Advertisement
ವರ್ಷ ಪೂರ್ತಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಕಾರಣ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿ ಅನ್ನದಾತರು ಕಂಗಾಲಾಗಿದ್ದಾರೆ. ಸರ್ಕಾರ ಜಿಲ್ಲೆಯ ಎಲ್ಲ ತಾಲೂಕಗಳನ್ನು ಬರ ಎಂದು ಘೋಷಿಸಿದ್ದರೂ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬರ ಪರಿಹಾರ ಕೆಲಸಗಳು ನಡೆಯುತ್ತಿಲ್ಲ. ಸಂಕಷ್ಟದಲ್ಲಿರುವ ಇಂಥ ಸಂದರ್ಭದಲ್ಲಿ ಜನರ ನೋವುಗಳಿಗೆ ಸ್ಪಂದಿಸಬೇಕಾದ ಜಿಲ್ಲೆಯ ಎಲ್ಲ ಶಾಸಕರು ರಾಜಕೀಯ ಮೇಲಾಟಕ್ಕಾಗಿ ಸೆರಾರ್ಟ್ ಸೇರಿಕೊಂಡಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಹೊರ ಹೊಮ್ಮಿದೆ.
Related Articles
Advertisement
ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದ ಹಂತದಲ್ಲಿ ಎರಡೆರಡು ಬಾರಿ ಕೇಂದ್ರ ತಂಡ ಹಾಗೂ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ನೇತೃತ್ವದ ಬರ ಅಧ್ಯಯನ ತಂಡಕ್ಕೆ ಜಿಲ್ಲೆಯ ಅನ್ನದಾತರು ಕೈ ಮುಗಿದು ಅಂಗಲಾಚಿದ್ದಾರೆ. ಅಧ್ಯಯನ ತಂಡಗಳಿಗೆ ಕುಡಿಯುವ ನೀರಿಗಾಗಿ ಜನರಿಂದ ಖಾಲಿ ಕೊಡಗಳ ಪ್ರದರ್ಶನವೂ ನಡೆದಿವೆ. ಮೂಕ ಪ್ರಾಣಿಗಳು ಅರ್ತನಾದ ಮಾಡಿವೆ. ಇಷ್ಟಾದರೂ ಜಿಲ್ಲೆಯ ಬರದ ಸಂಕಷ್ಟ ನೀಗಲು ಸಾಧ್ಯವಾಗಿಲ್ಲ. ಇಂಥ ಸಂದರ್ಭದಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತ್ರ ಹಲವು ಸಭೆಗಳಲ್ಲಿ ಧ್ವನಿ ಎತ್ತಿ ಅಕ್ರೋಶ ವ್ಯಕ್ತಪಡಿಸಿದ್ದು ಬಿಟ್ಟರೆ ಇದರಿಂದಲಗೂ ಜನರ ಸಂಕಷ್ಟಗಳ ಪರಿಹಾರ ಸಾಧ್ಯವಾಗಿಲ್ಲ.
ಜಿಲ್ಲೆಗೆ ಬರ ಅಧ್ಯಯನಕ್ಕೆ ಬಂದಿದ್ದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಬರ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳು ಕಚೇರಿ ಬಟ್ಟು ಹಳ್ಳಿಗಳಿಗೆ ಹೋಗಿ ಎಂದು ಕುಟುಕಿರುವುದು ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ, ಅಧಿಕಾರಿಗಳು ಕಥೆ ಹೇಳುತ್ತಿದ್ದಾರೆ ಎಂಬುದು ಸೂಚ್ಯವಾಗಿಯೇ ಮನದಟ್ಟು ಮಾಡಿಸಿದೆ.
ಇಂಥ ಸ್ಥಿತಿಯಲ್ಲಿ ಜನರಿಂದ ನೇರವಾಗಿ ಅಯ್ಕೆಯಾಗಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ರಾಜ್ಯ ಸಂಪುಟದ ಪ್ರಭಾವಿ ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಎಂ.ಸಿ. ಮನಗೂಳಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎ.ಎಸ್. ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರು, ದೇವಾನಂದ ಪಾಟೀಲ, ಜನರಿಂದ ಪರೋಕ್ಷವಾಗಿ ಆಗಿರುವ ಎಸ್.ಆರ್. ಪಾಟೀಲ, ಹನುಮಂತ ನಿರಾಣಿ, ಆರುಣ ಶಹಾಪುರ, ಸುನೀಲಗೌಡ ಪಾಟೀಲ, ಪ್ರಕಾಶ ರಾಠೊಡ ಹೀಗೆ ಜಿಲ್ಲೆಯಲ್ಲಿ ರಾಜಕೀಯ ಪ್ರಬಲ ಶಕ್ತಿ ಇದ್ದರೂ ಬಹುತೇಕರು ಜನರ ಬಳಿಗೆ ಹೋಗಿಲ್ಲ. ಸಮಸ್ಯೆ ಆಲಿಸಿಲ್ಲ ಎಂದು ಜನರು ದೂರುತ್ತಿದ್ದಾರೆ. ಹಲವು ಶಾಸಕರಂತೂ ಸಾಮಾನ್ಯ ದಿನಗಳಲ್ಲೇ ಜಿಲ್ಲೆಯ ಅಭಿವೃದ್ಧಿ ಪರಿಶೀಲನೆ ಸಭೆಗಳಿಗೆ ಹಾಜರಾಗುವುದಿಲ್ಲ. ಇನ್ನು ಬರ ಸಮಸ್ಯೆ ಅವರ ಅರಿವಿಗೆ ಬರುವುದಾದರೂ ಹೇಗೆ ಎಂಬ ಟೀಕೆಗಳು ಜನರಿಂದ ಕೇಳಿ ಬರುತ್ತಿವೆ.
ಇನ್ನಾದರೂ ಜಿಲ್ಲೆಯ ಸಚಿವ-ಶಾಸಕರು ಭೀಕರ ಬರದಿಂದ ತತ್ತರಿಸಿರುವ ಜನರ ಸಮಸ್ಯೆ ಆಲಿಸಲು ಅಧಿಕಾರಿಗಳೊಂದಿಗೆ ಎಲ್ಲರೂ ಹಳ್ಳಿಗಳತ್ತ ಹೆಜ್ಜೆ ಹಾಕಬೇಕಿದೆ.