Advertisement

ಕೊಟ್ಟಾರ-ಹೆಜಮಾಡಿ ಹೆದ್ದಾರಿ ಪ್ರಯಾಣವೂ ಸುರಕ್ಷಿತ ಅಲ್ಲ !

10:19 AM Sep 15, 2019 | Team Udayavani |

-ಎಂಟು ತಿಂಗಳಲ್ಲಿ ಹಲವು ಅಪಘಾತ

Advertisement

– ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತಿರುವ ಸರಕು ವಾಹನ
– ಪ್ರಸ್ತಾವನೆಯಲ್ಲಿ ಉಳಿದ ಹತ್ತು ಪಥಗಳ ಕಾಂಕ್ರೀಟ್‌ ರಸ್ತೆ
– ಸುಭದ್ರ ತಡೆಗೋಡೆ ಯಿಲ್ಲದ ಕೂಳೂರು ಸೇತುವೆ ತಿರುವು

ಉದಯವಾಣಿ ವಾಸ್ತವ ವರದಿ -  ಮಂಗಳೂರು ಟೀಮ್‌

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರದ್ದೇ ಕಥೆಯಿದು. ಕೊಟ್ಟಾರದಿಂದ ಹೆಜಮಾಡಿ ಟೋಲ್‌ವರೆಗಿನ ರಸ್ತೆಯಲ್ಲಿ ವಾಹನ ಸವಾರರ ಸುರಕ್ಷತೆ ಮತ್ತು ಹೆದ್ದಾರಿ ಮಾನದಂಡಗಳ ದೃಷ್ಟಿಯಿಂದ ಹಲವು ನ್ಯೂನತೆಗಳಿವೆ. ಈ ಭಾಗದಲ್ಲಿ ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚು ತ್ತಿರುವುದೂ ತಿಳಿದೇ ಇದೆ. ಎಂಟು ತಿಂಗಳಲ್ಲಿ ಸುಮಾರು 40 ಕಿ.ಮೀ. ವ್ಯಾಪ್ತಿಯಲ್ಲಿ 41 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಂದರೆ ತಿಂಗಳಿಗೆ ಐದು ಮಂದಿ !

ಕೊಟ್ಟಾರ ಮೇಲುರಸ್ತೆ ಇಳಿಯುತ್ತಿದ್ದಂತೆ ಕೋಡಿಕಲ್‌ ಬಳಿ ಅವೈಜ್ಞಾನಿಕ ಮತ್ತು ಅಪಾಯ ಕಾರಿ ತಿರುವು ಇದೆ. ಇಲ್ಲಿ ಯೂ-ಟರ್ನ್ ಅಥವಾ ಒಳರಸ್ತೆಯಿಂದ ಹೆದ್ದಾರಿಗೆ ವಾಹನ ಗಳು ಪ್ರವೇಶಿಸುವ ಬಗ್ಗೆ ಯಾವುದೇ ಸೂಚನಾ ಫ‌ಲಕವಿಲ್ಲ. ಕೂಳೂರು ಹತ್ತಿರ ಮುನ್ಸೂಚನೆ ಇಲ್ಲದೆ ಬ್ಯಾರಿಕೇಡ್‌ ಇರಿಸಲಾಗಿದೆ. ಕೂಳೂರು ಮೇಲುರಸ್ತೆ ಬಳಿಯೂ ಹೆಚ್ಚಿನ ವಾಹನ ಸವಾರರು ಒನ್‌-ವೇಯಲ್ಲಿ ವಿರುದ್ಧ ದಿಕ್ಕಿನಿಂದ ಚಲಿಸುವುದೂ ಅಪಾಯವನ್ನು ಆಹ್ವಾನಿಸುತ್ತಿದೆ. ತಣ್ಣೀರುಬಾವಿ ರಸ್ತೆಗೆ ತಿರುವು ಪಡೆಯುವಲ್ಲೂ ಸೂಚನಾ ಫ‌ಲಕವಿಲ್ಲ. ಈ ಹೆದ್ದಾರಿಯ ಇನ್ನುಳಿದ ಕಡೆಗಳಂತೆ ಈ ಭಾಗದಲ್ಲೂ ಹೆಜ್ಜೆಗೊಂದರಂತೆ ಅವೈಜ್ಞಾನಿಕವಾಗಿ ಬ್ಯಾರಿಕೇಡ್‌ ಇರಿಸಲಾಗಿದೆ. ಈ ಬಗ್ಗೆ ಸವಾರರಿಗೆ ಮುನ್ಸೂಚನೆ ಇಲ್ಲವೇ ಇಲ್ಲ.

