Advertisement

PU ಫ‌ಲಿತಾಂಶ ಪ್ರಕಟಗೊಂಡರೂ ಕೈಸೇರದ ಭತ್ತೆ; 25 ಸಾವಿರ ಉಪನ್ಯಾಸಕರಿಂದ ಮೌಲ್ಯಮಾಪನ

11:23 PM Jun 24, 2023 | Team Udayavani |

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಮುಗಿದು ಫ‌ಲಿತಾಂಶ ಪ್ರಕಟಗೊಂಡು, ಪೂರಕ ಪರೀಕ್ಷೆಯ ಫ‌ಲಿತಾಂಶವೂ ಪ್ರಕಟವಾಗಿದ್ದರೂ ಪಿಯು ಪರೀಕ್ಷೆಯ ಮೌಲ್ಯಮಾಪನದ ಹಣ ಬಿಡುಗಡೆಯಾಗಿಲ್ಲ.

Advertisement

ಮಾರ್ಚ್‌ 9ರಿಂದ 29ರ ವರೆಗೆ ನಡೆದಿದ್ದ 2023ರ ಸಾಲಿನ ದ್ವಿತೀಯ ಪಿಯು ಪರೀಕ್ಷೆಗೆ ಸುಮಾರು 7.02 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಸುಮಾರು 40 ಲಕ್ಷಕ್ಕೂ ಹೆಚ್ಚು ಪತ್ರಿಕೆಗಳ ಮೌಲ್ಯಮಾಪನವನ್ನು 25 ಸಾವಿರ ಮೌಲ್ಯಮಾಪಕರು ಮೌಲ್ಯಮಾಪನ ನಡೆಸಿ ತ್ವರಿತ ಫ‌ಲಿತಾಂಶಕ್ಕೆ ಸಹಕರಿಸಿದ್ದರು.

ರಾಜ್ಯದ 65 ಮೌಲ್ಯಮಾಪನ ಕೇಂದ್ರಗಳಲ್ಲಿ ಎಪ್ರಿಲ್‌ 5ಕ್ಕೆ ಮೌಲ್ಯಮಾಪನ ಆರಂಭಗೊಂಡಿದ್ದು, ಎಪ್ರಿಲ್‌ 21ಕ್ಕೆ ಫ‌ಲಿತಾಂಶ ಪ್ರಕಟವಾಗಿತ್ತು. ಚುನಾವಣೆಯಿದ್ದ ಹಿನ್ನೆಲೆಯಲ್ಲಿ ಉಪನ್ಯಾಸಕರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ ಮೌಲ್ಯಮಾಪನಕ್ಕೆ ತೊಂದರೆ ಆಗಬಾರದು, ಫ‌ಲಿತಾಂಶ ಪ್ರಕಟನೆ ತ್ವರಿತವಾಗಬೇಕು ಎಂದು ಕರ್ನಾ ಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ಈ ಬಾರಿ ಅತಿಥಿ ಉಪನ್ಯಾಸಕರನ್ನು ಸಹ ಮೌಲ್ಯಮಾಪನಕ್ಕೆ ಬಳಸಿಕೊಂಡಿತ್ತು.

ಆದರೆ ಮೌಲ್ಯಮಾಪನ ನಡೆದು, ಫ‌ಲಿತಾಂಶ ಪ್ರಕಟವಾಗಿ ಎರಡು ತಿಂಗಳಾದರೂ ಮೌಲ್ಯಮಾಪಕರ ಭತ್ತೆ, ಪ್ರಯಾಣ ಭತ್ತೆ ಸಂದಾಯವಾಗಿಲ್ಲ. ಪ್ರಶ್ನೆ ಪತ್ರಿಕೆ ತಯಾರಿಸಿದವರು, ಪ್ರಶ್ನೆ ಪತ್ರಿಕೆ ಸಾಗಾಟ ನಡೆಸಿದವರ ಭತ್ತೆಗಳೂ ಬಿಡುಗಡೆಯಾಗಿಲ್ಲ ಎಂದು ಉಪನ್ಯಾಸಕರು ನೋವು ತೋಡಿಕೊಳ್ಳುತ್ತಿದ್ದಾರೆ.

