Advertisement

ಟಿಲ್ಲರ್‌ ಯುಗದಲ್ಲೂ ಕೋಣಗಳಿಗೆ ಉಳುಮೆ ತರಬೇತಿಯೂ ಉಂಟು!

12:33 PM Jun 20, 2024 | Team Udayavani |

ಬಜಪೆ: ಎತ್ತ ಒ…. ಬೊಲ್ಲ, ಒ ….ಕಾಟಿ… ಟುರ್‌ ಟುರ್‌…: ಇದು ಗದ್ದೆಯಲ್ಲಿ ಎತ್ತು ಇಲ್ಲವೇ ಕೋಣಗಳ ಮೂಲಕ ಉಳುಮೆ ಮಾಡುವಾಗ ಕೇಳುವ ಪದಗಳು. ಆದರೆ ಈಗ ಎಲ್ಲ ಕಡೆ ಟಿಲ್ಲರ್‌ ಉಳುಮೆಯೇ ಹೆಚ್ಚಾಗಿರುವುದರಿಂದ ಇಂಥ ದನಿಗಳು ಕೇಳಿಸುವುದಿಲ್ಲ. ಆದರೆ ಅಲ್ಲೊಬ್ಬ, ಇಲ್ಲೊಬ್ಬ ರೈತರು ಇಂದಿಗೂ ನೇಗಿಲ ಉಳುಮೆಯನ್ನೇ ಮಾಡುತ್ತಿದ್ದಾರೆ. ಅಂಥವರಲ್ಲಿ
ಒಬ್ಬರು ಬಜಪೆ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಮಳವೂರಿನ ಕಲ್ಲೋಡಿ ನಿವಾಸಿ ಲೋಕನಾಥ್‌. ರಿಕ್ಷಾ ಚಾಲಕರೂ ಆಗಿರುವ
ಇವರು ಕೋಣಗಳಿಂದ ಉಳುಮೆ ಮಾಡುವುದು ಮಾತ್ರವಲ್ಲ, ಕೋಣಗಳಿಗೆ ಉಳುಮೆಯ ತರ ಬೇತಿ ನೀಡುತ್ತಾರೆ!

Advertisement

ಹೊಸ ಕೋಣಗಳಿಗೆ ಏಕಾಏಕಿ ನೇಗಿಲು ಕಟ್ಟಿ, ಇಲ್ಲವೇ ಹಲಗೆ ಕಟ್ಟಿ ಉಳುಮೆಗೆ ಇಳಿಸಿದರೆ ಆಗುವುದಿಲ್ಲ. ಅವುಗಳಿಗೆ ಅವು
ಸಾಗಬೇಕಾದ ರೀತಿ ಮತ್ತು ದಾರಿ ಎರಡರ ತರಬೇತಿ ಬೇಕಾಗುತ್ತದೆ. ಅವುಗಳು ಅಡ್ಡಾದಿಡ್ಡಿ ಸಾಗಿದರೆ ಗದ್ದೆ ಹದ ಆಗುವುದಿಲ್ಲ. ಜತೆಗೆ ನೇಗಿಲು ಕಾಲಿಗೆ ತಾಗಿ ಅಪಾಯವಾಗುವ ಸಾಧ್ಯತೆಯೂ ಇದೆ. ಹೀಗಾಗಿ ಕೋಣಗಳಿಗೆ ಸುಮಾರು 10 ದಿನಗಳ ತರಬೇತಿಯನ್ನು ನೀಡಲಾಗುತ್ತದೆ. ಆ ಕೆಲ ಸವನ್ನು ಲೋಕನಾಥ್‌ ಶ್ರದ್ಧೆಯಿಂದ ಮಾಡುತ್ತಾರೆ.

ಈ ಬಾರಿ ಹೊಸ ಕೋಣಗಳಿಂದ ಉಳುಮೆ
ಲೋಕನಾಥ್‌ ಅವರು ಈ ಬಾರಿ ತಮ್ಮ ಹಳೆಯ ಕೋಣಗಳನ್ನು ನೀಡಿ, 3 ವರ್ಷ ಪ್ರಾಯದ ಎರಡು ಕೋಣಗಳನ್ನು ಖರೀದಿ
ಮಾಡಿದ್ದಾರೆ. ಈ ಬಾರಿ ಇವುಗಳದೇ ಉಳುಮೆ ಕಾಯಕ. ಹೊಸ ಕೋಣಗಳಿಗೆ 10 ದಿನ ಉಳುಮೆಯ ತರಬೇತಿಯನ್ನು ಇವರು ನೀಡಿದ್ದಾರೆ.