ಸರಕು ಲಾರಿಗಳ ಸಾಲು
ಪಣಂಬೂರಿನಿಂದ ಮುಂದಕ್ಕೆ ಒಂದಷ್ಟು ದೂರ ಸರ್ವೀಸ್‌ ರಸ್ತೆ ನಿರ್ಮಿಸಲಾಗಿದೆ. ಆದರೆ ಈ ರಸ್ತೆಯುದ್ದಕ್ಕೂ ಸರಕು ವಾಹನಗಳೇ ಸಾಲುಗಟ್ಟಿರುತ್ತವೆ. ಇದರಿಂದ ಪಣಂಬೂರು ಬೀಚ್‌ ಕಡೆಗೆ ಹೋಗುವ ಪ್ರವಾಸಿಗರಿಗಂತೂ ಬಹಳ ತೊಂದರೆ. ರಾತ್ರಿ ಘನ ವಾಹನಗಳು ಹೆದ್ದಾರಿ ಬದಿಯೇ ನಿಲ್ಲುತ್ತಿರುವುದೂ ಅಪಘಾತ ಗಳಿಗೆ ಕಾರಣವಾಗುತ್ತಿದೆ. ಕಳೆದ ವರ್ಷ ಮಾರ್ಚ್‌ ನಲ್ಲಿ ಮಧ್ಯರಾತ್ರಿ ಎಂಸಿಎಫ್‌ ಬಳಿ ನಿಂತಿದ್ದ ಲಾರಿಗೆ ಪ್ರವಾಸಿಗರ ವಾಹನವೊಂದು ಢಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿತ್ತು. ನಿಜಕ್ಕಾದರೆ ಇಲ್ಲಿ ಸರಕು ವಾಹನಗಳು ನಿಲ್ಲಲು ಪ್ರತ್ಯೇಕ ವ್ಯವಸ್ಥೆ ಇರಬೇಕಿತ್ತು.

Advertisement

ಅಪಾಯಕಾರಿ ಕೂಳೂರು ಸೇತುವೆ ತಿರುವು
ಕೂಳೂರು ಹಳೇ ಸೇತುವೆ ಬಳಿ ಇರುವ ಅಪಾಯ ಕಾರಿ ತಿರುವು ಪ್ರಮುಖ ಅಪಘಾತ ವಲಯ. ಇಲ್ಲಿ ಸುಭದ್ರ ತಡೆಗೋಡೆಯಿಲ್ಲ. ಉಡುಪಿ ಕಡೆಯಿಂದ ಬರುವ ವಾಹನ ಸವಾರರು ಫಲ್ಗುಣಿ ನದಿಗೆ ಬಿದ್ದಿರುವ ಹಲವು ಉದಾಹರಣೆಗಳಿವೆ. ಕಳೆದ ವರ್ಷವೂ ಇಲ್ಲಿ ಕಾರು ನದಿಗೆ ಉರುಳಿ ಇಬ್ಬರು ಪ್ರಾಣ ಕಳೆದು ಕೊಂಡಿದ್ದರು. ಈ ತಿರುವು ಬದಲಿಸುವ ಅಥವಾ ಅಲ್ಲಿ ತಡೆಗೋಡೆ ನಿರ್ಮಿಸಬೇಕೆನ್ನುವ ಬೇಡಿಕೆ ಕಾರ್ಯರೂಪಕ್ಕೆ ಬಂದಿಲ್ಲ. ಮಳೆ ಮತ್ತು ಘನ ವಾಹನಗಳ ಸಂಚಾರದಿಂದ ಕೊಟ್ಟಾರ ಕ್ರಾಸ್‌ನಿಂದ ಬೈಕಂಪಾಡಿಯ ವರೆಗಿನ ರಸ್ತೆ ಪೂರ್ಣ ಹಾಳಾಗಿದೆ.

