Advertisement

ವಲಯವಾರು ನೀರು ಸರಬರಾಜು ಮಾಡಿದರೂ ತಪ್ಪಿಲ್ಲ ನೀರಿನ ಸಮಸ್ಯೆ

10:35 PM Dec 29, 2020 | Team Udayavani |

ಉಡುಪಿ: ವಾರಾಹಿ ಕುಡಿಯುವ ನೀರಿನ ಪೈಪ್‌ಲೈನ್‌ನ್ನು ರೈಲ್ವೇ ಟ್ರ್ಯಾಕ್‌ ಮೂಲಕ ಪಾಸ್‌ ಮಾಡಲು ಕೊಂಕಣ್‌ ರೈಲ್ವೇ ಸುಮಾರು 50 ಲ.ರೂ. ಠೇವಣಿ ಕೇಳಿದ್ದು, ಈ ಮೊತ್ತವನ್ನು ಪಾವತಿಸಲು ಸಾಧ್ಯವಿಲ್ಲ. ಈ ಬಗ್ಗೆ ಕೊಂಕಣ್‌ ರೈಲ್ವೇಗೆ ಪತ್ರ ಬರೆಯು ವಂತೆ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

Advertisement

ವಾರಾಹಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಇಂದ್ರಾಳಿ, ದೊಡ್ಡಣಗುಡ್ಡೆ ಸೇರಿದಂತೆ 4 ವಾರ್ಡ್‌ನಲ್ಲಿ ಪೈಪ್‌ಲೈನ್‌ ಅಳವಡಿಸಲಾಗುತ್ತಿದೆ. ಇಂದ್ರಾಳಿ ವಾರ್ಡ್‌ ನಲ್ಲಿ ಪೈಪ್‌ಲೈನ್‌ ರೈಲ್ವೇ ಟ್ರ್ಯಾಕ್‌ ಪಾಸ್‌ ಮಾಡಬೇಕಾಗಿದೆ. ಅದಕ್ಕೆ ಕೊಂಕಣ್‌ ರೈಲ್ವೇ ಸುಮಾರು 50 ಲ.ರೂ. ಠೇವಣಿ ಇಡುವಂತೆ ಹೇಳಿರುವುದಾಗಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ರಘುಪತಿ ಭಟ್‌, ನಗರಸಭೆಯವರು ಸಂಪೂರ್ಣ ಕಾಮಗಾರಿ ಮಾಡಿ, ಅವರಿಗೆ ಠೇವಣಿ ಕೊಡಲು ಸಾಧ್ಯವಿಲ್ಲ. ಈ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಕೊಂಕಣ್‌ ರೈಲ್ವೇಗೆ ಪತ್ರ ಬರೆಯಬೇಕು. ಜತೆಗೆ ದಿಶಾ ಸಭೆಯಲ್ಲಿ ಸಂಸದರ ಗಮನಕ್ಕೆ ತರಲಾಗುವುದು ಎಂದರು.

15 ದಿನಗಳೊಳಗೆ ಹೊಸ ಪಂಪ್‌
ಎಇಇ ಮೋಹನ್‌ ರಾಜ್‌ ಮಾತನಾಡಿ, ಬಜೆಯಲ್ಲಿ ನೀರಿನ ಹರಿವು ಇನ್ನೂ ನಿಂತಿಲ್ಲ. ಶಿರೂರಿನಲ್ಲಿ ಸ್ಯಾಂಡ್‌ ಬ್ಯಾಗ್‌ ಹಾಕಿ ನೀರನ್ನು ಸಂಗ್ರಹಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಬಜೆಯಲ್ಲಿ ಸ್ಯಾಂಡ್‌ ಬ್ಯಾಗ್‌ ಹಾಕಲಾಗುತ್ತದೆ. ಇಲ್ಲಿರುವ ಹಳೆಯ ಪಂಪ್‌ನ ಸಾಮರ್ಥ್ಯ ಕಡಿಮೆ ಆಗಿದೆ.

