Advertisement

ಪಂಚರಾಜ್ಯಗಳ ಚುನಾವಣೆಯಂತೂ ಮುಗಿಯಿತು..ಮುಂದೆ?

01:18 AM Mar 09, 2022 | Team Udayavani |

ಕಳೆದ ಎರಡು ತಿಂಗಳಿಂದ ದೇಶದ ಐದು ರಾಜ್ಯಗಳಲ್ಲಿ ಚುನಾವಣ ಹವಾ. ಅದರಲ್ಲೂ ದೇಶದ ಅತೀ ದೊಡ್ಡ ರಾಜ್ಯ ಎಂದೇ ಅನ್ನಿಸಿಕೊಂಡಿರುವ ಉತ್ತರ ಪ್ರದೇಶದ ಚುನಾವಣೆಯಂತೂ ಎಲ್ಲರ ಆಸಕ್ತಿಗೆ ಕಾರಣವಾಗಿದ್ದು ಸುಳ್ಳಲ್ಲ. ಈ ರಾಜ್ಯದ ಚುನಾವಣೆಗೆ ದೇಶದ ರಾಜಕೀಯವನ್ನೇ ಬದಲಿಸುವ ತಾಕತ್ತಿದೆ. ಇದಕ್ಕೆ ಕಾರಣ ಈ ರಾಜ್ಯದಲ್ಲಿರುವ ಒಟ್ಟಾರೆ ಲೋಕಸಭೆ ಸ್ಥಾನಗಳು. ಇದರ ಜತೆಗೆ ಪಂಜಾಬ್‌, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿಯೂ ಮತದಾನ ಮುಗಿದು, ಫ‌ಲಿತಾಂಶಕ್ಕಾಗಿ ಕಾಯುತ್ತಿವೆ.

Advertisement

ಮತದಾನ
ಉತ್ತರ ಪ್ರದೇಶ ಫೆ.10, 14, 20, 23, 27, ಮಾ.3, 7
ಗೋವಾ ಮತ್ತು ಉತ್ತರಾಖಂಡ – ಫೆ.14
ಪಂಜಾಬ್‌ – ಫೆ.20       ಮಣಿಪುರ – ಫೆ.28, ಮಾ.5

ಹೇಗಾಯಿತು ಚುನಾವಣೆ?
ಕೊರೊನೋತ್ತರದಲ್ಲಿ ಒಂದಷ್ಟು ವಿಶಿಷ್ಟ ರೀತಿಯಲ್ಲಿ ಈ ಚುನಾವಣೆ ನಡೆಯಿತು ಎಂದರೆ ತಪ್ಪಾಗಲಾರದು. ಜಾತಿ, ಧರ್ಮಕ್ಕಿಂತ ಅಭಿವೃದ್ಧಿ, ರೈತರ ಸಮಸ್ಯೆಗಳು ಹಾಗೂ ಇನ್ನಿತರ ಸ್ಥಳೀಯ ಸಮಸ್ಯೆಗಳನ್ನು ಮುಂದಿರಿಸಿಕೊಂಡು ಎಲ್ಲ ಪಕ್ಷಗಳು ಚುನಾವಣೆ ಎದುರಿಸಿದವು.

ಉತ್ತರ ಪ್ರದೇಶ
ಹಾಲಿ ಮುಖ್ಯಮಂತ್ರಿ – ಯೋಗಿ ಆದಿತ್ಯನಾಥ್‌
ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ನೇರ ಮುಖಾಮುಖೀ ನಡೆಯಿತು. ಇಲ್ಲಿ ಕಾಂಗ್ರೆಸ್‌ ಮತ್ತು ಬಿಎಸ್‌ಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾದವು. ಸಿಎಂ ಯೋಗಿ ಆದಿತ್ಯನಾಥ್‌ ಮತ್ತು ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌ ಅವರ ನಡುವಿನ ಜಿದ್ದಾಜಿದ್ದಿಯಂತೆಯೇ ಕಂಡು ಬಂದಿತು. ಯೋಗಿ ಬೆನ್ನಿಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ನಿಂತರೆ, ಅಖೀಲೇಶ್‌ ಯಾದವ್‌ರಿಗೆ ಆರ್‌ಎಲ್‌ಡಿಯ ಮುಖ್ಯಸ್ಥ ಜಯಂತ್‌ ಚೌಧರಿ ಶಕ್ತಿ ತುಂಬಿದರು.

