ಮುಧೋಳ: ಘಟಪ್ರಭಾ ಪ್ರವಾಹ ನೀರು ಇಳಿಮುಖವಾಗಿ ಸಮೀಪದ ಚಿಂಚಖಂಡಿ ಸೇತುವೆ ಮೇಲೆ ಭಾರೀ ವಾಹನ ಸಂಚಾರಕ್ಕೆ ಮಾತ್ರ ಇನ್ನೂ ಅವಕಾಶ ದೊರೆತಿಲ್ಲ.
ಸೇತುವೆ ಮೇಲೆ ಸಂಪೂರ್ಣ ನೀರು ಹಿಂದೆ ಸರಿದಿದ್ದರೂ ಸುರಕ್ಷತೆ ದೃಷ್ಟಿಯಿಂದ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿಲ್ಲ. ಗುರುವಾರ ಬೆಳಗ್ಗೆಯಿಂದ ಕಾರು, ಬೈಕ್ ಗಳ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ಅಧಿಕಾರಿಗಳು ಭಾರೀ ವಾಹನ ಸಂಚಾರಕ್ಕೆ ಮಾತ್ರ ಅನುಮತಿ ನೀಡಿಲ್ಲ. ಸೇತುವೆ ಕೆಳಗಡೆ ಹೆಚ್ಚಿನಮಟ್ಟದಲ್ಲಿ ನೀರು ಸರಿದು ಸೇತುವೆ ಸ್ಥಿತಿಗತಿ ಅರಿತಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಜ್ಜರಮಟ್ಟಿ ಸಂಚಾರಕ್ಕೆ ಸೇತುವೆ ಮುಕ್ತ : ಪ್ರವಾಹಕ್ಕೆ ತುತ್ತಾಗಿ ಸಂಪರ್ಕ ಕಡಿದುಕೊಂಡಿದ್ದ ಮುಧೋಳ ಕಾತರಕಿ ರಸ್ತೆ ಸಂಚಾರದ ಮೇಲೆ ನೀರು ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಗೊಂಡು ಸಂಚಾರ ಸ್ಥಗಿತಗೊಂಡಿತ್ತು. ಪ್ರವಾಹ ತಗ್ಗಿದ ಬಳಿಕ ವಜ್ಜರಮಟ್ಟಿ ಭಾರೀವಾಹನ ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದ ಮಂಟೂರ, ಕಿಶೋರಿ, ಹಲಗಲಿ ಮಾರ್ಗ ಬಳಕೆ ಮಾಡುವವರು ಇದೀಗ ವಜ್ಜರಮಟ್ಟಿ ಮಾರ್ಗದಲ್ಲಿಯೇ ಸಂಚರಿಸಬಹುದಾಗಿದೆ.
ಚಿಂಚಖಂಡಿ ಸೇತುವೆ ಮೇಲೆ ನೀರು ಸಂಪೂರ್ಣ ಇಳಿಮುಖವಾಗಿದೆ. ಇದೀಗ ಲಘು ವಾಹನ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನಷ್ಟು ನೀರು ಇಳಿಮುಖವಾದ ಮೇಲೆ ಸೇತುವೆ ಸ್ಥಿತಿಗತಿ ಪರಿಶೀಲಿಸಿ ಭಾರೀ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು.
-ಚನ್ನಬಸವ ಮಾಚನೂರ ಲೋಕೋಪಯೋಗಿ ಇಲಾಖೆ ಎಇಇ