ಅದನ್ನು ಮುಂದಿನ 15 ದಿನಗಳೊಳಗೆ ಬದಲಾಯಿಸಿ ಹೊಸ ಪಂಪ್‌ ಅಳವಡಿಸ ಲಾಗುವುದು. ಮಣಿಪಾಲದಲ್ಲಿ ರಾತ್ರಿ ವೇಳೆ ಜನರು ನಳ್ಳಿಯನ್ನು ಹಾಗೇ ತೆರೆದಿಡುವುದರಿಂದ ನೀರು ಚರಂಡಿ ಸೇರುತ್ತಿದೆ. ಇದರಿಂದಾಗಿ ನೀರಿನ ಒತ್ತಡ ಕಡಿಮೆಯಾಗುತ್ತಿದೆ. ಡಿ.30ರಿಂದ 6 ಗಂಟೆಗಳ ಕಾಲ ಗ್ರಾ.ಪಂ.ಗಳಿಗೆ ನೀರು ಪೂರೈಕೆ ಮಾಡಲಾಗುವುದು ಎಂದ‌ರು.

Advertisement

ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌ ಮಾತನಾಡಿ, ನೀರಿನ ಸಮಸ್ಯೆ ಕುರಿತು ಡಿ.31ರಂದು ನಡೆಯುವ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗುತ್ತದೆ ಎಂದರು.

ಪೈಪ್‌ಲೈನ್‌ ಕಾಮಗಾರಿಯಿಂದ ಸಮಸ್ಯೆ
ವಾರಾಹಿಯಿಂದ ಉಡುಪಿ ನಗರಸಭೆ ನೀರು ಪೂರೈಸುವ ಯೋಜನೆ ಸಂಬಂಧ ನಗರದಲ್ಲಿ ನಡೆಯುತ್ತಿರುವ ಪೈಪ್‌ಲೈನ್‌ ಕಾಮಗಾರಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಬಗ್ಗೆ ವಾರಾಹಿ ಕಿರಿಯ ಎಂಜಿನಿಯರ್‌ ರಾಜಶೇಖರ್‌ ಸಭೆಯಲ್ಲಿ ಮಾಹಿತಿ ನೀಡಿದರು. ಕಾಮಗಾರಿಯಿಂದ ಎಪ್ರಿಲ್‌ನಲ್ಲಿ ನಗರದಲ್ಲಿ ನೀರಿನ ಸಮಸ್ಯೆ ತಲೆದೋರಬಹುದು ಎಂದು ಸದಸ್ಯರು ಆತಂಕ ವ್ಯಕ್ತಪಡಿಸಿದರು. ಆ ನಿಟ್ಟಿನಲ್ಲಿ ವಾರ್ಡ್‌ವಾರು ಕಾಮಗಾರಿ ನಡೆಸುವಂತೆ ಮತ್ತು ನಗರಸಭೆ ಸದಸ್ಯರು ಹಾಗೂ ಎಂಜಿನಿಯರ್‌ ಅವರ ಸಲಹೆಯಂತೆ ಕಾಮಗಾರಿ ನಡೆಸಲು ಸಭೆ ಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ಕಸ ಎಸೆಯುವವರ ವಿರುದ್ಧ ಕ್ರಮ
ನಗರದ ಎಲ್ಲೆಂದರಲ್ಲಿ ಕಸ ಎಸೆ ಯುವವರ ವಿರುದ್ಧ ಕ್ರಮಕ್ಕೆ ಸಭೆಯಲ್ಲಿ ಸದಸ್ಯರು ಆಗ್ರ ಹಿಸಿದರು. ಇದಕ್ಕೆ ಉತ್ತರಿಸಿದ ಪರಿಸರ ಎಂಜಿನಿಯರ್‌ ಸ್ನೇಹಾ ಮಾತನಾಡಿ, ಇಲ್ಲಿಯವರೆಗೆ ರಸ್ತೆಗೆ ಕಸ ಎಸೆಯುವವರಿಂದ 66,000 ರೂ. ದಂಡ ವಸೂಲಿ ಮಾಡಲಾಗಿದೆ. ರಸ್ತೆಯಲ್ಲಿ ಈಗಾಗಲೇ ಕಸ ಎಸೆಯುವ ಪ್ರದೇಶವನ್ನು ಗುರುತಿಸಲಾಗಿದೆ. ಅಲ್ಲಿನ ಕಸವನ್ನು ತೆಗೆಯುವಂತೆ ಸ್ವಸಹಾಯ ಸಂಘದವರಿಗೂ ಸೂಚಿಸಿದ್ದೇವೆ ಎಂದರು.

