ಉಡುಪಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮೌಲ್ಯಮಾಪಕರ ತಪ್ಪಿನಿಂದ ಅನೇಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಆದರೆ ಅಸಮರ್ಪಕವಾಗಿ ಮೌಲ್ಯಮಾಪನ ಮಾಡಿದವರಿಗೆ ಯಾವುದೇ ಶಿಕ್ಷೆಯಾಗುತ್ತಿರಲಿಲ್ಲ. 2021-22ನೇ ಸಾಲಿನಿಂದ ಲೋಪ ಎಸಗಿದವರಿಂದಲೇ ದಂಡ ವಸೂಲಿ ಮಾಡಲು ಸರಕಾರ ಮುಂದಾಗಿದೆ.
2018-19, 2019-20ನೇ ಸಾಲಿನಲ್ಲಿ (2020-21ರಲ್ಲಿ ವಾರ್ಷಿಕ ಪರೀಕ್ಷೆ ನಡೆದಿರಲಿಲ್ಲ) ಕೇವಲ 400 ರೂ. ಮಾತ್ರ ದಂಡ ಸಂಗ್ರಹಿಸಲಾಗಿದೆ. ಆದರೆ ಈ ಅವಧಿಯಲ್ಲಿ ಮೌಲ್ಯಮಾಪನ ಲೋಪ ದಿಂದ 2,777 ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದ ಅನಂತರ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿ ಪಡೆದುಕೊಳ್ಳಲು ಹಾಗೂ ಅಂಕಗಳ ಮರುಎಣಿಕೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಅವಕಾಶ ಇರುತ್ತದೆ. ಅಂಕ ಮರುಎಣಿಕೆಯಿಂದ ಈ ಲೋಪ ಕಂಡುಬರುತ್ತದೆ. ಮೌಲ್ಯಮಾಪಕರಿಂದ ಶೇ. 6ಕ್ಕಿಂತ ಹೆಚ್ಚು ಅಂಕ ಲೋಪವಾಗಿದ್ದರೆ ಅಂಕದ ಜತೆಗೆ ವಿದ್ಯಾರ್ಥಿಗಳು ಪಾವತಿಸಿದ ಮೊತ್ತವನ್ನು ವಾಪಸ್ ನೀಡಲಾಗುತ್ತದೆ. ಶೇ. 6ಕ್ಕಿಂತ ಕಡಿಮೆಯಿದ್ದಲ್ಲಿ ವಿದ್ಯಾರ್ಥಿಗಳು ಪಾವತಿಸಿರುವ ಮೊತ್ತ ವಾಪಸ್ ನೀಡುವುದಿಲ್ಲ. 2019ರಲ್ಲಿ 1,008, 2020ರಲ್ಲಿ 1,540 ಹಾಗೂ 2021ರಲ್ಲಿ 31 ವಿದ್ಯಾರ್ಥಿಗಳ ಅಂಕವು ಶೇ. 6ಕ್ಕಿಂತ ಹೆಚ್ಚು ವ್ಯತ್ಯಾಸವಾಗಿತ್ತು. ಕ್ರಮವಾಗಿ 66, 124 ಹಾಗೂ 8 ವಿದ್ಯಾರ್ಥಿಗಳ ಅಂಕವು ಶೇ. 6ಕ್ಕಿಂತ ಕಡಿಮೆ ವ್ಯತ್ಯಾಸವಾಗಿತ್ತು.
ಈ ವರ್ಷದಿಂದ ಲೋಪವೆಸಗಿದ ಮೌಲ್ಯಮಾಪಕರ ವಿರುದ್ಧ ಕಠಿನ ದಂಡಾಸ್ತ್ರ ಪ್ರಯೋಗಿಸುವ ಸಾಧ್ಯತೆಯಿದೆ. ಮೌಲ್ಯಮಾಪಕರ ಲೋಪದ ಬಗ್ಗೆ ಈಗಾಗಲೇ ವಿಧಾನ ಮಂಡಲ ಅಧಿವೇಶನದಲ್ಲೂ ಗಂಭೀರ ಚರ್ಚೆ ನಡೆದಿದ್ದು, ಕಠಿನ ಕ್ರಮದ ಭರವಸೆಯನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ನೀಡಿದ್ದಾರೆ.
ಆದರೆ, ಮೌಲ್ಯಮಾಪಕರ ಕಣ್ತಪ್ಪಿನಿಂದ ಆಗುವ ಲೋಪವು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಕುಂದಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೂ ಇದರ ಪರಿಣಾಮ ಬೀರುತ್ತದೆ. ದ್ವಿ.ಪಿ ಯುಸಿ ಮೌಲ್ಯಮಾಪಕರು ತಪ್ಪೆಸಗಿದರೆ ದಂಡಾಸ್ತ್ರ ಪ್ರಯೋಗಕ್ಕೆ ಮುಂದಾಗುವ ಸರಕಾರ ತಪ್ಪೆಸಗುವ ಎಸೆ ಸೆಲ್ಸಿ ಪರೀಕ್ಷಾ ಮೌಲ್ಯಮಾಪಕರಮೇಲೂ ಕ್ರಮ ವಹಿಸಬಹುದು.