ಚುನಾವಣ ವಿಷಯಗಳು ಸರಕಾರ ಪ್ರತಿಪಾದಿಸಿದ್ದು

  1. ಕಾಶಿಯ ವಿಶ್ವನಾಥ ಕಾರಿಡಾರ್‌
  2. ರಾಜ್ಯಾದ್ಯಂತ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು
  3. ಗೂಂಡಾರಾಜ್ಯ ಪತನ
Advertisement

ವಿಪಕ್ಷಗಳ ಪ್ರತಿಪಾದನೆ

  1. ನಿರುದ್ಯೋಗ
  2. ರೈತರ ಪ್ರತಿಭಟನೆ
  3. ಲಖೀಂಪುರದ ರೈತರ ಪ್ರತಿಭಟನೆ ಮೇಲಿನ ದಾಳಿ

ಬಿಜೆಪಿ 312    ಎಸ್‌ಪಿ+ ಕಾಂಗ್ರೆಸ್‌ 47    ಬಿಎಸ್‌ಪಿ 19

ಉತ್ತರಾಖಂಡ
ದೇವನಾಡು ಎಂದೇ ಖ್ಯಾತಿ ಹೊತ್ತಿರುವ ಉತ್ತರಾಖಂಡದಲ್ಲಿ ಸದ್ಯ ಬಿಜೆಪಿ ಸರಕಾರ ಇದ್ದು, ಈಗ ಕಾಂಗ್ರೆಸ್‌ನಿಂದ ತೀವ್ರ ಪ್ರತಿರೋಧ ಎದುರಿಸಿದೆ. ಇಲ್ಲಿ ಫೆ.14ರಂದು ಒಂದೇ ಹಂತದಲ್ಲಿ ಚುನಾವಣೆ ಮುಗಿದಿತ್ತು. ವರ್ಷದ ಹಿಂದಷ್ಟೇ ಸಿಎಂ ಹುದ್ದೆಗೇರಿದ್ದ ಪುಷ್ಕರ್‌ ಸಿಂಗ್‌ ಧಾಮಿ ಅವರಿಗೆ ಈ ಚುನಾವಣೆ ಅಗ್ನಿಪರೀಕ್ಷೆಯಂತಾಗಿತ್ತು. ಈ ಚುನಾವಣೆಯಲ್ಲಿ ಆಪ್‌ ಕೂಡ ಈ ರಾಜ್ಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದೆ.

ಚುನಾವಣ ವಿಷಯಗಳು ಸರಕಾರ ಹೇಳಿದ್ದು

  1. ಹೆದ್ದಾರಿ, ರೈಲ್ವೇ ಮತ್ತು ವಿಮಾನಯಾನ ಸಂಪರ್ಕ ಹೆಚ್ಚಳ
  2. ಕೇದಾರನಾಥ್‌ ದೇಗುಲದ ಪುನರ್‌ನಿರ್ಮಾಣ

ವಿಪಕ್ಷಗಳ ಪ್ರತಿಪಾದನೆ

  1. ಹಣದುಬ್ಬರ
  2. ನಿರುದ್ಯೋಗ
  3. ಮುಖ್ಯಮಂತ್ರಿಗಳ ಸತತ ಬದಲಾವಣೆ

ಬಿಜೆಪಿ 57   ಕಾಂಗ್ರೆಸ್‌ 11 ಪಕ್ಷೇತರ  02

ಪಂಜಾಬ್‌
ಕಾಂಗ್ರೆಸ್‌, ಆಪ್‌, ಶಿರೋಮಣಿ ಅಕಾಲಿ ದಳ+ಬಿಎಸ್‌ಪಿ, ಪಂಜಾಬ್‌ ಲೋಕತಂತ್ರ ಕಾಂಗ್ರೆಸ್‌+ ಬಿಜೆಪಿ ನಡುವಿನ ಬಹು ಆಯಾಮದ ಸಮರಕ್ಕೆ ಸಾಕ್ಷಿಯಾಗಿದ್ದು ಪಂಜಾಬ್‌. ಚುನಾವಣೆಗೂ ಮುನ್ನವೇ ಆಂತರಿಕ ಸಮರದಿಂದ ನಲುಗಿ ಹೋಗಿದ್ದ ಕಾಂಗ್ರೆಸ್‌ಗೆ ಹೈಕಮಾಂಡ್‌ ಒಂದಷ್ಟು ಶಕ್ತಿ ತುಂಬಿದರೂ ಆಪ್‌ ನೀಡುತ್ತಿರುವ ಸ್ಪರ್ಧೆ ಚಿಂತೆಗೀಡು ಮಾಡಿದೆ.

