ತುಮಕೂರು: ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ| ಜಿ. ಪರಮೇಶ್ವರ್ ಅವರು 71ನೇ ವರ್ಷದ ಹುಟ್ಟುಹಬ್ಬವನ್ನು ಶನಿವಾರ ನಗರದ ಹೆಗ್ಗೆರೆ ಸಮೀಪದ ಸಿದ್ಧಾರ್ಥ ನಗರದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಕೊಂಡರು.
ಈ ವೇಳೆ ಅಭಿಮಾನಿಗಳಿಂದ “ಮುಂದಿನ ಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್’ ಎಂಬ ಘೋಷಣೆ ಕೇಳಿ ಬಂತು. ಈ ರೀತಿ ಕೂಗಬೇಡಿ ಎಂದು ಕೈ ಸನ್ನೆ ಮಾಡಿ ಅಭಿಮಾನಿಗಳಿಗೆ ಸೂಚಿಸುತ್ತಿದ್ದರೂ “ದಲಿತ ನಾಯಕ ಪರಮೇಶ್ವರ್ ಸಿಎಂ ಆಗಬೇಕು’ ಎನ್ನುವ ಕೂಗು ಅಭಿಮಾನಿಗಳಿಂದ ಕೇಳಿ ಬರುತ್ತಿತ್ತು.
ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಿದ್ದರಾಮೋತ್ಸವ ಮಾದರಿಯಲ್ಲಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲು ಆಸಕ್ತಿ ಇಲ್ಲ. ಸಿದ್ದರಾಮಯ್ಯನವರಿಗೂ ಆಸಕ್ತಿ ಇರಲಿಲ್ಲ. ಅವರ ಅಭಿಮಾನಿಗಳು ಸೇರಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ ಎಂದರು.
ಸಿದ್ದರಾಮೋತ್ಸವದ ಮೂಲಕ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಅನುಕೂಲವಾಗಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ದಾವಣಗೆರೆಯಲ್ಲಿ ಸೇರಿದ್ದರು. ಹಾಗಾಗಿ ನಮಗೂ ಒಂದು ರೀತಿಯ ಬಲ ಬಂದಿದೆ ಎಂದು ಹೇಳಿದರು.
ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದೇನೆ. ಅಭಿಮಾನಿಗಳು, ಕಾರ್ಯಕರ್ತರು ಮನೆಗೆ ಬಂದು ಶುಭಾಶಯ ಕೋರಿದ್ದಾರೆ. ಇಂದು ಯಾರ ಕೈಗೂ ಸಿಗದೇ ತಪ್ಪಿಸಿಕೊಳ್ಳಬೇಕು ಎಂದು ಯೋಚಿಸಿದ್ದೆ. ಆದರೆ ಅಭಿಮಾನಿಗಳಿಗೆ ನಿರಾಸೆಯಾಗಬಾರದು ಎಂಬ ಉದ್ದೇಶದಿಂದ ಇಲ್ಲಿಯೇ ಉಳಿದುಕೊಂಡಿದ್ದೇನೆ’ ಎಂದರು.
ಊಹೆ ಮಾಡಲಾಗದು
ಮುಂದಿನ ದಿನಗಳಲ್ಲಿ ಬಿಜೆಪಿಯೂ ಸಮಾವೇಶ ಮಾಡಬಹುದು. ರಾಜಕೀಯವಾಗಿ ಅದು ಸಹಜ ಬೆಳವಣಿಗೆ. ನಾನು ರಾಜಕೀಯವಾಗಿ ಇನ್ನೂ ಎತ್ತರಕ್ಕೆ ತಲುಪುವ ಕಾಲವನ್ನು ಈಗಲೇ ಹೇಳಲಾಗದು. ಯಾವುದನ್ನೂ ಊಹೆ ಮಾಡುವುದು ಕಷ್ಟ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.