ರಸ್ತೆಯಲ್ಲೇ ಕಸ
ಸದಸ್ಯ ಗಿರೀಶ್‌ ಅಂಚನ್‌ ಮಾತನಾಡಿ, ಹೆಚ್ಚಾಗಿ ಕಸ ಎಸೆಯುವ ಸ್ಥಳಗಳನ್ನು ಗುರುತಿಸಿ ಸಿಸಿ ಕೆಮರಾವನ್ನು ಆಳವಡಿಸಬೇಕು. ಜತೆಗೆ ನಾಗನ ಚಿತ್ರ ಇರುವ ಬ್ಯಾನರ್‌ ಹಾಕಿದರೆ ಕಸ ಎಸೆಯುವವರ ಸಂಖ್ಯೆ ಕಡಿಮೆ ಆಗಬಹುದು ಎಂದರು. ಕಸ ಎಸೆಯುವವರಿಗೆ 5,000 ರೂ. ದಂಡ ವಿಧಿಸಬೇಕು ಎಂದು ವಿಜಯ ಕೊಡವೂರು ಒತ್ತಾಯಿಸಿದರು. ಎ.ಪಿ.ಕೊಡಂಚ ಮಾತನಾಡಿ, ಸ್ವಸಹಾಯ ಸಂಘದವರು ಮನೆಯಿಂದ ಸರಿಯಾಗಿ ಕಸ ಸಂಗ್ರಹಿಸದ ಹಿನ್ನೆಲೆಯಲ್ಲಿ ಜನ ರಸ್ತೆಯಲ್ಲಿ ಕಸ ಎಸೆಯುತ್ತಿದ್ದಾರೆ ಎಂದು ದೂರಿದರು.

ತ್ಯಾಜ್ಯಕ್ಕೆ ಹಣ ನಿಗದಿ
ರಘುಪತಿ ಭಟ್‌ ಮಾತನಾಡಿ, ಅಲೆವೂರು ಸೇರಿದಂತೆ ನಗರಸಭೆ ಸುತ್ತ ಮುತ್ತಲಿನ ಗ್ರಾ.ಪಂ.ಗಳಿಂದ ಜ.15ರಿಂದ ಹಸಿ ಹಾಗೂ ಒಣ ತ್ಯಾಜ್ಯವನ್ನು ಕೆಜಿಯೊಂದಕ್ಕೆ ಹಣ ನಿಗದಿಪಡಿಸಿ ಖರೀದಿಸಲು ಕ್ರಮ ಜರಗಿಸಲಾಗುವುದು. ಕೆಲಸ ಮಾಡದ ಸ್ವಸಹಾಯ ಸಂಘವನ್ನು ಬದಲಾಯಿಸುವಂತೆ ಸೂಚನೆ ನೀಡಿದರು.

ವಿಸಿಟಿಂಗ್‌ ಕಾರ್ಡ್‌ ವಿತರಣೆ!
ನಗರಸಭೆಗೆ ಸಾಮಾನ್ಯ ಜನರು ನೇರವಾಗಿ ಬಂದರೆ ಯಾವುದೇ ಕೆಲಸ ಆಗಲ್ಲ. ದಲ್ಲಾಳಿಗಳ ಕೆಲಸ ಕೂಡಲೇ ಆಗುತ್ತದೆ. ನಗರಸಭೆ ಸಿಬಂದಿಗಳಿಗೆ ಮತ್ತು ದಲ್ಲಾಳಿಗಳಿಗೆ ಏನಾದರೂ ಲಿಂಕ್‌ ಇದೆಯೇ? ಕಚೇರಿಯಲ್ಲಿ ಹೊರಗೆ -ಒಳಗೆ ದಲ್ಲಾಳಿಗಳು ವಿಸಿಟಿಂಗ್‌ ಕಾರ್ಡ್‌ಗಳನ್ನು ಮಾಡಿ ಹಂಚುತ್ತಿದ್ದಾರೆ. ನಗರಸಭೆ ಕೂಡ ಆರ್‌ಟಿಒ ಕಚೇರಿ ರೀತಿ ಆಗಿದೆ. ಕಚೇರಿ ಬಂದ್‌ ಮಾಡಿದ ಅನಂತರವೂ ದಲ್ಲಾಳಿಗಳು ಕಚೇರಿಗೆ ಬರುತ್ತಾರೆ. ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಸದಸ್ಯ ಪ್ರಭಾಕರ ಪೂಜಾರಿ ಅವರು ಒತ್ತಾಯಿಸಿದರು.

