Advertisement

ಎಚ್ಚೆತ್ತುಕೊಳ್ಳದಿದ್ದರೆ ಇನ್ನಷ್ಟು ಅನಾಹುತ

03:25 AM Jul 09, 2020 | Sriram |

ಪುತ್ತೂರು: ಮನೆ ಅಥವಾ ಕಟ್ಟಡದ ಸುರಕ್ಷತೆ ದೃಷ್ಟಿಯಿಂದ ನಿರ್ಮಿಸಿರುವ ಆವರಣಗೋಡೆ ಪ್ರಾಣಕ್ಕೆ ಕುತ್ತು ಉಂಟು ಮಾಡುತ್ತಿದೆ.

Advertisement

ಜು. 7ರಂದು ಪರ್ಲಡ್ಕದ ಗೋಳಿಕಟ್ಟೆ ಬಳಿ ಸಂಭವಿಸಿದ ದುರಂತ ಹಾಗೂ ಈ ಹಿಂದಿನ ಕೆಲವು ಘಟನೆಗಳ ಇದಕ್ಕೆ ಪುಷ್ಟಿ ನೀಡುತ್ತಿವೆ. ಹಲವೆಡೆ ಆವರಣ ಗೋಡೆಗಳು ಅಸುರಕ್ಷಿತವಾಗಿದ್ದು, ಸ್ಥಳೀಯಾಡಳಿತಗಳು ಎಚ್ಚೆತ್ತುಕೊಳ್ಳದಿದ್ದರೆ ಇನ್ನಷ್ಟು ಅಪಾಯ ಸಂಭವಿಸುವ ಸಾಧ್ಯತೆ ಇದೆ ಎನ್ನುತ್ತಿದೆ ವಾಸ್ತವ ಚಿತ್ರಣ.

ಮಣ್ಣು ಸಡಿಲು ಕುಸಿತಕ್ಕೆ ಹೇತು!
ಬಹುತೇಕ ಕಡೆ ಮಣ್ಣಿನ ಗುಣಮಟ್ಟ ಪರಿಶೀಲಿಸದೆ ಆವರಣ ಗೋಡೆ ಕಟ್ಟಲಾಗುತ್ತದೆ. ಪಿಲ್ಲರ್‌ ಆವಶ್ಯಕತೆ ಇದ್ದರೂ ಕೆಂಪು ಕಲ್ಲಿನಲ್ಲೇ ನಿರ್ಮಿಸ ಲಾಗುತ್ತಿದೆ. ಪರಿಣಾಮ ಮಳೆಗಾಲದಲ್ಲಿ ಮಣ್ಣು ನೀರು ಹೀರಿ ಗೋಡೆ ಸಾಮರ್ಥ್ಯ ತಾಳಲಾರದೆ ಕುಸಿಯುತ್ತಿದೆ. 3 ವರ್ಷಗಳಿಂದ ನಗರ, ಗ್ರಾಮಾಂತರ ಪ್ರದೇಶದಲ್ಲಿ ಆವರಣ ಗೋಡೆ ಕುಸಿದು ಆರೇಳು ಮಂದಿ ಮೃತ ಪಟ್ಟಿದ್ದರೆ, ಹಲವರಿಗೆ ಗಂಭೀರ ಗಾಯ ಗಳಾಗಿವೆ.

ಅನುಮತಿ ರಹಿತ ಆವರಣ ಗೋಡೆ!
ಗೃಹ ಅಥವಾ ಗೃಹೇತರ ಕಟ್ಟಡಗಳ ಸುತ್ತ ಆವರಣಗೋಡೆ ನಿರ್ಮಿಸುವ ಸಂದರ್ಭ ನಗರಸಭೆ, ಗ್ರಾಮಾಂತರ ಪ್ರದೇಶದಲ್ಲಿ ಗ್ರಾ.ಪಂ.ಗಳಿಂದ ಒಪ್ಪಿಗೆ ಪಡೆದುಕೊಳ್ಳಬೇಕು. ಪರವಾನಿಗೆ ಪತ್ರಕ್ಕೆ ಅರ್ಜಿ ಸಲ್ಲಿಸುವ ಸಂದರ್ಭ ಕೈಗೊಳ್ಳುವ ಕಾಮಗಾರಿಗಳ ಬಗ್ಗೆ ಉಲ್ಲೇಖೀಸಬೇಕು. ಬಹುತೇಕ ಅರ್ಜಿಗಳಲ್ಲಿ ಮನೆ ಅಥವಾ ವಾಣಿಜ್ಯ ಕಟ್ಟಡ ಎಂದು ನಮೂದಿಸಿ ಆವರಣ ಗೋಡೆ ಬಗ್ಗೆ ಉಲ್ಲೇಖ ಇರುವುದಿಲ್ಲ. ಆವರಣಗೋಡೆ ಕಟ್ಟುವಾಗ ಸಾರ್ವ ಜನಿಕ ಆಸ್ತಿಪಾಸ್ತಿ, ಪ್ರಾಣಕ್ಕೆ ಆಪತ್ತು ಉಂಟಾಗದಂತೆ ಪರಿಶೀಲನೆ ನಡೆಸಿ ಸ್ಥಳೀಯಾಡಳಿತ ಅನುಮತಿ ನೀಡುವುದು ಕ್ರಮ. ಆದರೆ ಶೇ.95ಕ್ಕೂ ಅಧಿಕ ಆವರಣ ಗೋಡೆ ನಿರ್ಮಾಣದ ವೇಳೆ ಮುಂಜಾಗ್ರತೆ ಕ್ರಮ ಪಾಲನೆ ಆಗಿಲ್ಲ.