35 ವರ್ಷದ ಅನುಭವ
ಲೋಕ ನಾಥ್‌ ಅವರು ಹತ್ತನೇ ತರಗತಿಯಿಂದಲೇ ಉಳುಮೆ ಮಾಡಿ ಕೊಂಡು ಬಂದಿದ್ದಾರೆ. ಸುಮಾರು 35 ವರ್ಷಗಳ
ಅನುಭವ ಅವರದು. ಕೋಣದಿಂದ ಉಳುಮೆ ಮಾಡಿದಷ್ಟು ಟಿಲ್ಲರ್‌ನಿಂದ ಖುಷಿ ಕೊಡುವುದಿಲ್ಲ. ಕೋಣ ಮತ್ತು ನಮ್ಮ ಸಂಬಂಧ ಬೆಲೆ ಕಟ್ಟಲಾಗದ್ದು ಎನ್ನುತ್ತಾರೆ ಲೋಕನಾಥ್‌. ಅಣ್ಣ ಶುಭಕರ ಅವರು ಕೂಡ ಉಳುಮೆಗೆ, ಕೃಷಿಗೆ ಸಹಕಾರ ನೀಡುತ್ತಿದ್ದಾರೆ. ನಮ್ಮದೇ ಕೋಣವಿದ್ದರೆ ನಮ್ಮ ಸಮಯಕ್ಕೆ ಉಳುಮೆ ಮಾಡಬಹುದು, ಟಿಲ್ಲರ್‌ ಗೆ ಕಾಯಬೇಕಾಗುತ್ತದೆ ಎನ್ನುತ್ತಾರೆ ಲೋಕನಾಥ್‌.

Advertisement

ಲೋಕನಾಥ್‌ ಡಬಲ್‌ ರೋಲ್‌
ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಕೃಷಿಕನಾಗಿ ಹೊಲದಲ್ಲಿ ದುಡಿಯುವ ಲೋಕನಾಥ್‌ ಮಧ್ಯಾಹ್ನದ ಅನಂತರ ರಿಕ್ಷಾ ಚಾಲಕನಾಗಿ ದುಡಿಯುತ್ತಾರೆ. ಕೃಷಿಕನಾಗಿ ಭತ್ತ ಬೇಸಾಯದ ಜತೆ ಬದನೆ, ತೊಂಡೆ, ಕುಂಬಳಕಾಯಿ ಕೂಡ ಬೆಳೆಸುತ್ತಾರೆ.

ತರಬೇತಿ ಹೇಗೆ? ಏನೇನು ಮಾಹಿತಿ?
*ಕೋಣಗಳಿಗೆ ಮೊದಲು ಯಾವ ದಾರಿಯಲ್ಲಿ ಸಾಗಬೇಕು ಎಂದು ತಿಳಿಸಲಾಗುತ್ತದೆ. ಕೋಣದ ಎದುರು ಹಗ್ಗ ಹಿಡಿದು ಸಾಗಿದಾಗ ಅವುಗಳಿಗೆ ಇದರ ಅರಿವಾಗುತ್ತದೆ. ಯಾರಾದರೂ ಒಬ್ಬರು ಕೋಣದ ಮುಂದೆ ನಡೆದುಕೊಂಡು ಹೋಗುತ್ತಾರೆ.

*ತಿರುಗುವಾಗ ಬಳಸುವ ಭಾಷೆ, ನಿಲ್ಲಬೇಕು ಎಂದಾಗ ಬಳಸುವ ಭಾಷೆ, ವೇಗವಾಗಿ ಹೋಗಲು.. ಹೀಗೆ ನಾನಾ ಭಾಷೆಗಳನ್ನು ಹೇಳಿ ಕೊಡಲಾಗುತ್ತದೆ. ಅರ್ಥವಾಗುವ ಮೊದಲು ಸಣ್ಣಗೆ ಬೆತ್ತ ಬೀಸುವುದೂ ಉಂಟು.

* ಕೋಣಗಳಿಗೆ ಹಲಗೆಯ ಉಳುಮೆಗೆ ತರಬೇತಿಯನ್ನೂ ನೀಡಲಾಗುತ್ತದೆ. ಮೂರು ವರ್ಷದ ಕೋಣವಾದ ಕಾರಣ ಹಲಗೆಯ
ಮೇಲೆ ನಿಂತು ಉಳುಮೆಯನ್ನು ಮಾಡಲು ಸಾಧ್ಯವಿಲ್ಲ.ಅದಕ್ಕೆ ಹಲಗೆಗೆ ಒಂದು ಕಲ್ಲನ್ನುಕಟ್ಟಿ ಉಳುಮೆ ಮಾಡಲಾಗುತ್ತದೆ.

*ಕೋಣಗಳು ದಿಕ್ಕು ತಪ್ಪಿ ಎಲ್ಲೆಲ್ಲೋ ಹೋಗದಂತೆ ನೋಡುವುದು ಇಲ್ಲಿ ಮುಖ್ಯ.

*ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next