Advertisement

ರಸ್ತೇಲಿ ಒಂದು ಗುಂಡೀನೂ ಇರ್ಬರ್ದ್

12:01 PM Sep 05, 2017 | Team Udayavani |

ಬೆಂಗಳೂರು: ಮಳೆಗಾಲ ಮುಗಿಯುತ್ತಿದ್ದಂತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗುವಂತೆ ಬಿಬಿಎಂಪಿಗೆ
ಸೂಚನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೆಪ್ಟೆಂಬರ್‌ ನಂತರ ನಗರದ ಯಾವುದೇ ರಸ್ತೆಯಲ್ಲಿ
ಒಂದು ಗುಂಡಿ ಕೂಡ ಇರಬಾರದು ಎಂದು ಖಡಕ್‌ ಆದೇಶ ನೀಡಿದರು.

Advertisement

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸೋಮವಾರ ನಾಯಂಡಹಳ್ಳಿಯಲ್ಲಿ ಹಮ್ಮಿಕೊಂಡಿದ್ದ
ಕಾರ್ಯಕ್ರಮದಲ್ಲಿ ವೃಷಭಾವತಿ ವ್ಯಾಲಿ, ಕೆ ಆ್ಯಂಡ್‌ ಸಿ ವ್ಯಾಲಿ, ಹೆಬ್ಟಾಳ ಮತ್ತು ದೊಡ್ಡಬೆಲೆಯಲ್ಲಿ ಒಟ್ಟಾರೆ 440
ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳ ಶಂಕುಸ್ಥಾಪನೆ ನೆರವೇರಿಸಿ ಅವರು
ಮಾತನಾಡಿದರು.

“ಸೆಪ್ಟೆಂಬರ್‌ ಅಂತ್ಯದವರೆಗೆ ಮಳೆಗಾಲ ಇದೆ. ನಂತರದಲ್ಲಿ ನಗರದ ಯಾವುದೇ ರಸ್ತೆಗಳಲ್ಲಿ ಒಂದೇ ಒಂದು ಗುಂಡಿಯೂ ಇರಬಾರದು. ಹಾಗೂ ಮಳೆಯಿಂದ ಗುಂಡಿ ಬೀಳದಿರಲು ಇನ್ಮುಂದೆ ನಿರ್ಮಿಸುವ ರಸ್ತೆಗಳಿಗೆ ವೈಟ್‌ಟಾಪಿಂಗ್‌ ಆಗಿರಬೇಕು,’ ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು.

ಮುಲಾಜಿಲ್ಲದೆ ತೆರವು: “ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಲ್ಲಿ ಯಾವುದೇ ಕಾರಣಕ್ಕೂ
ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ. ಎಷ್ಟೇ ಪ್ರಭಾವಿ ವ್ಯಕ್ತಿ ಆಗಿರಲಿ, ರಾಜಕಾಲುವೆ ಒತ್ತುವರಿ ಮಾಡಿದ್ದರೆ,
ಅಂತಹ ಕಟ್ಟಡಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದು. ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಬಡವ-ಶ್ರೀಮಂತ ಎಂಬ ಭೇದ-ಭಾವವೇ ಇಲ್ಲ ಎಂದು ಮುಖ್ಯಮಂತ್ರಿ ಒತ್ತುವರಿದಾರರಿಗೆ ಎಚ್ಚರಿಕೆ
ನೀಡಿದರು.

