Advertisement
ಅವರ ತಂದೆ ಕರಮಚಂದ್ ಗಾಂಧಿ (1822-1885). ಭಾರತದ ಕಾಠೀಯಾವಾಡ್‌ನಲ್ಲಿನ ಒಂದು ಸಣ್ಣ ರಾಜಾಡಳಿತದ ರಾಜ್ಯವಾದ ಪೋರ್‌ಬಂದರ್ ರಾಜ್ಯದ ದಿವಾನ್ (ಪ್ರಧಾನ ಮಂತ್ರಿ) ಆಗಿದ್ದರು. ಅವರ ತಾಯಿ ಪುತಲೀಬಾಯಿ.
ರಾಜ ಹರಿಶ್ಚಂದ್ರನ ಕಥೆಯು ಬಾಲಕ ಗಾಂಧಿಯನ್ನು ಬಿಡದೇ ಕಾಡುತ್ತಿತ್ತು. ಅದು ತಮ್ಮ ಮನದಲ್ಲಿ ಅಳಿಸಲಾಗದ ಛಾಪನ್ನು ಒತ್ತಿತ್ತು, ಅದು ನನ್ನನ್ನು ಕಾಡಿದ ಪರಿಣಾಮವಾಗಿ, ಎಷ್ಟೋ ಬಾರಿ ಹರಿಶ್ಚಂದ್ರನಂತೆ ವರ್ತಿಸಿದ್ದೇನೆ ಎಂದು ಅವರು ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖೀಸಿರುವುದನ್ನು ಇಲ್ಲಿ ಸ್ಮರಿಸಬಹುದು. ಸತ್ಯ ಮತ್ತು ಪ್ರೇಮದಂತಹ ಸರ್ವೋಚ್ಚ ಮೌಲ್ಯಗಳೊಂದಿಗೆ ಗಾಂಧಿಯವರು ಗುರುತಿಸಿಕೊಂಡಿದ್ದರ ಹಿಂದೆ ಈ ಮಹಾಕೃತಿಗಳ ಪಾತ್ರ ಹೆಚ್ಚು.
Related Articles
1883ರ ಸುಮಾರಿನಲ್ಲಿ ಗಾಂಧೀಜಿ ಅವರು ವಾಸವಿದ್ದ ಬ್ರಿಟೀಷ್ ಪ್ರಾಂತ್ಯದಲ್ಲಿ ಬಾಲ್ಯ ವಿಹಾಹ ಸಮಾರಂಭ ಏರ್ಪಟ್ಟಿತ್ತು. ಆ ಪ್ರಾಂತ್ಯದಲ್ಲಿದ್ದ ಪದ್ಧತಿಯಂತೆ 13 ವರ್ಷದ ಮೋಹನ್‌ದಾಸ್ 14 ವರ್ಷದ ಕಸ್ತೂರ್ಬಾ ಮಖಾಂಜಿ ಅವರನ್ನು ವಿವಾಹವಾದರು. 1885ರಲ್ಲಿ ಗಾಂಧಿ ದಂಪತಿಗೆ ಮೊದಲ ಸಂತಾನ ಪ್ರಾಪ್ತವಾಯಿತು. ಆದರೆ ಆ ಮಗು ಹೆಚ್ಚು ದಿನ ಬದುಕಲಿಲ್ಲ. ಇದರ ಬೆನ್ನಲ್ಲೇ ಅವರ ತಂದೆ ಕರಮಚಂದ್ ಗಾಂಧಿ ಆದೇ ವರ್ಷದ ಆರಂಭದನಲ್ಲಿ ನಿಧನ ಹೊಂದಿದರು.
Advertisement
ಗಾಂಧಿ ದಂಪತಿಗೆ 1888ರಲ್ಲಿ ಹರಿಲಾಲ್, 1892ರಲ್ಲಿ ಮಣಿಲಾಲ್, 1897ರಲ್ಲಿ ರಾಮ್ದಾಸ್ ಮತ್ತು 1900ರಲ್ಲಿ ದೇವದಾಸ್ ಎಂಬ ನಾಲ್ಕು ಮಕ್ಕಳು ಜನಿಸಿದರು.
