Advertisement

Mangaluru University; ಪಿಯು ಫ‌ಲಿತಾಂಶ ಬಂದರೂ ಪದವಿ ತರಗತಿಗೆ ಕಾಯಲೇಬೇಕು!

01:24 AM Apr 11, 2023 | Team Udayavani |

ಮಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಇನ್ನು ಕೆಲವೇ ದಿನಗಳಲ್ಲಿ ಪ್ರಕಟಗೊಂಡರೂ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಪದವಿ ತರಗತಿಗಳ ಆರಂಭಕ್ಕೆ ತಿಂಗಳುಗಟ್ಟಲೆ ಕಾಯಲೇಬೇಕು!

Advertisement

ಎಪ್ರಿಲ್‌ ಅಥವಾ ಮೇ ತಿಂಗಳಿನಲ್ಲಿ ದ್ವಿತೀಯ ಪಿಯು ಫಲಿತಾಂಶ ಬಂದು ಜೂನ್‌ನಲ್ಲಿ ಕಾಲೇಜು ಆರಂಭ ಈ ಹಿಂದಿನ ನಿಯಮ. ಆದರೆ ಕೊರೊನಾ ಕಾರಣದಿಂದ ಕಾಲೇಜು ಆರಂಭ ತಿಂಗಳುಗಟ್ಟಲೆ ತಡ ವಾಗಿದ್ದು, ಇದು ಈ ಬಾರಿಯೂ ಮುಂದು ವರಿಯುವ ಎಲ್ಲ ಲಕ್ಷಣಗಳಿವೆ.

2023-24ರ ಶೈಕ್ಷಣಿಕ ವರ್ಷ ಆ. 1ರಿಂದ ಆರಂಭ ಎಂದಿತ್ತು. ಆದರೆ ಇತ್ತೀಚೆಗೆ ಯುಜಿ ಮೌಲ್ಯ ಮಾಪನ ತಡವಾದ್ದರಿಂದ ಹೊಸ ಶೈಕ್ಷಣಿಕ ವರ್ಷವನ್ನು ಆ. 15ಕ್ಕೆ ಮುಂದೂಡಲಾಗಿದೆ. ಸದ್ಯ ತರಗತಿ ಮುಗಿದು ಪರೀಕ್ಷೆ ನಡೆಯಲು ಜೂನ್‌ ವರೆಗೆ ಕಾಯಬೇಕು. ಬಳಿಕ ಮೌಲ್ಯಮಾಪನ. ಅನಂತರ ಕೆಲವು ದಿನ ರಜೆ. ಈ ಮಧ್ಯೆ ಹೊಸದಾಗಿ ಕಾಲೇಜಿಗೆ ಸೇರಿದರೂ ಅವರಿಗೆ ತರಗತಿ ಕೊಠಡಿ ಸಿಗುವುದು ಕಷ್ಟ.

ದಾಖಲಾತಿಗೆ ಹೊಡೆತ!
ಪಿಯು ಫಲಿತಾಂಶ ಬಂದ ತತ್‌ಕ್ಷಣ ಕಾಲೇಜು ಪ್ರವೇಶಾತಿ ಆರಂಭಿಸಲಾಗುತ್ತದೆ. ಆದರೆ ತರಗತಿ ಆರಂಭ ವಿಳಂಬವಾಗಲಿದೆ. ಅಲ್ಲಿಯವರೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ. ಇದು ಆಗದಿದ್ದರೆ ವಿದ್ಯಾರ್ಥಿಗಳ ಕಾಲೇಜು ದಾಖಲಾತಿಯೇ ಕುಸಿತವಾಗುತ್ತದೆ. 3 4 ತಿಂಗಳು ಕಾಲೇಜು ಇಲ್ಲವಾದ ಕಾರಣದಿಂದ ಮಕ್ಕಳು ಉದ್ಯೋಗಕ್ಕೆ ಸೇರುತ್ತಾರೆ ಅಥವಾ ವೃತ್ತಿ ಸಂಬಂಧಿ ತರಬೇತಿ ಪಡೆಯಲು ನಿರ್ಧರಿಸುತ್ತಾರೆ. ಹೀಗಾಗಿ ಪದವಿ ದಾಖಲಾತಿ ಪ್ರಮಾಣ ಕುಸಿತವಾಗುವ ಅಪಾಯ ಅಧಿಕ ಎನ್ನುತ್ತಾರೆ ಕಾಲೇಜು ಪ್ರಾಂಶುಪಾಲರೊಬ್ಬರು.

