Advertisement

ಅಂತೂ ಅನ್ನದಾತನ ಸಾಲ ಮನ್ನಾ

11:22 AM Jun 22, 2017 | Harsha Rao |

ಸಾಲಮನ್ನಾ ರೈತರಿಗೆ ತಾತ್ಕಾಲಿಕ ಉಪಶಮನ ನೀಡಲಿದೆ. ಆದರೆ ಸಾಲಮನ್ನಾದಿಂದ ಕೃಷಿ ಕ್ಷೇತ್ರಕ್ಕೆ ದೊಡ್ಡ ಪ್ರಯೋಜನ ಆಗುವುದಿಲ್ಲ ಎನ್ನುವುದಕ್ಕೆ ಅನೇಕ ಉದಾಹರಣೆಗಳಿವೆ. 

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೆಗೂ ರೈತರ ಸಾಲ ಮನ್ನಾ ಮಾಡುವ ಬೇಡಿಕೆಗೆ ಮಣಿದಿದ್ದಾರೆ. ಇಂದು ಸಾಲ ಮನ್ನಾ ಮಾಡುವ ನಿರ್ಧಾರ ಪ್ರಕಟಿಸುವುದರೊಂದಿಗೆ ಬಹಳ ಕಾಲದಿಂದ ಸರಕಾರ ಮತ್ತು ವಿಪಕ್ಷಗಳ ನಡುವೆ ಕಿತ್ತಾಟ, ಎಳೆದಾಟಗಳಿಗೆ ಸಿಲುಕಿದ್ದ ವಿವಾದವೊಂದು ಇತ್ಯರ್ಥವಾದಂತಾಗಿದೆ. ಈ ವರ್ಷದ ಜೂ. 20ರ ತನಕ ರೈತರು ಸಹಕಾರಿ ಸಂಘಗಳಿಂದ ಪಡೆದಿರುವ 50 ಸಾವಿರ ರೂ. ತನಕದ ಸಾಲವನ್ನು ಮನ್ನಾ ಮಾಡಲು ಸರಕಾರ ತೀರ್ಮಾನಿಸಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ 8,165 ಕೋ. ರೂ. ಹೊರೆ ಬಿದ್ದರೂ 22,27,506 ಮಂದಿ ರೈತರಿಗೆ ಪ್ರಯೋಜನವಾಗಲಿದೆ ಎನ್ನುವುದು ಸರಕಾರದ ಲೆಕ್ಕಾಚಾರ.    

     ಸಿದ್ದರಾಮಯ್ಯ ಸಾಲಮನ್ನಾ ವಿವಾದವನ್ನು ಕೇಂದ್ರದ ಅಂಗಳಕ್ಕೆ ದೂಡುವ ಜಾಣತನ ತೋರಿಸಲು ಹೋದರೂ ಇದು ತಿರುಗುಬಾಣವಾಗುವ ಲಕ್ಷಣ ಗೋಚರಿಸಿದಾಗ ಅನಿವಾರ್ಯವಾಗಿ ಸಾಲ ಮನ್ನಾ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಕೇಂದ್ರ ಸಾಲ ಮನ್ನಾ ಮಾಡುವುದು ಸಾಧ್ಯವೇ ಇಲ್ಲ ಎಂದು ಹಣಕಾಸು ಸಚಿವ ಅರುಣ್‌ ಜೇತ್ಲೀ ಸ್ಪಷ್ಟಪಡಿಸಿದ ಬಳಿಕ ಸಿದ್ದರಾಮಯ್ಯನವರ ಎದುರು ಬೇರೆ ಯಾವ ದಾರಿಯೂ ಉಳಿದಿರಲಿಲ್ಲ. ಏಕೆಂದರೆ ಉತ್ತರಪ್ರದೇಶ, ಮಹಾರಾಷ್ಟ್ರ, ಪಂಜಾಬ್‌, ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಕೇಂದ್ರದ ನೆರವಿಗೆ ಕಾಯದೆ ಸಾಲಮನ್ನಾ ಘೋಷಿಸಿಯಾಗಿತ್ತು. ಹೀಗಿರುವಾಗ ಸಿದ್ದರಾಮಯ್ಯನವರು ಸಾಲ ಮನ್ನಾ ಮಾಡದಿದ್ದರೆ ಚುನಾವಣೆ ಕಾಲದಲ್ಲಿ ವಿಪಕ್ಷಗಳಿಗೆ ದಾಳಿ ಮಾಡಲು ಅತ್ಯುತ್ತಮ ಅಸ್ತ್ರವನ್ನು ಕೊಟ್ಟಂತಾಗುತ್ತಿತ್ತು. ಅಲ್ಲದೆ ಬಿಜೆಪಿ ಸದ್ಯದಲ್ಲೇ ಸಾಲಮನ್ನಾಕ್ಕೆ ಒತ್ತಾಯಿಸಿ ಬೃಹತ್‌ ಪ್ರತಿಭಟನೆ ನಡೆಸುವ ಸಿದ್ಧತೆಯಲ್ಲಿತ್ತು. ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿರುವಾಗ ಇಂತಹ ಪ್ರತಿಭಟನೆ ನಡೆದರೆ ಸರಕಾರದ ವರ್ಚಸ್ಸಿಗೆ ಹೊಡೆತ ಬàಳುವುದು ಖಂಡಿತ.  