ಜನರಿಗೆ ಸೇವೆ ಇಲ್ಲ
ನಗರಸಭೆಯಲ್ಲಿ ಜನಸಾಮ್ಯಾನರಿಗೆ ಸರಿಯಾದ ಸೇವೆಗಳು ಸಿಗುತ್ತಿಲ್ಲ. ಆರೋಗ್ಯ ಇಲಾಖೆಯ ಒಬ್ಬ ಅಧಿಕಾರಿಯನ್ನು ವಿವಿಧ ಕೆಲಸಗಳಿಗೆ ನಿಯೋಜಿಸಲಾಗುತ್ತಿದೆ. ಇದರಿಂದ ಜನನ-ಮರಣ ನೋಂದಣಿಗೆ ತೊಂದರೆಯಾಗಿದೆ. ಅಧಿಕಾರಿಗಳು ಏಕಕಾಲದಲ್ಲಿ ಯಾವ ದಾಖಲೆಗಳು ಬೇಕು ಎನ್ನುವ ಕುರಿತು ಮಾಹಿತಿ ನೀಡುತ್ತಿಲ್ಲ. ಇದರಿಂದ ಜನರು ಪರದಾಡುವಂತಾಗಿದೆ. ಇದಕ್ಕೆ ಮುಕ್ತಿ ನೀಡಬೇಕು ಎಂದು ಸದಸ್ಯೆ ಅಮೃತಾ ಕೃಷ್ಣ ಮೂರ್ತಿ ಒತ್ತಾಯಿಸಿದರು.

ಅಧಿಕಾರಿಗಳಿಗೆ ಸಮಯ ನಿಗದಿ
ನಗರಸಭೆ ಕಚೇರಿಗೆ ಮೂರು ದಿನ ರಜೆ ಇದ್ದರೂ ಕಚೇರಿ ಸಮಯದಲ್ಲಿ ಅಧಿ ಕಾರಿಗಳು ಸಾರ್ವಜನಿಕರಿಗೆ ಸಿಗುತ್ತಿಲ್ಲ ಎಂದು ರಮೇಶ್‌ ಕಾಂಚನ್‌ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಮುಂದಿನ ದಿನದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30ರವರೆಗಿನ ಅವಧಿಯಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಲಭ್ಯವಿರಲಿದ್ದಾರೆ ಎಂದರು.

