Advertisement

ಶಾಸಕರ ಪಕ್ಷ ಬದಲಾದರೂ ಸಂಸದ ಸ್ಥಾನ ಬಿಜೆಪಿಗೆ ಖಚಿತ

01:00 AM Mar 22, 2019 | Team Udayavani |

ಕುಂದಾಪುರ: ಆಡಳಿತಾತ್ಮಕವಾಗಿ ಉಡುಪಿ ಜಿಲ್ಲೆಗೆ ಸೇರಿದ್ದರೂ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವುದು ಬೈಂದೂರು ವಿಧಾನಸಭಾ ಕ್ಷೇತ್ರದ ವಿಶೇಷತೆ. ಇಲ್ಲಿ ಈ ಬಾರಿಯ ಚುನಾವಣ ಕಾವು ನಿಧಾನವಾಗಿ ಹಬ್ಬಲಾರಂಭಿಸಿದೆ. 

Advertisement

ಯಡಿಯೂರಪ್ಪ ಶಾಸಕರಾಗಿ ಆಯ್ಕೆಯಾದ ಬಳಿಕ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಇಲ್ಲಿ ಐದು ತಿಂಗಳ ಹಿಂದೆಯಷ್ಟೇ ಲೋಕಸಭಾ ಉಪ ಚುನಾವಣೆ ನಡೆದಿತ್ತು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಬಿಎಸ್‌ವೈ ಪುತ್ರ ಬಿ.ವೈ. ರಾಘವೇಂದ್ರ (ಪಡೆದ ಒಟ್ಟು ಮತ – 5,43,306) ಅವರು ಜೆಡಿಎಸ್‌ – ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ, ಮಾಜಿ ಸಿಎಂ ಎಸ್‌. ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ (ಪಡೆದ ಒಟ್ಟು ಮತ – 4,91,158) ಅವರನ್ನು 52,148 ಮತ ಅಂತರದಿಂದ ಸೋಲಿಸಿದ್ದರು.

ಅದಾಗಿ ಕೇವಲ ಐದೇ ತಿಂಗಳಲ್ಲಿ ಮತ್ತೆ ಚುನಾವಣ ಅಖಾಡಕ್ಕೆ ಅಣಿಯಾಗಬೇಕಾದ ಅನಿವಾರ್ಯ ಇಲ್ಲಿನ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರದ್ದು. 

ಯಾರಿಗೆ ಮುನ್ನಡೆ?
2008ರಿಂದೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬೈಂದೂರು ಒಮ್ಮೆ ಬಿಜೆಪಿ, ಮತ್ತೂಮ್ಮೆ ಕಾಂಗ್ರೆಸ್‌ಗೆ ಎಂಬಂತೆ ಒಲಿದಿದ್ದರೂ ಲೋಕಸಭಾ ಚುನಾವಣೆ ಗಳಲ್ಲಿ ಗೆಲುವು ಬಿಜೆಪಿಯದ್ದೇ ಆಗಿದೆ. 2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್‌ಗಿಂತ 7,726 ಮತ ಹೆಚ್ಚು ಪಡೆದು ಗೆದ್ದಿದ್ದರೆ, 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್‌ ಎದುರು 12,255 ಮತಗಳ ಗೆಲುವು ಸಾಧಿಸಿತು. 2013ರ ವಿಧಾನಸಭೆ ಚುನಾವಣೆಯಲ್ಲಿ 31,149 ಮತಗಳ ಗೆಲುವು ಕಾಂಗ್ರೆಸ್‌ ಪಾಲಾಯಿತು. 2014ರ ಲೋಕಸಭಾ ಚುನಾವಣೆಯಲ್ಲಿ 46,416 ಮತಗಳ ಅಂತರದ ಗೆಲುವು ಬಿಜೆಪಿಯದ್ದಾಗಿತ್ತು. 2018ರ ವಿಧಾನಸಭೆ ಚುನಾವಣೆಯಲ್ಲಿ 24,393 ಮತಗಳ ಅಂತರದ ಗೆಲುವು ಬಿಜೆಪಿಗೆ ಸಿಕ್ಕಿತು. ಅದೇ ವರ್ಷ ನಡೆದ ಲೋಕಸಭಾ ಉಪ ಚುನಾ ವಣೆಯಲ್ಲಿ ಜೆಡಿಎಸ್‌ ಎದುರು ಬಿಜೆಪಿ 14,572 ಮತಗಳ ಗೆಲುವು ಸಾಧಿಸಿತು. 

