. ಧೂಳಿನ ಭಯಕ್ಕೆ ಬೆಳಗ್ಗೆಯಿಂದ ರಾತ್ರಿಯವರೆಗೂ ಮೂಗಿಗೆ ಬಟ್ಟೆ ಕಟ್ಟಿಕೊಂಡೇ ವ್ಯಾಪಾರ ಮಾಡುವ ದುಸ್ಥಿತಿ ಎದುರಾಗಿದೆ. ಧೂಳಿನ ಹಾವಳಿ ವಿಪರೀತವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ನೀರು ಸಿಂಪಡಿಸಿ ಧೂಳು ನಿಯಂತ್ರಿಸಬೇಕಿದೆ. ಇಲ್ಲವೇ ಧೂಳು ಹೀರುವ ಯಂತ್ರದ ಮೂಲಕ ರಸ್ತೆಯ ಮೇಲಿನ ಮಣ್ಣು ತೆರವುಗೊಳಿಸಬೇಕಿರುವುದು ಅಗತ್ಯವಾಗಿದೆ.
ಸಂಚಾರ ದಟ್ಟಣೆಯಿಂದ ರಸ್ತೆಗಳಲ್ಲಿ ಧೂಳು ವ್ಯಾಪಕವಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದರೆ ಪುರಸಭೆ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಇದ್ದರೆ. ಹೆಚ್ಚು ಧೂಳಿನಿಂದ ಅನಾರೋಗ್ಯದ ತೊಂದರೆಗಳಿಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಕೆಮ್ಮು, ದಮ್ಮು ತೊಂದರೆ ಕಾಣಿಸಿಕೊಳ್ಳುತ್ತಿದೆ. ದಿನ ಕಳೆದಂತೆ ಅಲರ್ಜಿಕ್ ಬ್ರಾಕೈಟೀಸ್ ಆಗುವ ಸಾಧ್ಯತೆಗಳಿವೆ. ಅಲ್ಲದೇ ಡರ್ಮಾಟೈಟೀಸ್ ನಂತಹ ಚರ್ಮ ವ್ಯಾಧಿ ಯೂ ಆಗಬಹುದು ಎನ್ನುತ್ತಾರೆ ವೈದ್ಯರು.