Advertisement

ಪೆಟ್ರೋಲ್‌ ಬಂಕ್‌ಗಾಗಿ ತೆರವುಗೊಂಡ ಮರಗಳ ಸ್ಥಳಾಂತರ; ಪೋಷಣೆ

11:50 PM Nov 20, 2019 | Sriram |

ಕಾಪು : ಕೊಪ್ಪಲಂಗಡಿ ಬಳಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಪೆಟ್ರೋಲ್‌ ಬಂಕ್‌ಗೆ ದಾರಿ ಮಾಡಿಕೊಳ್ಳುವ ಉದ್ದೇಶದಿಂದ ಅರಣ್ಯ ಇಲಾಖೆಯ ಒಪ್ಪಿಗೆ ಪಡೆದು 18 ಮರಗಳನ್ನು ತೆರವುಗೊಳಿಸಲಾಗಿದ್ದು, ಇದರಲ್ಲಿ 11 ಮರಗಳನ್ನು ಸ್ಥಳಾಂತರ ಮಾಡಿ ನೆಟ್ಟು ಪೋಷಿಸುವ ಪ್ರಯತ್ನವೂ ನಡೆಯುತ್ತಿದೆ.

Advertisement

ರಾಷ್ಟ್ರೀಯ ಹೆದ್ದಾರಿ 66ರ ಕಾಪು – ಮೂಳೂರು ನಡುವಿನ ಕೊಪ್ಪಲಂಗಡಿಯಲ್ಲಿ ಭಾರತ್‌ ಪೆಟ್ರೋಲಿಯಂನ ಹೊಸ ಪೆಟ್ರೋಲ್‌ ಬಂಕ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಹೆದ್ದಾರಿಯಿಂದ ಪೆಟ್ರೋಲ್‌ ಬಂಕ್‌ಗೆ ಬರಲು ಎರಡೂ ಬದಿಯಲ್ಲಿ ಹೊಸ ಸರ್ವೀಸ್‌ ರಸ್ತೆ ನಿರ್ಮಿಸಲಾಗುತ್ತಿದ್ದು, ಅದಕ್ಕಾಗಿ ಹೆದ್ದಾರಿ ಬದಿಯ 18 ಗಿಡಗಳನ್ನು ತೆರವುಗೊಳಿಸಲಾಗಿತ್ತು.

18 ರಲ್ಲಿ 11 ಗಿಡಗಳ ಸ್ಥಳಾಂತರ
ತೆರವುಗೊಳಿಸಲಾದ 18 ಮರಗಳ ಪೈಕಿ ಇದರಲ್ಲಿ 11 ಗಿಡಗಳನ್ನು ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್‌ ಲೋಬೋ, ಉಪ ಅರಣ್ಯಾಧಿಕಾರಿ ನಾಗೇಶ್‌ ಬಿಲ್ಲವ, ಅರಣ್ಯ ರಕ್ಷಕ ಮಂಜುನಾಥ್‌ ನಾಯ್ಕ ಅವರ ಮಾರ್ಗದರ್ಶನದಂತೆ ಸ್ಥಳಾಂತರಿಸಲಾಗಿತ್ತು. ಸ್ಥಳಾಂತರಿಸಿದ ಗಿಡಗಳನ್ನು ಬಿ.ಪಿ.ಸಿಎಲ್‌ನ ಮೂಲಕವಾಗಿ ಅರಣ್ಯ ಇಲಾಖೆಯ ಮುತುವರ್ಜಿಯಡಿ ಪೋಷಿಸಲಾಗುತ್ತಿದೆ.

18 ಗಿಡಕ್ಕೆ 2.78 ಲಕ್ಷ ರೂ.
ಪೆಟ್ರೋಲ್‌ ಪಂಪ್‌ ನಿರ್ಮಾಣ ಪೂರ್ವದಲ್ಲಿ ತೆರವುಗೊಳಿಸಿರುವ 18 ಗಿಡಗಳಿಗೆ ಇಲಾಖೆ ಸೂಚಿಸಿದಂತೆ ಜಿಎಸ್‌ಟಿ ಮೊತ್ತವೂ ಸೇರಿ 2.78 ಲಕ್ಷ ರೂ. ಹಣವನ್ನು ಇಲಾಖೆಯ ಖಾತೆಗೆ ಜಮಾವಣೆ ಮಾಡಲಾಗಿದೆ. ಉಳಿದಂತೆ ನೆಟ್ಟ ಗಿಡಗಳು ಜೀವಗೊಳ್ಳುವವರೆಗೂ ಪ್ರತೀ ದಿನ ನೀರುಣಿಸುವ ಮತ್ತು ಅದರ ಆರೈಕೆ ಮಾಡುವ ಜನವಾಬ್ದಾರಿಯನ್ನೂ ಪೆಟ್ರೋಲ್‌ ಕಂಪೆನಿಯ ಸುಪರ್ದಿಗೆ ನೀಡಲಾಗಿದೆ.

ಇಲಾಖೆಯ ನಿರ್ದೇಶನದಂತೆ ಗಿಡಗಳ ಪೋಷಣೆಗೆ ಕ್ರಮ
ಕೊಪ್ಪಲಂಗಡಿಯಲ್ಲಿ ಪೆಟ್ರೋಲ್‌ ಬಂಕ್‌ ನಿರ್ಮಾಣಕ್ಕಾಗಿ ತೆರವುಗೊಳಿಸಿರುವ ಮರಗಳ ಪೈಕಿ 11 ಮರಗಳಿಗೆ ಕಳೆದ 15 ದಿನಗಳಿಂದ ನಿರಂತರವಾಗಿ ಟ್ಯಾಂಕರ್‌ ಮೂಲಕವಾಗಿ ನೀರು ತಂದು ಪೂರೈಸಲಾಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ದೇಶನದಂತೆ, ಬಿಪಿಸಿಎಲ್‌ ಕಂಪೆನಿಯೇ ಈ ಗಿಡಗಳನ್ನು ಪೋಷಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಪ್ರತೀ ದಿನ ಅರಣ್ಯ ರಕ್ಷಕರು ಆಗಮಿಸಿ, ವಿವಿಧ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಕೆಲವು ಗಿಡಗಳು ಈಗಾಗಲೇ ಚಿಗುರೊಡೆದಿದ್ದು, ಉಳಿದ ಗಿಡಗಳೂ ಚಿಗುರೊಡೆಯುವ ನಿರೀಕ್ಷೆಯಿದೆ.
-ರೋಷನ್‌ ಕುಮಾರ್‌,
ಪೆಟ್ರೋಲ್‌ ಬಂಕ್‌ ನಿರ್ಮಾಣ ಕಾಮಗಾರಿ ಮೇಲುಸ್ತುವಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next