ಮಣಿಪಾಲ:ಕನ್ನಡ ಚಿತ್ರರಂಗದ ಹಿರಿಯ ನಟ, ಎವರ್ ಗ್ರೀನ್ ಹೀರೋ ಅನಂತ್ ನಾಗ್ ಹಾಗೂ ಪತ್ನಿ ಗಾಯತ್ರಿ ಅನಂತ್ ನಾಗ್ ಅವರು ಶುಕ್ರವಾರ (ಸೆಪ್ಟೆಂಬರ್ 17) ಉದಯವಾಣಿ ದೈನಿಕದ ಪ್ರಧಾನ ಕಚೇರಿಗೆ ಭೇಟಿ ನೀಡಲಿದ್ದಾರೆ. ಅನಂತ್ ನಾಗ್ ದಂಪತಿ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಉದಯವಾಣಿ ಕಚೇರಿಗೆ ಭೇಟಿ ನೀಡಲಿದ್ದಾರೆ. ನಂತರ ಅವರು ಉದಯವಾಣಿ ಡಾಟ್ ಕಾಮ್ ನ ತೆರೆದಿದೆ ಮನೆ ಬಾ ಅಥಿತಿ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಉದಯವಾಣಿ ಡಾಟ್ ಕಾಮ್ ನ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ನಟ ಅನಂತ್ ನಾಗ್ ಅವರು ತಮ್ಮ ಸುದೀರ್ಘ ಸಿನಿ ಪಯಣ, ರಂಗಭೂಮಿ ಸೇರಿದಂತೆ ಇತ್ತೀಚಿಗಿನ ಸಿನಿಮಾಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲಿದ್ದಾರೆ.
ಅನಂತ್ ನಾಗ್ ಅವರು 1987ರಲ್ಲಿ ನಟಿ ಗಾಯತ್ರಿ ಅವರನ್ನು ವಿವಾಹವಾಗಿದ್ದರು. ಗಾಯತ್ರಿ ಅವರು ಶಂಕರ್ ನಾಗ್ ಅಭಿನಯದ ಆಟೋ ರಾಜ ಸಿನಿಮಾದಲ್ಲಿ ನಟಿಸಿದ್ದರು. ಗಾಯತ್ರಿ ಅವರು 1972ರಲ್ಲಿ ಹಿಂದಿಯಲ್ಲಿ ತೆರೆಕಂಡಿದ್ದ ವಿಕ್ಟೋರಿಯಾ ನಂ.203 ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ಬೆಳ್ಳಿ ತೆರೆಗೆ ಪ್ರವೇಶಿಸಿದ್ದರು. ನಂತರ ಹಲವಾರು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದು, ಬಳಿಕ ಕನ್ನಡ ಚಿತ್ರರಂಗದತ್ತ ಹೊರಳಿದ್ದರು. ವಸಂತ ಗೀತ, ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು, ಜ್ವಾಲಾಮುಖಿ, ಶ್ವೇತ ಗುಲಾಬಿ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದರು.
1973ರಲ್ಲಿ ತೆರೆಕಂಡಿದ್ದ ಕನ್ನಡ ಚಿತ್ರ ಸಂಕಲ್ಪದ ಮೂಲಕ ಅನಂತ್ ನಾಗ್ ಅವರು ಬೆಳ್ಳಿತೆರೆಗೆ ಪ್ರವೇಶಿಸಿದ್ದರು. ಕನ್ನಡದಲ್ಲಿ ಬಂದ ಹೊಸ ಅಲೆಯ ಚಿತ್ರಗಳಲ್ಲಿ ಸಂಕಲ್ಪ ಗಮನಾರ್ಹವಾದ ಚಿತ್ರವಾಗಿದೆ. ನಂತರ ಹಂಸಗೀತೆ, ಕನ್ನೇಶ್ವರ ರಾಮ, ಬರ, ಅವಸ್ಥೆ, ಉದ್ಭವ, ಮಿಂಚಿನ ಓಟ, ಆ್ಯಕ್ಸಿಡೆಂಟ್, ಬೆಳದಿಂಗಳ ಬಾಲೆ, ಮತದಾನ, ಬೆಂಕಿಯ ಬಲೆ, ಚಂದನದ ಗೊಂಬೆ, ನಾ ನಿನ್ನ ಬಿಡಲಾರೆ, ನೋಡಿ ಸ್ವಾಮಿ ನಾವಿರೋದೆ ಹೀಗೆ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಅಷ್ಟೇ ಅಲ್ಲ ಡಾ.ರಾಜ್ ಕುಮಾರ್ ಜತೆ ಕಾಮನಬಿಲ್ಲು, ವಿಷ್ಣುವರ್ಧನ್ ಜತೆಗಿನ ನಿಷ್ಕರ್ಷ, ಮತ್ತೆ ಹಾಡಿತು ಕೋಗಿಲೆ, ಜೀವನದಿ, ರವಿಚಂದ್ರನ್ ಅವರ ರಣಧೀರ, ಶಾಂತಿಕ್ರಾಂತಿ, ಮುಂಗಾರು ಮಳೆ, ಗಾಳಿಪಟ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಭಾರತದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ, ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರವಾಹಿಯಲ್ಲಿ ಅನಂತ್ ನಾಗ್ ಅಭಿನಯಿಸಿದ್ದರು.
ಇತ್ತೀಚೆಗಿನ ಕೆಜಿಎಫ್ ಚಾಪ್ಟರ್ 1, ಕವಲು ದಾರಿ, ಯಾನ, ಆಯುಷ್ಮಾನ್ ಭವ, ಆಡುವ ಗೊಂಬೆ, ತೆಲುಗಿನ ಭೀಷ್ಮ ಚಿತ್ರದಲ್ಲಿಯೂ ನಟಿಸುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಹಿಂದಿಯ ಅಂಕುರ್, ನಿಶಾಂತ್, ಭೂಮಿಕಾ, ಮಂಥನ್, ಕೊಂಡುರಾ, ಕಲಿಯುಗ್, ಮಂಗಲ್ ಸೂತ್ರ, ರಾತ್, ಯುವ ಸಿನಿಮಾದಲ್ಲಿ ಅನಂತ್ ನಾಗ್ ತಮ್ಮ ಛಾಪನ್ನು ಮೂಡಿಸಿದ್ದಾರೆ.
ಅನಂತ್ ನಾಗ್ ಅವರು ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಹಾಗೂ ಇಂಗ್ಲಿಸ್ ಭಾಷೆಯ ಸಿನಿಮಾಗಳಲ್ಲಿ ಗಮರ್ನಾಹವಾದ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಂತ್ ನಾಗ್ ಅವರ ಅದ್ಭುತ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.