ಸರಕಾರಕ್ಕೂ ತನ್ನ ಸಾಧನೆ ಎಂದು ಹೇಳಿಕೊಳ್ಳಲು ಒಂದು ಉತ್ತಮ ವಿಷಯ ಸಿಕ್ಕಿದೆ. ನಿಜವಾಗಿ ನೋಡಿದರೆ ಅನೇಕ ಕಾಂಗ್ರೆಸ್‌ ನಾಯಕರಿಗೆ ಸಿದ್ದರಾಮಯ್ಯನವರು ರೈತರ ಸಾಲಮನ್ನಾ ಮಾಡಲು ಹಿಂದೇಟು ಹಾಕುತ್ತಿರುವ ಕುರಿತು ಬಹಳ ಅಸಮಾಧಾನವಿತ್ತು. ಹೇಳಿಕೇಳಿ ಕಾಂಗ್ರೆಸಿಗೆ ಒಂದು ಗಟ್ಟಿ ನೆಲೆ ಅಂತಿರುವುದು ಕರ್ನಾಟಕದಲ್ಲಿ. ಇಲ್ಲಿ ರೈತರ ಬದುಕಿನಲ್ಲಿ ಚೆಲ್ಲಾಟವಾಡಿದರೆ ಅದೂ ತಪ್ಪಿ ಹೋದೀತು. ಆದಷ್ಟು ಬೇಗ ಸಾಲಮನ್ನಾ ಘೋಷಣೆ ಮಾಡಿ ವಿಪಕ್ಷಗಳ ಬಾಯಿಮುಚ್ಚಿಸಬೇಕೆಂದು ಕಾಂಗ್ರೆಸಿಗರು ಬಹಿರಂಗವಾಗಿಯೇ ಹೇಳುತ್ತಿದ್ದರು. ಅಲ್ಲದೆ ಹೈಕಮಾಂಡ್‌ಗೂ ವಿಷಯ ತಲುಪುವಂತೆ ನೋಡಿಕೊಂಡಿದ್ದರು. ಹೀಗಾಗೇ ಬೆಂಗಳೂರಿಗೆ ಬಂದಿದ್ದ ಕಾಂಗ್ರೆಸ್‌ ಉಪಾಧ್ಯಕ್ಷರು ರೈತರಿಗೆ ಸಾಧ್ಯವಿರುವ ನೆರವುಗಳನ್ನು ನೀಡಿ ಎಂದು ಪರೋಕ್ಷವಾಗಿ ಸಾಲ ಮನ್ನಾ ಮಾಡಲು ಸೂಚಿಸಿದ್ದರು. ಈ ಎಲ್ಲ ಒತ್ತಡದಿಂದಾಗಿ ಸಿದ್ದರಾಮಯ್ಯ ಸಾಲಮನ್ನಾ ಘೋಷಿಸುವ ಅನಿವಾರ್ಯತೆಗೆ ಸಿಲುಕಿದ್ದರು. ಘೋಷಣೆ ಹೊರಬಿದ್ದ ಕೂಡಲೇ ಬಿಜೆಪಿ ಮತ್ತು ಜೆಡಿಎಸ್‌ ತಮ್ಮ ಒತ್ತಡದಿಂದಾಗಿಯೇ ಸರಕಾರ ಸಾಲಮನ್ನಾ ಮಾಡಿದೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿವೆ.  

 ಎರಡು ವರ್ಷ ಸತತ ಬರದಿಂದ ರೈತರು ಕಂಗೆಟ್ಟಿದ್ದಾರೆ. ಈ ಪರಿಸ್ಥಿತಿಯಲ್ಲಿ ಸಾಲಮನ್ನಾ ಅವರಿಗೆ ತಾತ್ಕಾಲಿಕ ಉಪಶಮನ ನೀಡಲಿದೆ. ಆದರೆ ಸಾಲಮನ್ನಾದಿಂದ ಕೃಷಿ ಕ್ಷೇತ್ರಕ್ಕೇನೂ ದೊಡ್ಡ ಪ್ರಯೋಜನ ಆಗುವುದಿಲ್ಲ ಎನ್ನುವುದಕ್ಕೆ ಅನೇಕ ಉದಾಹರಣೆಗಳಿವೆ. ಕೃಷಿ ಕ್ಷೇತ್ರದ ಉದ್ಧಾರವಾಗಬೇಕಾದರೆ ರಾಜಕೀಯ ಪಕ್ಷಗಳು ಕೃಷಿಕರನ್ನು ಮತಬ್ಯಾಂಕ್‌ ಎಂದು ಪರಿಗಣಿಸಿ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದಲ್ಲಿ ಯೋಜನೆ, ಸ್ಕೀಮುಗಳನ್ನು ರೂಪಿಸುವ ಬದಲು ಆಮೂಲಾಗ್ರವಾಗಿ ಬದಲಾವಣೆಗೆ ಕಾರಣವಾಗುವ ಗಟ್ಟಿ ನೀತಿಗಳನ್ನು ರೂಪಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next