ಬೆಳಗಾವಿ: ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 25 ರಿಂದ 30 ಶಾಸಕರು ಅಸಮಾಧಾನಗೊಂಡು ಒಂದು ಕಡೆ ಸೇರುವವರಿದ್ದರು. ಈ ಸಂಗತಿಯನ್ನು ಮರೆಮಾಚಲು ಮಹಾ ನಾಯಕ ಆಪರೇಷನ್ ಹಸ್ತ ಹುಟ್ಟುಹಾಕಿದ್ದಾರೆ. ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದರು.
ಅಥಣಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ’25 ರಿಂದ 30 ಕಾಂಗ್ರೆಸ್ ಶಾಸಕರು ಪಕ್ಷದ ನಾಯಕರೊಬ್ಬರ ವಿರುದ್ದ ಅಸಮಾಧಾನಗೊಂಡಿದ್ದರು. ಈ ಬಗ್ಗೆ ಪತ್ರ ಬರೆದು ಹೋಟೆಲ್ ವೊಂದರಲ್ಲಿ ಸಭೆ ಮಾಡುವವರಿದ್ದರು. ಇದು ಗೊತ್ತಾಗಿ ವಿಷಯ ಮರೆಮಾಚಲು ಮಹಾ ನಾಯಕ ಆಪರೇಷನ್ ಹಸ್ತದ ನಾಟಕ ಆಡಿದ್ದಾರೆ’ ಎಂದು ಡಿ ಕೆ ಶಿವಕುಮಾರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
‘ಆಪರೇಷನ್ ಹಸ್ತ ಎಂಬುದು ಮೂರ್ಖತನದ ಮಾತು. ಆಪರೇಶನ್ ಗೆ ಒಳಗಾಗುವರು ಸಹ ಮೂರ್ಖರು ಎಂದ ಅವರು ನಾವು ಆಪರೇಷನ್ ಮಾಡಿದಾಗ ಅದಕ್ಕೊಂದು ಅರ್ಥ ಇತ್ತು. ಆಗ ಅಂತಹ ಪರಿಸ್ಥಿತಿ ಹಾಗಿತ್ತು. ಈಗ ಹಾಗಿಲ್ಲ’ ಎಂದು ತಾವು ಆಪರೇಷನ್ ಮಾಡಿದ್ದನ್ನು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಸೇರುತ್ತೀರಾ ಎಂಬ ಪ್ರಶ್ನೆಗೆ ‘ನನ್ನ ರುಂಡವೂ ಸಹ ಅಲ್ಲಿಗೆ ಹೋಗುವದಿಲ್ಲ’ ಎಂದರು. ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಅವರಿಗೆ ಮತ್ತೆ ಬಿಜೆಪಿ ಗೆ ಆಹ್ವಾನ ನೀಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ‘ಅವರು ಸ್ವಯಂ ಘೋಷಿತ ನಾಯಕರು. ಒಂದು ವೇಳೆ ಪಕ್ಷಕ್ಕೆ ಮರಳಿ ಬಂದರೆ ಸ್ವಾಗತ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರ ಜತೆಗೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಆದರೆ ಈಗ ಅವರಿಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿಲ್ಲ. ಕೈಕಟ್ಟಿಹಾಕಿದ್ದಾರೆ’ ಎಂದರು.