Advertisement

ಇನ್ಮುಂದೆ ಪಾಲಿಕೆಯಿಂದ ನಿತ್ಯವೂ ಕಸ ಸಂಗ್ರಹ

04:08 PM Jun 29, 2021 | Team Udayavani |

ಕಲಬುರಗಿ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಸ ಸಂಗ್ರಹ ಮತ್ತು ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಾಲಿಕೆಯು ಐದು ಕೋಟಿಗೂ ಅಧಿಕ ವೆಚ್ಚದಲ್ಲಿ ಹೊಸ ವಾಹನಗಳನ್ನು ಖರೀದಿಸುತ್ತಿದೆ. ಹೀಗಾಗಿ ಶೀಘ್ರವೇ ಎಲ್ಲ ಬಡಾವಣೆಗಳಲ್ಲೂ ಮನೆ-ಮನೆಯಿಂದ ನಿತ್ಯ ಕಸ ಸಂಗ್ರಹ ಕಾರ್ಯ ನಡೆಯಲಿದೆ.

Advertisement

ನಗರದಲ್ಲಿ ಜನ ಸಂಖ್ಯೆ ಮತ್ತು ಜನ ವಸತಿ ಪ್ರದೇಶಗಳು ಹೆಚ್ಚುತ್ತಿದ್ದಂತೆ ಘನತ್ಯಾಜ್ಯ ಕೂಡ ಅಧಿಕವಾಗಿ ಉತ್ಪತ್ತಿ ಆಗುತ್ತಿದೆ. ಇದರ ಸಂಗ್ರಹಕ್ಕಾಗಿಯೇ ಮಹಾನಗರ ಪಾಲಿಕೆಯು ಈಗಾಗಲೇ 80 ವಾಹನಗಳನ್ನು ಬಳಕೆ ಮಾಡುತ್ತಿದೆ. ಆದರೂ, ಹಲವು ಬಡಾವಣೆಗಳಲ್ಲಿ ನಿತ್ಯ ಕಸ ಸಂಗ್ರಹ ಕಾರ್ಯಕ್ಕೆ ಸಾಲುತ್ತಿಲ್ಲ. ಆದ್ದರಿಂದ ಅಧಿಕಾರಿಗಳು ಹೊಸ ವಾಹನಗಳ ಖರೀದಿ ಮಾಡುತ್ತಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ದಿನವೂ 200 ಟನ್‌ ತ್ಯಾಜ್ಯ ಸಂಗ್ರಹವಾಗುತ್ತಿದೆ.

ಕೆಲ ವಾರ್ಡ್‌ಗಳು ಮತ್ತು ಬಡಾವಣೆಗಳಲ್ಲಿ ಈಗಾಗಲೇ ನಿತ್ಯ ಕಸ ಸಂಗ್ರಹ ಮಾಡಲಾಗುತ್ತಿದೆ. ಅನೇಕ ಕಡೆಗಳಲ್ಲಿ ಎರಡೂ¾ರು ದಿನಗಳಿಗೊಮ್ಮೆ ಸಂಗ್ರಹ ಕಾರ್ಯ ನಡೆಯುತ್ತಿದೆ. ಎಲ್ಲೆಡೆ ಕೂಡ ಅಂದಿನ ಕಸ ಅಂದೇ ಸಂಗ್ರಹ ಮತ್ತು ವಿಲೇವಾರಿ ಮಾಡಬೇಕೆಂಬ ಉದ್ದೇಶದಿಂದ ಒಟ್ಟು ನೂರು ವಾಹನಗಳ ಖರೀದಿಗೆ ಮುಂದಾಗಿದ್ದೇವೆ ಎಂದು ಪಾಲಿಕೆಯ ಆಯಕ್ತ ಸ್ನೇಹಲ್‌ ಸುಧಾಕರ ಲೇಖಂಡೆ “ಉದಯವಾಣಿ’ಗೆ ತಿಳಿಸಿದರು. ಪಾಲಿಕೆಗೆ ಬಂದ ವಾಹನಗಳು: ಹೊಸ ವಾಹನಗಳ ಖರೀದಿ ಪ್ರಕ್ರಿಯೆಯನ್ನು ಪಾಲಿಕೆ ಅಧಿಕಾರಿಗಳು ಈಗಾಗಲೇ ಆರಂಭಿಸಿದ್ದು, ಹಲವು ವಾಹನಗಳು ಪಾಲಿಕೆಗೆ ಬಂದು ಸೇರಿವೆ. ಪಾಲಿಕೆಯಲ್ಲಿ ಸದ್ಯ ಒಟ್ಟಾರೆ 165 ವಾಹನಗಳು ಇವೆ. ಇವುಗಳಲ್ಲಿ 80 ವಾಹನಗಳನ್ನು ಕಸ ಸಂಗ್ರಹಕ್ಕೆ ಬಳಸಲಾಗುತ್ತಿದೆ. ಆದರೆ, ತ್ಯಾಜ್ಯ ಸಂಗ್ರಹಕ್ಕಾಗಿಯೇ 137 ವಾಹನಗಳ ಅಗತ್ಯ ಇದೆ.