300 ಕೋಟಿ ರೂ. ಕಾಮಗಾರಿ: ಮಳೆಯಿಂದ ಉಂಟಾದ ಸಮಸ್ಯೆಗಳ ಪರಿಹಾರಕ್ಕೆ 300 ಕೋಟಿ ರೂ. ಗಳ ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ ಎಂದರು. 220 ಚದರ ಕಿ.ಮೀ. ಇದ್ದ ನಗರವನ್ನು 2006ರಲ್ಲಿ ರಾಜಕೀಯ ಉದ್ದೇಶಕ್ಕಾಗಿ 800 ಚದರ ಕಿ.ಮೀ.ಗೆ ವಿಸ್ತರಿಸಿದರು. ಆದರೆ, ಹೀಗೆ ಸೇರ್ಪಡೆಗೊಂಡ ನಗರಸಭೆ, ಪುರಸಭೆ ವ್ಯಾಪ್ತಿಯ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸುವುದನ್ನು ಮರೆತರು. ನಂತರ ಬಂದ ಬಿಜೆಪಿಯವರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಪಾಲಿಕೆ ಆಸ್ತಿಗಳನ್ನೇ ಅಡ ಇಟ್ಟರು. ಈಗ ಮೂಲಸೌಕರ್ಯ ಒದಗಿಸುವುದರ
ಜತೆಗೆ ಅಡ ಇಡಲಾದ ಪಾಲಿಕೆ ಆಸ್ತಿಗಳನ್ನು ಬಿಡಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆ ಬಿದ್ದಿದೆ ಎಂದು ವಿರೋಧ ಪಕ್ಷಗಳಿಗೆ ಸೂಚ್ಯವಾಗಿ ಚುಚ್ಚಿದರು. ಸಾಮರ್ಥ್ಯ ಹೆಚ್ಚಳಕ್ಕೆ ಒತ್ತು: ಮುಂದಿನ ವರ್ಷ ಮಾರ್ಚ್‌ ಅಂತ್ಯಕ್ಕೆ ಜಲಮಂಡಳಿ 1,086 ದಶಲಕ್ಷ ಲೀಟರ್‌ನಷ್ಟು ತ್ಯಾಜ್ಯನೀರು ಶುದ್ಧೀಕರಿಸುವ ಸಾಮರ್ಥ್ಯ ಹೊಂದಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ನಗರದ ನಾಯಂಡಳ್ಳಿಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೃಷಭಾವತಿ ವ್ಯಾಲಿ, ಕೆ ಆಂಡ್‌ ಸಿ ವ್ಯಾಲಿ, ಹೆಬ್ಟಾಳ ಮತ್ತು ದೊಡ್ಡಬೆಲೆಯಲ್ಲಿ ಒಟ್ಟಾರೆ 440 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಈಗಿರುವ 851 ದಶಲಕ್ಷ ಲೀಟರ್‌ ಸಂಸ್ಕರಣಾ ಸಾಮರ್ಥ್ಯವನ್ನು1,086 ದಶ ಲಕ್ಷ ಲೀಟರ್‌ಗೆ ಹೆಚ್ಚಿಸಲು ಅಗತ್ಯ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ನಿತ್ಯ ನಗರಕ್ಕೆ 1,800 ದಶಲಕ್ಷ ಲೀ. ನೀರು ಪೂರೈಕೆ ಆಗುತ್ತಿದೆ. ಇದರಲ್ಲಿ 1,400 ದಶಲಕ್ಷ ಲೀ. ಕಾವೇರಿಯಿಂದ ಮತ್ತು 400 ದಶಲಕ್ಷ ಲೀ. ಅಂತರ್ಜಲದಿಂದ ಸರಬರಾಜು ಆಗುತ್ತಿದೆ. ಈ ಪೈಕಿ 1,440 ದಶಲಕ್ಷ ಲೀ. ತ್ಯಾಜ್ಯನೀರು ಉತ್ಪಾದನೆ ಆಗುತ್ತಿದೆ. ಆದರೆ, ಅದನ್ನು ಸಂಸ್ಕರಿಸುವ ಸಾಮರ್ಥ್ಯ ತುಂಬಾ ಕಡಿಮೆ ಇದೆ. ಹಾಗಾಗಿ, ವ್ಯರ್ಥವಾಗಿ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ವಿವಿಧೆಡೆ ಈಗಾಗಲೇ 851 ಎಂಎಲ್‌ಡಿ ನೀರನ್ನು ಸಂಸ್ಕರಿಸಲಾಗುತ್ತಿದ್ದು, ಮಾರ್ಚ್‌ ಅಂತ್ಯಕ್ಕೆ 1,086 ದಶಲಕ್ಷ ಲೀ. ತ್ಯಾಜ್ಯ ನೀರು ಸಂಸ್ಕರಿಸಲಾಗುತ್ತದೆ. ನಾಯಂಡಹಳ್ಳಿಯಲ್ಲಿ 1,565 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗುತ್ತಿರುವ ಉದ್ದೇಶಿತ 440 ದಶಲಕ್ಷ ಲೀ. ಸಾಮರ್ಥ್ಯದ ಸಂಸ್ಕರಣಾ ಘಟಕವು 2020ಕ್ಕೆ ಪೂರ್ಣಗೊಳ್ಳಲಿದೆ. ಇದರಿಂದ ಒಟ್ಟಾರೆ 1,500 ದಶಲಕ್ಷ ಲೀ. ನೀರು ಸಂಸ್ಕರಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಇದಲ್ಲದೆ, ಕೆ ಆಂಡ್‌ ಸಿ ವ್ಯಾಲಿಗೆ ಸೇರುವ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರದ ಕೆರೆಗಳಿಗೆ ಹಾಗೂ ಹೆಬ್ಟಾಳದಲ್ಲಿನ ನೀರನ್ನು ದೇವನಹಳ್ಳಿ, ಚಿಕ್ಕಬಳ್ಳಾಪುರ ಕೆರೆಗಳಿಗೆ ಹರಿಸುವ ಉದ್ದೇಶವೂ ಇದೆ. ತ್ಯಾಜ್ಯನೀರನ್ನು ಸಂಸ್ಕರಿಸಿ, ಮರುಬಳಕೆ ಮಾಡುವ ಕೆಲಸವನ್ನು ಹಿಂದಿನವರು ಮಾಡಬೇಕಿತ್ತು. ಯಾಕೆ ಮಾಡಲಿಲ್ಲವೋ ಗೊತ್ತಿಲ್ಲ. ಅದೆಲ್ಲವೂ ಈಗ ನಮ್ಮ ಮೇಲೆ ಬಿದ್ದಿದೆ ಎಂದು ತೀಕ್ಷ್ಣವಾಗಿ ಹೇಳಿದರು.