ಚುನಾವಣ ವಿಷಯಗಳು ಸರಕಾರ ಹೇಳಿದ್ದು

  1. ವಿದ್ಯುತ್‌ ಶುಲ್ಕ , ಇಂಧನ ಬೆಲೆ ಇಳಿಕೆ
  2. ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ್ದು

ವಿಪಕ್ಷಗಳ ಪ್ರತಿಪಾದನೆ

  1. ರಾಜ್ಯದಲ್ಲಿನ ಡ್ರಗ್ಸ್‌ ಹಾವಳಿ
  2. ಕಾನೂನು ಸುವ್ಯವಸ್ಥೆ ಸಮಸ್ಯೆ
  3. ಧಾರ್ಮಿಕ ಸ್ಥಳಗಳಲ್ಲಿ ಥಳಿಸಿ ಕೊಂದ ಪ್ರಕರಣಗಳು
  4. ಕೋರ್ಟ್‌ ಆವರಣದಲ್ಲಿ ಸ್ಫೋಟ

ಕಾಂಗ್ರೆಸ್‌ 77    ಆಪ್‌ 20  ಎಸ್‌ಎಡಿ+ಬಿಜೆಪಿ 18

ಮಣಿಪುರ
ಮಣಿಪುರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇದೆ. ಈ ಬಾರಿಯ ಚುನಾವಣೆಯಲ್ಲಿ ಪ್ರಮುಖವಾಗಿ ಸೇನಾಪಡೆಗಳಿಗೆ ಇರುವ ವಿಶೇಷಾಧಿಕಾರವನ್ನು ತೆಗೆಯಬೇಕು ಎಂಬುದೇ ಹೆಚ್ಚಾಗಿ ಚರ್ಚೆಯಾಯಿತು. ಅಲ್ಲದೆ ನಿರುದ್ಯೋಗ ಮತ್ತು ಕಳೆದ 5 ವರ್ಷಗಳಲ್ಲಿನ ರಾಜಕೀಯ ಅಸ್ಥಿರತೆ ಚರ್ಚೆಗೆ ಬಂದಿತು. ಕಳೆದ ಡಿಸೆಂಬರ್‌ನಲ್ಲಿ ಸಶಸ್ತ್ರ ಪಡೆಗಳಿಂದ 14 ನಾಗರಿಕರು ಹತ್ಯೆಯಾಗಿದ್ದೂ ಈ ಚುನಾವಣೆಯಲ್ಲಿ ಹೆಚ್ಚಾಗಿ ಪ್ರಸ್ತಾವವಾಯಿತು.

ಕಾಂಗ್ರೆಸ್‌ 28 ಬಿಜೆಪಿ 21   ಇತರ 11

ಗೋವಾ
ಕರ್ನಾಟಕದ ನೆರೆಯಲ್ಲಿರುವ ಗೋವಾದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ ವಿರುದ್ಧವೇ ನೇರ ಹಣಾಹಣಿ ಇದೆ. ಬಿಜೆಪಿ ಇದೇ ಮೊದಲ ಬಾರಿಗೆ ಮನೋಹರ್‌ ಪರೀಕ್ಕರ್‌ ಇಲ್ಲದೇ ಫೆ.14 ರಂದು ಚುನಾವಣೆ ಎದುರಿಸಿದೆ. ಈ ಬಾರಿ ಕಾಂಗ್ರೆಸ್‌ನಿಂದ ನೇರ ಸ್ಪರ್ಧೆ ಇದೆ. ಆದರೂ ಟಿಎಂಸಿ ಮತ್ತು ಆಪ್‌ ಕೂಡ ತಮ್ಮದೇ ಆದ ರೀತಿಯಲ್ಲಿ ಫೈಟ್‌ ನೀಡುತ್ತಿವೆ. ಜತೆಗೆ ಗೋವಾದ ಪ್ರಾದೇಶಿಕ ಪಕ್ಷಗಳೂ ಕಣದಲ್ಲಿವೆ.

ಚುನಾವಣ ವಿಷಯಗಳು ಸರಕಾರ ಪ್ರತಿಪಾದಿಸಿದ್ದು

  1. ಐದು ವರ್ಷಗಳ ಕಾಲ ಸುಸ್ಥಿರ ಆಡಳಿತ
  2. ಪರೀಕ್ಕರ್‌ ಅನುಪಸ್ಥಿತಿಯಲ್ಲಿ ಪ್ರಮೋದ್‌ ಸಾವಂತ್‌ ಉತ್ತಮವಾಗಿ ಕಾರ್ಯ ನಿರ್ವಹಣೆ
  3. ಡಬಲ್‌ ಎಂಜಿನ್‌ ಸರಕಾರದಿಂದ ಪ್ರಗತಿ ಹೆಚ್ಚಳ