ಸುರಕ್ಷಾ ಪರಿಕರ ನೀಡುವಂತೆ ಪ್ರಸ್ತಾವನೆ
ಬೀದಿ ನಾಯಿ ಸೇರಿದಂತೆ ವಾರಸುದಾರರು ಇಲ್ಲದ ಪ್ರಾಣಿಗಳಿಗೆ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಬೀಡಿನ ಗುಡ್ಡೆಯಲ್ಲಿ ಮೂರು ಸೆಂಟ್ಸ್‌ ಜಾಗ ಗುರುತಿಸಿರುವ ಬಗ್ಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ನಗರದ ಪಾರ್ಕಿಂಗ್‌ ಸಮಸ್ಯೆ ಪರಿಹಾರಕ್ಕೆ ರಸ್ತೆಗಳಲ್ಲಿ ಮಾರ್ಕ್‌ ಪೈಂಟ್‌, ರಸ್ತೆ ಸುರಕ್ಷಾ ಪರಿಕರಗಳನ್ನು ನಗರಸಭೆಯಿಂದ ನೀಡುವ ಕುರಿತು ನಗರ ಸಂಚಾರ ಪೊಲೀಸ್‌ ಠಾಣೆಯಿಂದ ಪ್ರಸ್ತಾವನೆ ಸಲ್ಲಿಸಲಾಯಿತು. ಸಭೆಯಲ್ಲಿ ಮಣ್ಣಪಳ್ಳ, ಬೀಡಿನಗುಡ್ಡೆ ರಂಗ ಮಂದಿರದ ದುರಸ್ತಿ ಕಾರ್ಯವನ್ನು ನಗರಸಭೆ ವ್ಯಾಪ್ತಿಗೆ ತೆಗೆದುಕೊಳ್ಳುವುದರ ಕುರಿತು ನಿರ್ಣಯ ತೆಗೆದುಕೊಳ್ಳಲಾಯಿತು. ಕುಡಿಯುವ ನೀರಿನ ಪೈಪ್‌ಲೈನ್‌, ವಿದ್ಯುತ್‌ ದೀಪಗಳ ದುರಸ್ತಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್‌, ಪೌರಾಯುಕ್ತ ಡಾ| ಉದಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮಾಸ್ಕ್ ಹಾಕದವರಿಗೆ ದಂಡ
ಆರೋಗ್ಯಾಧಿಕಾರಿಯನ್ನು ಮಾಸ್ಕ್ ದಂಡ ಸಂಗ್ರಹಕ್ಕೆ ಕಳುಹಿಸುತ್ತಿರುವುದರಿಂದ ಕೆಲಸಗಳು ನಿಧಾನಗೊಳ್ಳುತ್ತಿರುವ ಬಗ್ಗೆ ಸದಸ್ಯರ ದೂರಿಗೆ ಪ್ರತಿಕ್ರಿಯಿಸಿದ ಪರಿಸರ ಎಂಜಿನಿಯರ್‌ ಸ್ನೇಹಾ, ಸರಕಾರ ಆದೇಶ ಹಾಗೂ ಡಿಸಿ ಅವರು ನೀಡಿದ ಗುರಿ ತಲುಪಲು ಅಧಿಕಾರಿಗಳು ಹೊರಗಡೆ ಹೋಗಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಬೇಕಾಗುತ್ತದೆ. ಈ ಬಗ್ಗೆ ಈಗಾಗಲೇ ಜಿಲ್ಲಾಡಳಿದಿಂದ ನೋಟಿಸ್‌ ಬಂದಿವೆ ಎಂದರು.

ನೀರು ಪೂರೈಕೆಯಾಗುತ್ತಿಲ್ಲ
ವಲಯವಾರು ನೀರು ಪೂರೈಕೆ ಮಾಡುತ್ತಿದ್ದರೂ ನಗರಸಭೆಯ 35 ವಾರ್ಡ್‌ಗಳ ಕೆಲವು ಮನೆಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ಇದನ್ನು ಕೂಡಲೇ ಸರಿಪಡಿಸಬೇಕು. ನಗರದಲ್ಲಿ ಬೇಸಗೆಯ ಮುನ್ನ ನೀರಿನ ಸಮಸ್ಯೆ ಎದುರಾಗುವಂತೆ ಕಾಣುತ್ತಿದೆ. ಒಂದೂವರೆ ತಿಂಗಳಿನಿಂದ ವಿವಿಧ ವಾರ್ಡ್‌ಗಳಲ್ಲಿ ನೀರು ಪೂರೈಕೆ ಯಾಗುತ್ತಿಲ್ಲ ಎಂದು ಸದಸ್ಯರಾದ ಗಿರೀಶ್‌ ಅಂಚನ್‌, ರಮೇಶ್‌ ಕಾಂಚನ್‌ ಆರೋಪಿಸಿದರು. ಹಿಂದೆ ಮಾಡಿರುವ ನಿರ್ಣಯದಂತೆ ನಗರಸಭೆ ಸುತ್ತಮುತ್ತಲಿನ ಗ್ರಾ.ಪಂ.ಗಳಿಗೆ 6 ಗಂಟೆಗಳ ಕಾಲ ನೀರು ಪೂರೈಕೆ ಮಾಡಬೇಕು ಎಂದು ಶಾಸಕ
ಕೆ. ರಘುಪತಿ ಭಟ್‌ ತಿಳಿಸಿದರು. .

Advertisement

Udayavani is now on Telegram. Click here to join our channel and stay updated with the latest news.

Next