ಬಳಿಕ ತಮ್ಮ ಶಿಕ್ಷಣವನ್ನು ಮುಂದುವರಿಸಿದ ಗಾಂಧಿ ಅವರು ಗುಜರಾತ್‌ನ ಸಮಲ್ದಾಸ್ ಕಾಲೇಜಿಗೆ ಸೇರುವುದಕ್ಕಾಗಿ ಮೆಟ್ರಿಕ್ಯುಲೇಷನ್ ಪರೀಕ್ಷೆ ಪಾಸಾದರು. ಗಾಂಧಿ ಒಬ್ಬ ನ್ಯಾಯವಾದಿ (ಬ್ಯಾರಿಸ್ಟರ್) ಆಗಬೇಕೆಂದು ಅವರ ಕುಟುಂಬವು ಇಚ್ಛಿಸಿತ್ತು. ಸೆ. 4, 1888ರಂದು ಲಂಡನ್ ಯೂನಿವರ್ಸಿಟಿ ಕಾಲೇಜ್‌ನಲ್ಲಿ ಕಾನೂನು ಅಧ್ಯಯನ, ನ್ಯಾಯವಾದಿಯಾಗಿ ತರಬೇತಿಗಾಗಿ ಗಾಂಧಿ ಲಂಡನ್‌ಗೆ ತೆರಳಿದರು. ಲಂಡನ್‌ನ ಜೀವನ ಗಾಂಧಿ ಅವರ ಜೀವನಕ್ಕೆ ಹೊಸ ತಿರುವನ್ನು ಕೊಟ್ಟಿತ್ತು. ಧರ್ಮದಲ್ಲಿ ನಿರ್ದಿಷ್ಟವಾದ ಆಸಕ್ತಿ ತೋರದಿದ್ದ ಗಾಂಧೀಜಿ, ಬಳಿಕ ಧಾರ್ಮಿಕ ಚಿಂತನೆಯಲ್ಲಿ ಆಸಕ್ತರಾಗಿ ಹಿಂದೂ ಮತ್ತು ಕ್ರೈಸ್ತ ಧರ್ಮಗ್ರಂಥಗಳನ್ನು ಅಧ್ಯಯನ ಮಾಡಿದರು. ವಕೀಲ ವೃತ್ತಿಯೊಂದು ಅರಸಿ ಬಂದಿದ್ದರಿಂದ, ಅವರು 1891ರ ಜೂನ್ 12ರಂದು ಲಂಡನ್‌ನಿಂದ ಭಾರತಕ್ಕೆ ಮರಳಿದರು. ಈ ಸಂದರ್ಭ ಗಾಂಧಿ ಅವರ ತಾಯಿ ನಿಧನ ಹೊಂದಿದ್ದರು. ಆದುದರಿಂದ ಭಾರತದಲ್ಲೇ ಉದ್ಯೋಗ ಮಾಡುವ ಸಲುವಾಗಿ ಪ್ರೌಢಶಾಲಾ ಅಧ್ಯಾಪಕರ ಅರೆಕಾಲಿಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಅದು ತಿರಸ್ಕೃತಗೊಂಡ ಬಳಿಕ ರಾಜ್‌ಕೋಟ್‌ಗೆ ವಾಪಸಾಗಿ, ಕಕ್ಷಿದಾರರಿಗಾಗಿ ಅರ್ಜಿಗಳ ಕರಡು ಗಳನ್ನು ತಯಾರಿಸುವ ಸರಳ ಜೀವನವನ್ನು ನಡೆಸುತ್ತಿದ್ದರು. 1893ರಲ್ಲಿ ಡರ್ಬನ್‌ನಿನ ಅಬ್ದುಲ್ಲಾ ಅಂಡ್ ಸನ್ಸ್ ಎಂಬ ಕಂಪೆನಿಯ ಕಾನೂನಿನ ತೊಡಕುಗಳನ್ನು ಪರಿಹರಿಸಲು ಭಾರತದಿಂದ ಬಂದ ಮೋಹನದಾಸ ಕರಮಚಂದ್ ಗಾಂಧಿ ಎಂಬ ಯುವ ವಕೀಲ, ತನ್ನ ಕೆಲಸದ ಜತೆಗೆ ದಕ್ಷಿಣ ಆಫ್ರಿಕಾದ ಬಿಳಿಯ ವಸಾಹತುಶಾಹಿ ದಬ್ಟಾಳಿಕೆಯ ವಿರುದ್ಧ ಸರ್ವೋದಯವೆಂಬ ಮನೆಯನ್ನೂ ಮನಸ್ಸನ್ನೂ ಕಟ್ಟುತ್ತಾನೆ. ಮುಂದೊಂದು ದಿನ ಮಹಾತ್ಮನಾಗಿದ್ದು ಬಿಳಿಯರು ಭಾರತೀಯ ಕೂಲಿಗಳನ್ನು ದಕ್ಷಿಣ ಆಫ್ರಿಕಾಕ್ಕೆ ಕರೆತಂದಿದ್ದರಿಂದಲೇ ಎಂಬುದು ಇತಿಹಾಸವನ್ನು ಅರ್ಥೈಸಿಕೊಂಡರೆ ಅರಿವಿಗೆ ಬರುತ್ತದೆ. ಗಾಂಧೀಜಿ ಜೀವನ ಬದಲಾಗಿದ್ದು, ಸತ್ಯಾನ್ವೇಷಣೆ ಮತ್ತು ಸತ್ಯಾಗ್ರಹದ ಆರಂಭವಾದದ್ದು ದ. ಆಫ್ರಿಕಾದಲ್ಲಿ ಎಂಬುದು ತಿಳಿದ ಸಂಗತಿ.