ವಿಪಕ್ಷಗಳು ಹೇಳಿದ್ದು

  1. ಹೆಚ್ಚಿದ ಭ್ರಷ್ಟಾಚಾರ
  2. ಗಣಿಗಾರಿಕೆಗೆ ಅವಕಾಶ ನೀಡದಿರುವುದು
  3. ನಿರುದ್ಯೋಗ ಸಮಸ್ಯೆ

ಕಾಂಗ್ರೆಸ್‌ 17   ಬಿಜೆಪಿ 13  ಇತರ 10

ಫ‌ಲಿತಾಂಶಕ್ಕೆ ತಿರುವು ನೀಡಬಲ್ಲ ಅಂಶಗಳು

ಉತ್ತರ ಪ್ರದೇಶ – ಇಲ್ಲಿ ಸಿಎಂ ಆದಿತ್ಯನಾಥ್‌ ಅವರಿಗೆ ಅಖೀಲೇಶ್‌ ಯಾದವ್‌ ಮತ್ತು ಜಯಂತ್‌ ಚೌಧರಿ ಜೋಡಿ ಭಾರೀ ಪೈಪೋಟಿ ನೀಡಿದೆ. ರೈತರ ಪ್ರತಿಭಟನೆ ವಿಚಾರ ಮತ್ತು ಜಾಟ್‌ ಸಮುದಾಯದ ಮತಗಳು ಅಖೀಲೇಶ್‌ ಜೋಡಿಗೆ ಹೋಗಿದ್ದರೆ ಫ‌ಲಿತಾಂಶ ತಿರುಗು ಮುರುಗಾಗಬಹುದು.

ಉತ್ತರಾಖಂಡ – ಚುನಾವಣೆ ಇನ್ನು ಒಂದು ವರ್ಷವಿದೆ ಎಂದಾಗ ಬಿಜೆಪಿ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿತು. ಇದು ಒಂದು ರೀತಿಯಲ್ಲಿ ಅಸ್ಥಿರತೆ ಸೃಷ್ಟಿಸಿತು ಎಂದೇ ಹೇಳಬಹುದು. ಇತ್ತೀಚೆಗಷ್ಟೇ ಬಂದ ಸಿಎಂ ಧಾಮಿ, ಅವರ ಕೆಲಸವನ್ನು ಗುರುತಿಸಲು ಜನರಿಗೆ ಸರಿಯಾದ ಅವಕಾಶ ಸಿಗಲಿಲ್ಲ. ಅಲ್ಲದೆ ಕಾಂಗ್ರೆಸ್‌ ಛತ್ತೀಸ್‌ಗಢದ ರೀತಿಯಲ್ಲೇ ಪ್ರಚಾರ ತಂತ್ರ ಅಳವಡಿಸಿ, ಸ್ಥಳೀಯರಿಗೇ ಹೆಚ್ಚಿನ ಅಧಿಕಾರ ಕೊಟ್ಟಿದೆ.

ಗೋವಾ – ಮನೋಹರ್‌ ಪರೀಕ್ಕರ್‌ ಅವರ ಪುತ್ರನಿಗೆ ಬಿಜೆಪಿ ಟಿಕೆಟ್‌ ನಿರಾಕರಣೆ, ಕಳೆದ ಬಾರಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ನೀಡಿದ್ದರೂ ಅಧಿಕಾರ ಹಿಡಿಯಲಾಗದ ಅನುಕಂಪ ಈ ಬಾರಿ ಕೆಲಸ ಮಾಡಬಹುದು. ಪ್ರಮೋದ್‌ ಸಾವಂತ್‌ ಅವರು ದೀರ್ಘಾವಧಿಗೆ ಅಧಿಕಾರ ನೀಡಿದರೂ ಮೋಡಿ ಮಾಡುತ್ತಾರೆಯೇ ನೋಡಬೇಕು.

ಪಂಜಾಬ್‌ –  ಆಂತರಿಕ ಸಂಘರ್ಷ ಮತ್ತು ಅಮರೀಂದರ್‌ ಸಿಂಗ್‌ ಪಕ್ಷ ತೊರೆದದ್ದು ಕಾಂಗ್ರೆಸ್‌ಗೆ ಪೆಟ್ಟು ನೀಡಬಹುದು. ಅಂತೆಯೇ ರೈತರ ಪ್ರತಿಭಟನೆ ವಿಚಾರ ಬಿಜೆಪಿಗೆ ಹಿನ್ನಡೆ ನೀಡಬಹುದು. ರೈತರ ಪ್ರತಿಭಟನೆ ವೇಳೆ ಮುಂದಾಳತ್ವ ಎಸ್‌ಎಡಿ ಪರ ಕೆಲಸ ಮಾಡಿದರೂ ಮಾಡಬಹುದು. ದಿಲ್ಲಿ ಮಾದರಿ ಆಡಳಿತವೇ ಆಪ್‌ಗೆ ಪ್ರಧಾನವಾಗಿ ಕೆಲಸ ಮಾಡಬಹುದು.

ಮಣಿಪುರ – ಕಳೆದ ಡಿಸೆಂಬರ್‌ನಲ್ಲಿ ಸೇನೆ 14 ಮಂದಿ ನಾಗರಿಕರನ್ನು ಕೊಂದದ್ದು, ಬಿಜೆಪಿಗೆ ವ್ಯತಿರಿಕ್ತವಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next