Advertisement

ಶೇ.60 ಭರವಸೆಯನ್ನೂ ಈಡೇರಿಸಿಲ್ಲ: ಸಿದ್ದರಾಮಯ್ಯ ವಾಗ್ಧಾಳಿ

07:58 PM Feb 14, 2023 | Team Udayavani |

ವಿಧಾನಸಭೆ: ಬಿಜೆಪಿ 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ 600 ಭರವಸೆ ಪೈಕಿ ಶೇ.60ರಷ್ಟು ಈಡೇರಿಸಿಲ್ಲ. ಹೀಗಿರುವಾಗ ರಾಜ್ಯಪಾಲರ ಕೈಲಿ ಸುಳ್ಳು ಹೇಳಿಸಿರುವುದು ನಿಜವೋ ಅಲ್ಲವೋ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Advertisement

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ಬ್ಯಾಂಕ್‌ ಹಾಗೂ ಸಹಕಾರ ಸಂಘಗಳಲ್ಲಿ ಪಡೆದಿರುವ ಒಂದು ಲಕ್ಷ ರೂ. ಸಾಲ ಮನ್ನಾ, 20 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಲಾ 10 ಸಾವಿರ ರೂ. ನಗದು, ಬೆಂಬಲ ಬೆಲೆಗಾಗಿ ಐದು ಸಾವಿರ ಕೋಟಿ ರೂ. ವಿಶೇಷ ನಿಧಿ ಸ್ಥಾಪನೆ, ನೀರಾವರಿ ಯೋಜನೆಗಳಿಗೆ 1.50 ಲಕ್ಷ ಕೋಟಿ ರೂ. ವೆಚ್ಚ ಮಾಡುವ ಸುಜಲಾಂ ಸುಫ‌ಲಾಂ ಯೋಜನೆ ಇದ್ಯಾವುದೂ ಜಾರಿಯೇ ಆಗಿಲ್ಲ ಎಂದು ಉದಾಹರಣೆ ಸಹಿತ ವಿವರಿಸಿದರು.

ಪಶು ಸಂಗೋಪನೆ ಇಲಾಖೆಯಿಂದ ಮೂರು ಸಾವಿರ ಕೋಟಿ ರೂ. ಮೊತ್ತದ ಯೋಜನೆ ಕಾಮದೇನು ಘೋಷಿಸಲಾಗಿತ್ತು. ಆದರೆ, ಇದುವರೆಗೂ ಜಾರಿಯಾಗಿಲ್ಲ ಎಂದಾಗ, ಕಾಂಗ್ರೆಸ್‌ ಸದಸ್ಯರು ಅದು ನಾಮದೇನು ಆಗಿದೆ ಎಂದು ಕಿಚಾಯಿಸಿದರು.

ಹೌದು, ತಿರುಪತಿ ತಿಮ್ಮಪ್ಪನ ನಾಮ ಅಂತಾರೆ ನಮ್ಮ ಕಡೆ. ಇತ್ತೀಚೆಗೆ ನಾನು ಏನೇ ಮಾತನಾಡಿದರೂ ವಿವಾದ ಮಾಡಲಾಗುತ್ತದೆ. ಇದಕ್ಕೂ ಬೇಕಾದರೆ ತಿರುಪತಿ ತಿಮ್ಮಪ್ಪನಿಗೆ ಅವಮಾನ ಮಾಡಿದರು ಎಂದೂ ಹೇಳಬಹುದು ಎಂದು ಚಟಾಕಿ ಹಾರಿಸಿದರು.

ಮಾತು ಮುಂದುವರಿಸಿದ ಸಿದ್ದರಾಮಯ್ಯ, ಕಾಂಗ್ರೆಸ್‌ 2013ರಲ್ಲಿ ಪ್ರಣಾಳಿಕೆಯಲ್ಲಿ 165 ಭರವಸೆ ನೀಡಿತ್ತು. ಆ ಪೈಕಿ 158 ಈಡೇರಿಸಿತು. ಜತೆಗೆ ಹೊಸದಾಗಿ 30 ಯೋಜನೆ ಜಾರಿಗೊಳಿಸಿತು. ಇದರ ಬಗ್ಗೆ ನಾನು ಬಹಿರಂಗ ಚರ್ಚೆಗೂ ಸಿದ್ಧ ಎಂದು ಹೇಳಿದರು.