ದ. ಆಫ್ರಿಕಾದಲ್ಲಿ ಭಾರತೀಯರು ಅನುಭವಿಸುತ್ತಿದ್ದ ತಾರತಮ್ಯವನ್ನು ಗಾಂಧಿಯೂ ಎದುರಿಸಬೇಕಾಯಿತು. ಪ್ರ. ದರ್ಜೆ ಟಿಕೆಟ್ ಮೂಲಕ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ, ಪ್ರಥಮ ದರ್ಜೆಯ ಬೋಗಿಯಿಂದ 3ನೇ ದರ್ಜೆಯ ಭೋಗಿಗೆ ಸ್ಥಳಾಂತರಗೊಳ್ಳಬೇಕೆಂದು ಅಧಿಕಾರಿಗಳು ಒತ್ತಾಯಿಸಿದರು. ಇದಕ್ಕೆ ಗಾಂಧಿ ನಿರಾಕರಿಸಿದಾಗ ಬಲವಂತವಾಗಿ ರೈಲಿನಿಂದ ಹೊರದೂಡಲಾಗಿತ್ತು. ಇನ್ನೊಂದು ಸಂದರ್ಭ ಕುದುರೆಗಾಡಿಯಲ್ಲಿ ಪ್ರಯಾಣಿಸುತ್ತಿದ್ದಾಗ ಒಬ್ಬ ಐರೋಪ್ಯ ಪ್ರಯಾಣಿಕರಿಗೆ ಸ್ಥಳಾವಕಾಶ ನೀಡಲು ಅಧಿಕಾರಿಗಳು ಸೂಚಿಸುತ್ತಾರೆ. ಮೆಟ್ಟಿಲು ಮೇಲೆ ನಿಂತು ಪ್ರಯಾಣಿಸಲು ಗಾಂಧಿ ನಿರಾಕರಿಸಿದ್ದಕ್ಕೆ ಚಾಲಕನು ಗಾಂಧಿಯವರ ಮೇಲೆ ಹಲ್ಲೆ ನಡೆಸುತ್ತಾನೆ. ಇದೇ ರೀತಿ ಹಲವು ಹೊಟೇಲುಗಳಲ್ಲಿ ಪ್ರವೇಶ ನಿರಾಕರಣೆ ಇತ್ತು. ಇನ್ನೊಂದು ಘಟನೆಯಲ್ಲಿ ಡರ್ಬನ್ ನ್ಯಾಯಾಲಯವೊಂದರ ದಂಡಾಧಿಕಾರಿಯೊಬ್ಬರು ತಮ್ಮ ಪೇಟವನ್ನು ತೆಗೆಯಲು ಗಾಂಧಿಯವರಿಗೆ ಆದೇಶಿಸಿದ್ದರು. ಆದರೆ ಗಾಂಧಿ ಇದಕ್ಕೆ ನಿರಾಕರಿಸಿದರು. ಇಂತಹ ಘಟನೆಗಳು ಸಾಮಾಜಿಕ ಅನ್ಯಾಯದ ವಿರುದ್ಧ ಅವರನ್ನು ಜಾಗೃತಗೊಳಿಸಿದವು. ದ. ಆಫ್ರಿಕಾದಲ್ಲಿ ಭಾರತೀಯರ ವಿರುದ್ಧ ವರ್ಣಭೇದ ನೀತಿ, ಪೂರ್ವಾಗ್ರಹ ಮತ್ತು ಅನ್ಯಾಯಗಳು ನಡೆಯುತ್ತಿದ್ದನ್ನು ಸ್ವತಃ ಅನುಭವಿಸುವ ಮೂಲಕ ಗಾಂಧಿಯವರು ತಮ್ಮ ಜನರ ಸ್ಥಾನಮಾನಗಳನ್ನು ಪ್ರಶ್ನಿಸಲು ಪ್ರಾರಂಭಿಸಿದರು.