ಹೊಸಬೆಟ್ಟು ಅನಂತರ ಹೆಜಮಾಡಿ ಟೋಲ್‌ವರೆಗಿನ ಸಣ್ಣಪುಟ್ಟ ಲೋಪ ಹೊರತುಪಡಿಸಿದರೆ ಪರವಾಗಿಲ್ಲ. ವಾಹನ ಸವಾರಿಗೆ ಚತುಷ್ಪಥ ರಸ್ತೆಯಲ್ಲಿ ಸಂಚರಿಸುವ ಅನುಭವ ಸಿಗುವುದು ಇಲ್ಲಿಂದ ಮಾತ್ರ. ಎನ್‌ಐಟಿಕೆ ಬಳಿ ಸರ್ವೀಸ್‌ ರಸ್ತೆಗೆ ಅಂಡರ್‌ಪಾಸ್‌ ಮಾಡಲಾಗಿದ್ದು, ಕಳಪೆ ಕಾಮಗಾರಿಯಿಂದ ಹೆದ್ದಾರಿಯ ಒಂದು ಬದಿಯಲ್ಲಿ ಕಟ್ಟಿರುವ ಕಲ್ಲು ಬಿರುಕು ಬಿಟ್ಟು ಕುಸಿಯುವ ಸ್ಥಿತಿಯಲ್ಲಿದೆ. ಹೆದ್ದಾರಿ ಸಮತಲದಲ್ಲಿ ಇಲ್ಲದೇ ಮಳೆಗಾಲದಲ್ಲಿ ಬಹಳಷ್ಟು ಕಡೆ ನೀರು ರಸ್ತೆಯಲ್ಲೇ ನಿಂತು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಸುರತ್ಕಲ್‌ನಿಂದ ಹೆಜಮಾಡಿ ವರೆಗೂ ದುಬಾರಿ ಬೀದಿದೀಪ ಅಳವಡಿಸಿದ್ದರೂ ರಾತ್ರಿವೇಳೆ ಉರಿಯುವುದಿಲ್ಲ.

ಪ್ರಸ್ತಾವನೆಯಲ್ಲಿ ದಶಪಥ ಕಾಂಕ್ರೀಟ್‌ ಹೆದ್ದಾರಿ
ಪಣಂಬೂರಿನಿಂದ ಬೈಕಂಪಾಡಿವರೆಗಿನ ಪ್ರದೇಶ ಕೈಗಾರಿಕಾ ವಲಯ. ಹಾಗಾಗಿ ಇಲ್ಲಿ ಇರಬೇಕಾದ ಸರಕು ವಾಹನಗಳ ಪ್ರತ್ಯೇಕ ಪಾರ್ಕಿಂಗ್‌ ವಲಯ ಇಲ್ಲ. ಇದಕ್ಕೆಲ್ಲ ಶಾಶ್ವತ ಪರಿಹಾರ ಎಂಬಂತೆ ಕೂಳೂರು-ಬೈಕಂಪಾಡಿ ನಡುವಿನ ಎರಡೂವರೆ ಕಿ.ಮೀ.ಗಳನ್ನು ದಶಪಥಗಳ ಕಾಂಕ್ರೀಟ್‌ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಧೂಳು ಹಿಡಿದಿದೆ.

ಸುರತ್ಕಲ್‌ನಲ್ಲಿ ದ್ವಿಮುಖ ಸಂಚಾರ
ಸುರತ್ಕಲ್‌ ನಗರ ವ್ಯಾಪ್ತಿಯಲ್ಲಿ ದ್ವಿಮುಖವಾಗಿ ವಾಹನಗಳು ಸಂಚರಿಸುವುದು ಅಪಘಾತಕ್ಕೆ ಎಡೆ ಮಾಡಿಕೊಟ್ಟಿದೆ. ಇಲ್ಲಿ ಸರಿಯಾದ ಸರ್ವೀಸ್‌ ರಸ್ತೆಯಿಲ್ಲ. ಹೀಗಾಗಿ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಮೂಲಕ ಗೊಂದಲ ಹುಟ್ಟಿಸುತ್ತಿವೆ. ರಾತ್ರಿ ವೇಳೆ ಹೊರ ರಾಜ್ಯಗಳಿಂದ ಬರುವ ಸರಕು ವಾಹನಗಳಿಗೆ ಒನ್‌ವೇಯಲ್ಲಿ ದ್ವಿಮುಖ ಸಂಚಾರ ವ್ಯವಸ್ಥೆ ಇರುವುದು ಗಮನಕ್ಕೆ ಬಾರದೆ ಅವಘಡಗಳು ಸಂಭವಿಸುತ್ತಿವೆ.