ಹೀಗಾಗಿ ಎರಡು ಹಂತದಲ್ಲಿ 66 ಕಸ ಸಂಗ್ರಹ ವಾಹನಗಳ ಖರೀದಿಸಲಾಗುತ್ತಿದೆ. ಇದರಲ್ಲಿ 40 ವಾಹನಗಳು ಬಂದಿದ್ದು, ಆರ್‌ಟಿಓ ಕಚೇರಿ ಕಾರ್ಯ ನಡೆಯುತ್ತಿದೆ ಎನ್ನುತ್ತಾರೆ ಉಪ ಆಯಕ್ತ ಆರ್‌.ಪಿ.ಜಾಧವ್‌. ಕಸ ವಿಲೇವಾರಿ ಹಾಗೂ ಸಂಸ್ಕರಣೆ ಕಾರ್ಯಕ್ಕಾಗಿ ಐದು ಜೆಸಿಬಿಗಳು ಮತ್ತು ಎರಡು ಹಿಟಾಚಿಗಳನ್ನು ಖರೀದಿ ಮಾಡಲಾಗುತ್ತಿದೆ. ಈಗಾಗಲೇ ಎರಡು ಜೆಸಿಬಿ ಮತ್ತು ಒಂದು ಹಿಟಾಚಿ ಉದನೂರು ಕಸ ಸಂಸ್ಕರಣೆ ಕೇಂದ್ರಕ್ಕೆ ಬಂದಿವೆ. ಇದಲ್ಲದೇ, ಹೊಸದಾಗಿ ಐದು ಟಿಪ್ಪರ್‌ಗಳ ಖರೀದಿಗೂ ಆದೇಶ ಮಾಡಲಾಗಿದೆ. ಇವೆಲ್ಲದಕ್ಕೂ 5.50 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಪಿಆರ್‌ಎಸ್‌ ಅವಳಡಿಕೆ: ಕಸ ಸಂಗ್ರಹಕ್ಕೆ ವಾಹನಗಳ ಕೊರತೆಯಿಂದಾಗಿ ಕಾರ್ಮಿಕರ ಕಾರ್ಯಕ್ಷಮತೆ ಕಾಯ್ದುಕೊಳ್ಳಲು ಕೂಡ ಕಷ್ಟವಾಗುತ್ತಿತ್ತು. ವಾಹನಗಳ ಸಂಖ್ಯೆಯೇ ಕಡಿಮೆ ಇದೆ. ನಾವು ಹೇಗೆ ಸಂಗ್ರಹಕ್ಕೆ ಹೋಗುವುದು ಎಂದು ಕೆಲ ಕಾರ್ಮಿಕರು ನೆಪ ಹೇಳುತ್ತಿದ್ದರು. ಆದರೆ, ಈಗ ಹೊಸ ವಾಹನಗಳ ಖರೀದಿಯಿಂದ ಅಗತ್ಯಕ್ಕೆ ತಕ್ಕಷ್ಟು ವಾಹನಗಳು ಲಭ್ಯವಾಗಲಿವೆ. ಜತೆಗೆ ವಾಹನಗಳಿಗೆ ಜಿಪಿಆರ್‌ಎಸ್‌ ತಂತ್ರಜ್ಞಾನ ಅವಳಡಿಕೆಗೂ ಮುಂದಾಗಿದ್ದು, ಇದರಿಂದ ಕಾರ್ಮಿಕರ ಕಾರ್ಯಕ್ಷಮತೆ ಕಾಪಾಡಿಕೊಳ್ಳಲೂ ಪಾಲಿಕೆಗೆ ಅನುಕೂಲವಾಗಲಿವೆ.

Advertisement

ಕಸ ಸಂಗ್ರಹ ಬಳಕೆಯಲ್ಲಿರುವ 80 ವಾಹನಗಳ ಪೈಕಿ ಹಲವು ಹಳೆ ವಾಹನಗಳು ಇವೆ. ಇದರಲ್ಲಿ ಹತ್ತು ಹೆಚ್ಚು ವಾಹನಗಳು ಗುಜರಿಗೆ ಸೇರಲಿವೆ. ಹೊಸ ವಾಹನಗಳ ಆಗಮನದಿಂದ ಸರಾಗವಾಗಿ ಕಸ ಸಂಗ್ರಹ ನಡೆಯಲಿವೆ. ಮೇಲಾಗಿ ಆ ವಾಹನಗಳಿಗೆ ಜಿಪಿಆರ್‌ ಎಸ್‌ ತಂತ್ರಜ್ಞಾನ ಅವಳಡಿಕೆ ಮಾಡಲಾಗುತ್ತಿದ್ದು, ಇದಕ್ಕೆ ಟೆಂಡರ್‌ ಕೂಡ ನೀಡಲಾಗಿದೆ. ನಿತ್ಯ ಒಂದು ವಾಹನದಿಂದ 700ರಿಂದ 900 ಮನೆಗಳ ಸಂಗ್ರಹ ಗುರಿಯನ್ನು ಹೊಂದಲಾಗಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು

 

 

Advertisement

Udayavani is now on Telegram. Click here to join our channel and stay updated with the latest news.

Next