ದ. ಆಫ್ರಿಕಾದಲ್ಲಿನ ಭಾರತೀಯರಿಗೆ ಮತದಾನದ ಹಕ್ಕನ್ನು ನಿರಾಕರಿಸುವ ಮಸೂದೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಅಲ್ಲಿನ ಭಾರತೀಯರಿಗೆ ನೆರವಾಗಲು ಗಾಂಧಿಯವರು ಅಲ್ಲಿನ ತಮ್ಮ ವೀಸಾ ಅವಧಿಯನ್ನು ವಿಸ್ತರಿಸಿದರು. ಮಸೂದೆಯ ಅಂಗೀಕಾರವನ್ನು ತಡೆಯಲು ಅವರು ವಿಫಲರಾದರೂ, ಅಲ್ಲಿನ ಭಾರತೀಯರ ಸಮಸ್ಯೆಗಳನ್ನು ಮುಖ್ಯ ಭೂಮಿಕೆಗೆ ತರಲು ಯಶಸ್ವಿಯಾದರು. 1894ರಲ್ಲಿ ನೇಶನಲ್ ಇಂಡಿಯನ್ ಕಾಂಗ್ರೆಸ್ ಸ್ಥಾಪನೆಗೆ ಸಹಾಯ ಮಾಡುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ಸಮುದಾಯವನ್ನು ಏಕರೂಪವಾದ ರಾಜಕೀಯ ಶಕ್ತಿಯಾಗಿ ಮಾರ್ಪಾಡು ಮಾಡುವಲ್ಲಿ ಗಾಂಧಿ ಅವರು ಯಶಸ್ವಿಯಾಗುತ್ತಾರೆ. ಬಳಿಕ ದಕ್ಷಿಣ ಆಫ್ರಿಕಾದ ಹಲವು ಕಡೆಗಳಲ್ಲಿ ಅವರ ಮೇಲೆ ಹಲ್ಲೆಗಳು ನಡೆಯುತ್ತವೆ. ಇದರಿಂದ ಗಾಂಧಿ ಅವರು ತಮ್ಮ ಹೋರಾಟದ ಹಾದಿಯನ್ನು ಬಲಪಡಿಸುತ್ತಾ ಸಾಗುತ್ತಾರೆ. ಗಾಂಧಿಯವರು 1915ರಲ್ಲಿ ಭಾರತಕ್ಕೆ ವಾಪಸಾದರು. ಬಳಿಕ ಇಲ್ಲಿನ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ತಮ್ಮನ್ನು ಅರ್ಪಿಸಿಕೊಳ್ಳಲು ಮುಂದಾದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಭೆಗಳಲ್ಲಿ ಭಾಗವಹಿಸಿ ತಮ್ಮ ಹೋರಾಟವನ್ನು ವಿವರಿಸುತ್ತಾರೆ. ಇದೇ ಸಂದರ್ಭ ಕಾಂಗ್ರೆಸ್ ಪಕ್ಷದ ಗೌರವಾನ್ವಿತ ನಾಯಕರಾದ ಗೋಪಾಲಕೃಷ್ಣ ಗೋಖಲೆಯವರಿಂದ ಗಾಂಧಿಯವರಿಗೆ ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳು, ರಾಜಕೀಯ ಮತ್ತು ಭಾರತೀಯ ಜನತೆಯ ಪರಿಚಯವಾಗುತ್ತದೆ. ಇದಾದ ಬಳಿಕ ಗಾಂಧಿ ಅವರು ವಿರಮಿಸಿದ್ದೇ ಇಲ್ಲ.