ಇದಲ್ಲದೆ, ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳಿಗೆ ಸಾವಿರ ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ
ನಿರ್ಮಿಸಲಾಗುತ್ತಿದೆ. ಈ ಸಂಬಂಧದ “ಸಮಗ್ರ ಯೋಜನಾ ವರದಿ’ (ಡಿಪಿಆರ್‌) ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.

ಬೈರಮಂಗಲ ಕೆರೆ ಶುದ್ಧೀಕರಿಸಿ: ಇದಕ್ಕೂ ಮುನ್ನ ಮಾತನಾಡಿದ ಸಂಸದ ಡಿ.ಕೆ.ಸುರೇಶ್‌, ನಗರದ ಬೈರಮಂಗಲ ಕೆರೆ ಶುದ್ಧೀಕರಣ ಕಾರ್ಯವನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಬೇಕು. ಈ ಸಂಬಂಧದ ಡಿಪಿಆರ್‌ ಅನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಸಿಎಂಗೆ ಮನವಿ ಮಾಡಿದರು.

110 ಹಳ್ಳಿಗಳ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡಬೇಕು. ಘೋಷಿತ ಕಾರ್ಯಕ್ರಮಗಳ ಅನುಷ್ಠಾನ ಕಾರ್ಯ ವೇಗವಾಗಿ ಆಗುತ್ತಿಲ್ಲ. ರಸ್ತೆಗಳ ನಿರ್ಮಾಣ ಆಗಿದೆ. ಆದರೆ, ನಿರ್ವಹಣೆಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ನಗರದಲ್ಲಿ ಲಕ್ಷ ಮನೆಗಳ ನಿರ್ಮಾಣಕ್ಕೆ ಇನ್ನೂ ಚಾಲನೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಮುನಿರತ್ನ ಮಾತನಾಡಿ, ರಾಜರಾಜೇಶ್ವರಿ  ನಗರದ ಕಮಾನು ಬಳಿ ನಿತ್ಯ ಪೀಕ್‌ ಅವರ್‌ನಲ್ಲಿ ಸಾಕಷ್ಟು
ಸಂಚಾರದಟ್ಟಣೆ ಉಂಟಾಗಿ, ಜನ ಪರದಾಡುವಂತಾಗಿದೆ. ಆದ್ದರಿಂದ ಈ ಜಾಗದಲ್ಲಿ ಪರ್ಯಾಯ ರಸ್ತೆ
ನಿರ್ಮಾಣಕ್ಕೆ ಅಗತ್ಯ ಇರುವ ಜಾಗ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ಶಾಸಕ ಎಸ್‌.ಟಿ. ಸೋಮಶೇಖರ್‌, ಮೇಯರ್‌ ಜಿ. ಪದ್ಮಾವತಿ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಮಹೇಂದ್ರ ಜೈನ್‌, ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next