ಪಟ್ಟಿಗೆ ಸೂಚನೆ
ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಕಟ್ಟುವ ಸಂದರ್ಭದಲ್ಲಿ ಆವರಣ ಗೋಡೆ ಬಗ್ಗೆ ಉಲ್ಲೇಖೀಸಬೇಕು. ಇಲ್ಲದಿದ್ದರೆ ಅದು ಅನಧಿಕೃತವಾಗುತ್ತದೆ. ಪ್ರತಿ ಗ್ರಾ.ಪಂ. ವ್ಯಾಪ್ತಿಯ ಅಪಾಯಕಾರಿ ಆವರಣ ಗೋಡೆ, ಧರೆಗಳ ಬಗ್ಗೆ ಪಟ್ಟಿ ಸಲ್ಲಿಸುವಂತೆ ಪಿಡಿಗಳಿಗೆ ಸೂಚಿಸಲಾಗಿದೆ ಎಂದು ಪುತ್ತೂರು ತಾ.ಪಂ. ಇಒ ನವೀನ್‌ ಭಂಡಾರಿ ತಿಳಿಸಿದ್ದಾರೆ.

Advertisement

ಸ್ಥಳೀಯಾಡಳಿತ ಒಪ್ಪಿಗೆ ಪತ್ರ ಪಡೆಯಬೇಕು
ಮನೆ ಅಥವಾ ಕಟ್ಟಡ ಕಟ್ಟುವ ಸ್ಥಳದ ಕನ್ವರ್ಶನ್‌ ಮಾಡಿಕೊಡುವ ಜವಾ‌ಬ್ದಾರಿ ಕಂದಾಯ ಇಲಾಖೆಗೆ ಸೇರಿದೆ. ಆ ಸ್ಥಳದಲ್ಲಿ ಆವರಣ ಗೋಡೆ ಅಥವಾ ಕಟ್ಟಡ ನಿರ್ಮಿಸುವ ಸಂದರ್ಭ ಅದರಿಂದ ಇತರರಿಗೆ ತೊಂದರೆ ಆಗದಂತೆ ಜವಾಬ್ದಾರಿಯನ್ನು ಕಾಮಗಾರಿ ಮಾಲಕರು ವಹಿಸಿಕೊಳ್ಳಬೇಕು. ಅನಾಹುತ ಸಂಭವಿಸಿದರೆ ಅದರ ಮಾಲಕನೆ ನಷ್ಟ ಭರಿಸಿಕೊಡಬೇಕು. ಈ ಬಗ್ಗೆ ಆರಂಭದಲ್ಲೇ ಸ್ಥಳೀಯಾಡಳಿತ ಒಪ್ಪಿಗೆ ಪತ್ರ ಪಡೆದುಕೊಳ್ಳಬೇಕು.
-ರಮೇಶ ಬಾಬು, ತಹಶೀಲ್ದಾರ್‌, ಪುತ್ತೂರು.

ಘಟನೆ 1
ಪುತ್ತೂರು ಪೇಟೆ ಸಮೀಪದಲ್ಲಿ ರೈಲು ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಸಾಲ್ಮರ ಹೆಬ್ಟಾರಬೈಲಿನಲ್ಲಿ 2018 ಜು. 6ರಂದು ತಡರಾತ್ರಿ 1.30ರ ಹೊತ್ತಿಗೆ ಹತ್ತಿರದ ಮನೆಯೊಂದರ ಬೃಹತ್‌ ಆವರಣಗೋಡೆ ಮನೆ ಮೇಲೆ ಕುಸಿದು ಬಿದ್ದು ಅಜ್ಜಿ ಮತ್ತು ಮೊಮ್ಮಗ ಪ್ರಾಣ ಕಳೆದುಕೊಂಡಿದ್ದರು.

ಘಟನೆ 2
2018 ಎ. 24ರಂದು ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮುಂಭಾಗದಲ್ಲಿ ಖಾಸಗಿ ಕಟ್ಟಡವೊಂದರ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಧರೆ ಕುಸಿದು ಕೊಪ್ಪಳ ಮೂಲದ ಇಬ್ಬರು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟಿದ್ದರು. 20 ಅಡಿ ಮೇಲ್ಭಾಗದಿಂದ ಮಣ್ಣು ಏಕಾಏಕಿ ಕುಸಿದು ಬಿದ್ದು ಈ ಘಟನೆ ಸಂಭವಿಸಿತ್ತು. ಇಲ್ಲಿ ಆವರಣಗೋಡೆ ರಹಿತ ಧರೆ ಕುಸಿದು ಈ ಅನಾಹುತ ಉಂಟಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next