Advertisement

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ವೇಳೆ ಸಿ.ಟಿ.ರವಿ ಸೇರಿ ಹಲವರು ಡಬಲ್‌ ಎಂಜಿನ್‌ ಸರ್ಕಾರ, ಸಾಧನೆ ಎಂದೆಲ್ಲಾ ಮಾತನಾಡಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ರಸಗೊಬ್ಬರ ಸಬ್ಸಿಡಿಗೆ 50 ಸಾವಿರ ಕೋಟಿ ಕಡಿತ ಮಾಡಲಾಗಿದೆ. ನರೇಗಾ ಯೋಜನೆಗೆ 29 ಸಾವಿರ ಕೋಟಿ ರೂ. ಕಡಿತ ಮಾಡಲಾಗಿದೆ. ಇದು ಅಭಿವೃದ್ಧಿಯ ಸಂಕೇತವೇ ಎಂದು ಪ್ರಶ್ನಿಸಿದರು.

ಐ ಆ್ಯಮ್‌ ಆಲ್‌ವೇಸ್‌ ರಿಲೆವೆಂಟ್‌
ಸಿದ್ದರಾಮಯ್ಯ ಅವರು ಮಾತನಾಡುವಾಗ ಬಿಜೆಪಿಯವರು ಪದೇಪದೆ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಆ ಮಟ್ಟಿಗೆ ನಾನು ರಿಲೆವೆಂಟ್‌ ಎಂಬುದು ಅರ್ಥವಾಗಿದೆ ಎಂದರು.

ಆಗ, ಸಿ.ಟಿ.ರವಿ, ಹೌದು ಅದಕ್ಕೆ ಮಾತನಾಡುತ್ತೇವೆ. ಇರ್‌ರಿಲೆವೆಂಟ್‌ ಅಂತಾ ನಿಮಗೆ ಯಾಕೆ ಅನುಮಾನ ಎಂದು ಕಾಲೆಳೆದರು. ಅದಕ್ಕೆ ಸಿದ್ದರಾಮಯ್ಯ, ನೋ..ನೋ.. ಐ ಆ್ಯಮ್‌ ಆಲ್‌ವೇಸ್‌ ರಿಲೆವೆಂಟ್‌, ಹಿಂದೆಯೂ, ಈಗಲೂ ಮುಂದೆಯೂ ಎಂದು ಹೇಳಿದರು.

ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಮೇಲ್ಮನೆಯಲ್ಲಿ ಉಗ್ರಪ್ಪ ಅವರು ರೈತರ ಸಾಲ ಮನ್ನಾ ಮಾಡಿ ಅಂದಾಗ ನಾವು ನೋಟು ಪ್ರಿಂಟ್‌ ಮಾಡುವ ಯಂತ್ರ ಇಟ್ಟುಕೊಂಡಿಲ್ಲ ಅಂದರು. ಇದೀಗ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರೈತರ ಸಾಲ ಮನ್ನಾದಿಂದ ದೇಶಕ್ಕೆ ಉಪಯೋಗವಿಲ್ಲ ಎಂದು ಹೇಳಿದ್ದಾರೆ. ಆದರೆ, ಉದ್ಯಮಿಗಳು ಬ್ಯಾಂಕ್‌ಗಳಲ್ಲಿ ಪಡೆದ 12 ಲಕ್ಷ ಕೋಟಿ ರೂ. ಅನುತ್ಪಾದಕ ಆಸ್ತಿ ಎಂದು ಪರಿಗಣಿಸಿ ಮನ್ನಾ ಮಾಡುತ್ತಾರೆ. ಇದು ಬಿಜೆಪಿಯವರ ರೈತರಪರ ಕಾಳಜಿ, ಅದಾನಿ, ಅಂಬಾನಿ ಮೇಲಿನ ಪ್ರೀತಿ.
– ಸಿದ್ದರಾಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next