ಹಲವು ಕಡೆ ಬ್ಯಾರಿಕೇಡ್‌
ವಾಹನ ವೇಗ ನಿಯಂತ್ರಣ ಮತ್ತು ಪಾದಚಾರಿಗಳಿಗೆ ರಸ್ತೆ ದಾಟುವುದಕ್ಕೆ ಪ್ರತ್ಯೇಕ ಕ್ರಮ ಅಳವಡಿಸುವ ಬದಲಿಗೆ ಅವೈಜ್ಞಾನಿಕವಾಗಿ ಬ್ಯಾರಿಕೇಡ್‌ ಹಾಕಲಾಗುತ್ತಿದೆ. ಕೊಟ್ಟಾರದಿಂದ ಹೆಜಮಾಡಿ ಟೋಲ್‌ವರೆಗಿನ ಕೇವಲ 25 ಕಿ.ಮೀ. ದೂರದಲ್ಲಿ ಹತ್ತಾರು ಕಡೆ; ಕೂಳೂರು, ಕುಳಾç, ಹೊಸಬೆಟ್ಟು, ಸುರತ್ಕಲ್‌ ಇಡ್ಯಾ, ಸಸಿಹಿತ್ಲು ಮುಂತಾದೆಡೆ ಅರ್ಧ ಕಿ.ಮೀ. ದೂರದಲ್ಲಿ ಒಂದು ಅಥವಾ ಎರಡು ಕಡೆ ಬ್ಯಾರಿಕೇಡ್‌ ಇವೆ. ಈ ಬಗ್ಗೆ ವಾಹನ ಸವಾರರಿಗೆ ಯಾವ ಮುನ್ಸೂಚನೆಯೂ ಇಲ್ಲ.

ಕೊಟ್ಟಾರದಿಂದ ಹೆಜಮಾಡಿವರೆಗೆ ಒಮ್ಮೆ ಸಂಚರಿಸಿದರೆ ಅಲ್ಲಿನ ಅವ್ಯವಸ್ಥೆ ಕಣ್ಣಿಗೆ ರಾಚುತ್ತದೆ. ಬೈಕಂಪಾಡಿ ಕೈಗಾರಿಕೆ ಪ್ರದೇಶದಲ್ಲಂತೂ ದೇವರೇ ನಮ್ಮನ್ನು ಕಾಪಾಡಬೇಕು. ಒಂದೆಡೆ ಸಾಲು ಸಾಲಾಗಿ ಬರುವ ಸರಕು ಲಾರಿಗಳು, ಮತ್ತೂಂದೆಡೆ ನೂರಾರು ಗುಂಡಿಗಳಲ್ಲಿರುವ ರಸ್ತೆ. ಇದಕ್ಕೆ ಜಿದ್ದಿಗೆ ಬಿದ್ದವರಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಟೋಲ್‌ ತೆಗೆದು ಕೊಳ್ಳುವುದು ಬಿಟ್ಟರೆ, ಬೇರ್ಯಾವ ಸುರಕ್ಷತಾ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಗಳು ಕೈಗೊಂಡೇ ಇಲ್ಲ. ಆ ರಸ್ತೆ ಬಗ್ಗೆಯೇ ಇಂದಿನ ವಾಸ್ತವ ವರದಿ.

ನೀವೂ ಸಮಸ್ಯೆ ತಿಳಿಸಿ
ದಕ್ಷಿಣ ಕನ್ನಡದಲ್ಲಿ ಹಾದು ಹೋಗುವ ಎರಡು ಮುಖ್ಯ ರಾ.ಹೆ. 75 ಮತ್ತು 66ರಲ್ಲಿ ಹೆಚ್ಚುತ್ತಿರುವ ಅಪಘಾತಗಳು ಕೊನೆಯಾಗಬೇಕೆನ್ನುವುದು ಉದಯವಾಣಿ ಕಾಳಜಿ. ಈ ಎರಡು ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿದ ನಿಮ್ಮ ಸಲಹೆ-ಅಭಿಪ್ರಾಯ, ಸಮಸ್ಯೆಯನ್ನು ಈ ಸಂಖ್ಯೆಗೆ 9964169554 ಫೂಟೋ ಸಮೇತ ವಾಟ್ಸಾಪ್‌ ಮಾಡಿ.

Advertisement

Udayavani is now on Telegram. Click here to join our channel and stay updated with the latest news.

Next