ಬಿಜೆಪಿಗೆ ವರವಾಗಲಿದೆಯೇ?
ಶಿವಮೊಗ್ಗ ಕ್ಷೇತ್ರಕ್ಕೆ ಯಾವುದೇ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. ಆದರೂ ಬಿಜೆಪಿ ಯಿಂದ ರಾಘವೇಂದ್ರ; ಜೆಡಿಎಸ್‌ – ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣಕ್ಕಿಳಿಯುವುದು ಬಹುತೇಕ ಖಚಿತ. ಬೈಂದೂರು ವ್ಯಾಪ್ತಿಯಲ್ಲಿ ನಿಕಟ ಪೈಪೋಟಿ ಬಿಜೆಪಿ – ಕಾಂಗ್ರೆಸ್‌ ನಡುವೆ. ಇಲ್ಲಿ ಬಿಜೆಪಿ ಸುಲಭವಾಗಿ ಮುನ್ನಡೆ ಪಡೆಯುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Advertisement

ಈಗಿನ ಚಿತ್ರಣವೇನು
ಬೈಂದೂರು ಕ್ಷೇತ್ರಾದ್ಯಂತ ಬಿಜೆಪಿ ಈಗಾಗಲೇ ಪ್ರಚಾರ ಆರಂಭಿಸಿದ್ದರೆ, ಕಾಂಗ್ರೆಸ್‌-ಜೆಡಿಎಸ್‌  ಮೈತ್ರಿಕೂಟ ಇನ್ನೂ ಅಣಿಯಾದಂತೆ ಕಾಣುತ್ತಿಲ್ಲ. ಈ ಭಾಗದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಹೆಚ್ಚಿದೆ. ಆದರೆ ತಮ್ಮ ಪಕ್ಷದ ಅಭ್ಯರ್ಥಿ ಅಥವಾ ತಮ್ಮ ಪಕ್ಷದ ಚಿಹ್ನೆ ಇರುವುದಿಲ್ಲ ಎನ್ನುವ ಕೊರಗು ಕಾಂಗ್ರೆಸ್‌ ಕಾರ್ಯಕರ್ತರದ್ದು. ಐದು ತಿಂಗಳ ಹಿಂದೆ ನಡೆದ ಉಪ ಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರು ರಾಘವೇಂದ್ರ ಅವರಿಗೆ ನಿಕಟ ಸ್ಪರ್ಧೆ ನೀಡಿರುವುದು ಬಿಜೆಪಿಯನ್ನು ನಿದ್ದೆಗೆಡುವಂತೆ ಮಾಡಿದ್ದರೂ ಕ್ಷೇತ್ರ ದಾದ್ಯಂತ “ಮೋದಿ ಮತ್ತೂಮ್ಮೆ’ ಎನ್ನುವ ಜಪ ಕೇಳಿ ಬರುತ್ತಿದೆ. ಮತ್ತೂಂದೆಡೆ, ಉಪಚುನಾವಣೆಯಲ್ಲಿ ಸಿಕ್ಕಿದ್ದ ಹೆಚ್ಚಿನ ಮತಗಳಿಂದ ಸಂತುಷ್ಟಗೊಂಡಂತಿರುವ  ಕಾಂಗ್ರೆಸ್‌-ಜೆಡಿಎಸ್‌ ಒಟ್ಟಾಗಿ ಈ ಬಾರಿಯಾದರೂ ಬಿಜೆಪಿಯನ್ನು ಮಣಿಸಲು ರಣತಂತ್ರ ಹೆಣೆಯುತ್ತಿವೆ.

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next