ಕೆಮ್ಮಡೆ: ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಮ್ಮಡೆಯಲ್ಲಿ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಒಂದು ವರ್ಷದ ಹಿಂದೆ ಕುಡಿಯುವ ನೀರಿನ ಸಮಸ್ಯೆಯನ್ನು ಅರಿತು ಕೊಳವೆ ಬಾವಿ ತೋಡಲಾಗಿದ್ದು, ಇದರ ಪ್ರಯೋಜನ ಮಾತ್ರ ಯಾರಿಗೂ ಸಿಗುತ್ತಿಲ್ಲ. ಆದರೆ ಇದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಅಧಿಕಾರಿಗಳಿಂದ ಉತ್ತರ ಸಿಗುತ್ತಿಲ್ಲ.
ಕೆಮ್ಮಡೆ ಪರಿಸರದಲ್ಲಿ ಸುಮಾರು 50 ಕ್ಕೂ ಹೆಚ್ಚು ಮನೆಗಳಿದ್ದು 500ಕ್ಕೂ ಹೆಚ್ಚು ಜನರು ಐದು ಸೆಂಟ್ಸ್ ನಿವಾಸಿಗಳು ಹಾಗೂ ಪರಿಶಿಷ್ಟ ಜಾತಿ,ಪಂಗಡದ ಕಾಲೋನಿಗಳಲ್ಲಿ ವಾಸವಾಗಿದ್ದು,ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿದೆ.
ಸುಮಾರು 3 ಲಕ್ಷ ರೂ.ವೆಚ್ಚದಲ್ಲಿ ತೋಡಿದ ಕೊಳವೆ ಬಾವಿಗೆ ಪಂಪ್ ಅಳ ವಡಿಸಲಾಗಿದೆ,ವಿದ್ಯುತ್ ಸಂಪರ್ಕ ವನ್ನೂ ನೀಡಲಾಗಿದೆ. ಆದರೆ ನೀರು ಬರುತ್ತಿಲ್ಲ. ಈ ಬಗ್ಗೆ ಗ್ರಾಮ ಪಂಚಾಯತ್‌ನಲ್ಲಿ ವಿಚಾರಿಸಿದಾಗ ಹಣದ ಕೊರತೆಯಿಂದ ಗುತ್ತಿಗೆದಾದರು ಗುತ್ತಿಗೆ ಪಡೆದ ಹಣದಷ್ಟು ಕಾಮಗಾರಿ ನಡೆಸಿದ್ದಾರೆ ಎಂಬ ಮಾಹಿತಿ ದೊರೆತಿದೆ ಎನ್ನುತ್ತಾರೆ ಸ್ಥಳೀ ಯರಾದ ಸುರೇಖಾ ಕೆಮ್ಮಡೆ.
ರಸ್ತೆ ಅಗಲೀಕರಣದಿಂದ ಸ್ಥಳಾಂತರ
2018 ರಲ್ಲಿ ನೀರಿನ ಸಮಸ್ಯೆಗೆ ಟಾಸ್ಕ್ ಪೋರ್ಸ್ ಜಿ. ಪಂ.ಯೋಜನೆಯಡಿಯಲ್ಲಿ ಮನ್ನಬೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಮನಗಂಡು ಕಿನ್ನಿಗೋಳಿ ಮುಖ್ಯರಸ್ತೆಯ ರಾಜಾಂಗಣದ ಮುಂದಿನ ರಸ್ತೆಯ ಬದಿಯಲ್ಲಿ ಕೊಳವೆ ಬಾವಿ ತೋಡಲು ಮಂಜೂರಾಗಿತ್ತು. ಆದರೆ ರಸ್ತೆ ಅಗಲೀಕರಣದಿಂದ ಕೊಳವೆ ಬಾವಿಯನ್ನು ಕೆಮ್ಮಡೆ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
- ಡಾ| ರಮ್ಯಾ ಕೆ.,
ಪಿಡಿಒ ಮನ್ನೆಬೆಟ್ಟು ಗ್ರಾ.ಪಂ.