ಪಿಯುಸಿ ಉಪನ್ಯಾಸಕರ ಸಂಘದ ಕಾರ್ಯಾಧ್ಯಕ್ಷ ವೆಂಕಟೇಶ್‌ ಅವರ ಪ್ರಕಾರ, ಸಾಮಾನ್ಯವಾಗಿ ಮೌಲ್ಯಮಾಪನದ ಭತ್ತೆ ಸೇರಿ ಎಲ್ಲ ಸವಲತ್ತುಗಳ ಹಣವನ್ನು ಮೌಲ್ಯಮಾಪನ ನಡೆದ ತಿಂಗಳೊಳಗೆ ಸರಕಾರ ನೀಡುತ್ತದೆ. ಆದರೆ ಈ ಬಾರಿ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಈ ಬಾರಿ ಅತಿಥಿ ಉಪನ್ಯಾಸಕರನ್ನು ಕೂಡ ಮೌಲ್ಯಮಾಪನಕ್ಕೆ ಬಳಸಿಕೊಳ್ಳಲಾಗಿದೆ. ಅವರು ಸಾಲಸೋಲ ಮಾಡಿ ಲಾಡ್ಜ್ಗಳಲ್ಲಿ ತಂಗಿ ಮೌಲ್ಯಮಾಪನ ಕೇಂದ್ರಗಳಿಗೆ ತೆರಳಿ ಮೌಲ್ಯಮಾಪನ ಮಾಡಿದ್ದಾರೆ. ಆದರೆ ತಿಂಗಳೆರಡು ಕಳೆದಿದ್ದರೂ ಭತ್ತೆ ಬಂದಿಲ್ಲ. ಇದರಿಂದ ಅವರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಹೇಳುತ್ತಾರೆ.

Advertisement

ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿ ಗಳನ್ನು ಭೇಟಿಯಾಗಿದ್ದರೂ ಪೂರಕ ಸ್ಪಂದನೆ ಸಿಕ್ಕಿಲ್ಲ. 2018ರಿಂದ ತಿಂಗಳೊಳಗೆ ಮೌಲ್ಯಮಾಪನದ ಹಣ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು ಮೌಲ್ಯ ಮಾಪನದ ಕೊನೆಯ ದಿನವೇ ಮೌಲ್ಯಮಾಪಕರ ಕೈಯಲ್ಲೇ ಚೆಕ್‌ ನೀಡಲಾಗುತ್ತಿತ್ತು ಎಂದಿದ್ದಾರೆ.

ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿರುವ ಮುಖ್ಯ ಅಧೀಕ್ಷಕರಿಗೆ ದಿನವೊಂದಕ್ಕೆ 1,051 ರೂ., ಉಪಮುಖ್ಯ ಅಧೀಕ್ಷಕರಿಗೆ ದಿನವೊಂದಕ್ಕೆ 979 ರೂ., ಸಹಾಯಕ ಮೌಲ್ಯಮಾಪಕರಿಗೆ 3 ಗಂಟೆ ಅವಧಿಯ ಮೌಲ್ಯ ಮಾಪನಕ್ಕೆ 36 ರೂ. ಹಾಗೂ ದಿನಭತ್ತೆ 976 ರೂ., ಸ್ಥಳೀಯ ಭತ್ತೆಯನ್ನು ಬೆಂಗಳೂರಿಗೆ 288 ರೂ. ಮತ್ತು ಇತರೆ ಪ್ರದೇಶಗಳಿಗೆ 194 ರೂ.ನಿಗದಿ ಪಡಿಸಲಾಗಿದೆ.

ಮೊದಲು 3 ಗಂಟೆ ಅವಧಿಯ ಕನ್ನಡ ಆವೃತ್ತಿಯಲ್ಲದ ಪ್ರಶ್ನೆ ಪತ್ರಿಕೆ ತಯಾರಿಸಲು ಪ್ರತಿಯೊಬ್ಬರಿಗೆ 2,498 ರೂ., ಮೂರು ಗಂಟೆ ಅವಧಿಯ ಕನ್ನಡ ಆವೃತ್ತಿ ಸಹಿತ ಪ್ರಶ್ನೆ ಪತ್ರಿಕೆ ತಯಾರಿಸಲು 2,900 ರೂ., ವಾಹನ ಚಾಲಕರಿಗೆ 1,253 ರೂ. ಗಳನ್ನು ಸರಕಾರ ನಿಗದಿ ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7 ರಂದು ಬಜೆಟ್‌ ಮಂಡಿಸಲಿದ್ದಾರೆ. ಆ ಬಳಿಕವೇ ಮೌಲ್ಯಮಾಪನದ ಹಣ ಬಿಡುಗಡೆಯಾಗಲಿದೆ.
– ಆರ್‌. ರಾಮಚಂದ್ರನ್‌,
ನಿರ್ದೆಶಕರು, ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ

– ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next