ಒಂದೇ ವೇಳಾಪಟ್ಟಿ ಕಷ್ಟ
ರಾಜ್ಯದ ಎಲ್ಲ ವಿ.ವಿ.ಗಳಿಗೂ ಒಂದೇ ಶೈಕ್ಷಣಿಕ ವೇಳಾಪಟ್ಟಿ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿತ್ತು. ಆದರೆ ವಿವಿಧ ವಿ.ವಿ.ಗಳಲ್ಲಿ ಇನ್ನೂ ಫಲಿತಾಂಶ ಪೂರ್ಣ ವಾಗಿ ಬಂದಿಲ್ಲ. ಹೀಗಾಗಿ ಒಂದೇ ಶೈಕ್ಷಣಿಕ ವೇಳಾ ಪಟ್ಟಿ ಅನುಸರಿಸುವುದು ಸದ್ಯಕ್ಕೆ ಕಷ್ಟ ಎನ್ನುವುದು ವಿ.ವಿ. ಮೂಲಗಳ ಅಭಿಪ್ರಾಯ.

Advertisement

ಸ್ವಾಯತ್ತಗಳಲ್ಲಿ ಎಲ್ಲವೂ ಕ್ರಮಬದ್ಧ!
ಮಂಗಳೂರು ವಿ.ವಿ. ವ್ಯಾಪ್ತಿಯ ಸರಕಾರಿ- ಖಾಸಗಿ ಕಾಲೇಜುಗಳಲ್ಲಿ ತರಗತಿ ತಡ ವಾದರೆ ಸ್ವಾಯತ್ತ ಕಾಲೇಜುಗಳಲ್ಲಿ ತರಗತಿ ತಡವಾಗುವ ಸಮಸ್ಯೆ ಇಲ್ಲ. ಅಲ್ಲಿ 6ನೇ ಸೆಮಿಸ್ಟರ್‌ ಕೊನೆಯ ಹಂತದ ಪಠ್ಯ ಸದ್ಯ ನಡೆಯು ತ್ತಿದ್ದು, ಎಪ್ರಿಲ್‌ನಲ್ಲಿ ಪರೀಕ್ಷೆ ಮುಗಿಸಿ ಮೇ ತಿಂಗಳಲ್ಲಿ ಫಲಿತಾಂಶ ಪ್ರಕಟವಾಗುತ್ತದೆ. ಮಂಗಳೂರು ವಿ.ವಿ. ಹೆಸರಿನಲ್ಲಿ ಸರ್ಟಿ ಫಿಕೇಟ್‌ ಕೂಡ ದೊರೆಯುತ್ತದೆ. ಉದ್ಯೋಗಕ್ಕೆ ತೆರಳುವವರಿಗೆ ಇದು ಅನು ಕೂಲ. ಅಂದಹಾಗೆ ಇಲ್ಲಿ ಜೂನ್‌ನಲ್ಲೇ 2023-24ನೇ ಸಾಲಿನ ಶೈಕ್ಷಣಿಕ ವರ್ಷವೂ ಆರಂಭ!

ಪಿಯು ಫಲಿತಾಂಶ ಬಂದ ಕೂಡಲೇ ಕಾಲೇಜು ಪ್ರವೇಶಕ್ಕೆ ದಾಖಲಾತಿ ಆರಂಭಿಸಲು ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹಿಂದೆಯೂ ಇದರ ಬಗ್ಗೆ ಅವಲೋಕನ ಆಗಿತ್ತು. ಆದರೆ ರಾಜ್ಯಾದ್ಯಂತ ಒಂದೇ ವೇಳಾಪಟ್ಟಿ ಕಾರಣದಿಂದ ಅನುಷ್ಠಾನಕ್ಕೆ ಸವಾಲು ಎದುರಾಗಿತ್ತು. ಈ ಬಾರಿ ಪಿಯು ಫಲಿತಾಂಶ ಬಂದ ಕೂಡಲೇ ದಾಖಲಾತಿ ಪ್ರಕ್ರಿಯೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಪ್ರೊ| ಕಿಶೋರ್‌ ಕುಮಾರ್‌ ಸಿ.ಕೆ., ಕುಲಸಚಿವರು (ಆಡಳಿತ) ಮಂಗಳೂರು ವಿ.ವಿ.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next