Advertisement

ಯುರೋಪ್‌, ಅಮೆರಿಕ, ಕೊಲ್ಲಿ ರಾಷ್ಟ್ರಗಳಿಂದ ಬೆಂಗಳೂರಿಗೆ ಹೆಚ್ಚಬೇಕು ವಿಮಾನ ಸೌಲಭ್ಯ

03:45 PM Feb 20, 2021 | Team Udayavani |

ಕೋವಿಡ್‌ ಕಾರಣದಿಂದ ಲಾಕ್‌ಡೌನ್‌ ಆದಾಗ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾದವರು ಯುರೋಪ್‌, ಅಮೆರಿಕ, ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯರು. ಅದರಲ್ಲೂ ಕನ್ನಡಿಗರು. ಕಾರಣ ಈ ಭಾಗಗಳಿಂದ ತವರಿಗೆ ಮರಳಲು ನೇರ ವಿಮಾನ ಸೌಲಭ್ಯವಿಲ್ಲದೆ ಅನುಭವಿಸಿದ ಸಮಸ್ಯೆಗಳು ಹಲವಾರು. ವಿಮಾನ ಸಂಚಾರ ಇತ್ತೀಚೆಗೆ ಆರಂಭಗೊಂಡಿದ್ದರೂ ಪಾವತಿಸಬೇಕಾದ ದುಬಾರಿ ದರ ಈಗಾಗಲೇ ಸಂಕಷ್ಟದಲ್ಲಿರುವವರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ಈ ಭಾಗಗಳಿಂದ ಬೆಂಗಳೂರಿಗೆ ನೇರ ವಿಮಾನ ಸೌಲಭ್ಯಗಳು ಹೆಚ್ಚಾಗಬೇಕಿದೆ.

Advertisement

ಜಗತ್ತಿನಾದ್ಯಂತ ಕೋವಿಡ್‌ ಕಾರಣದಿಂದ 2020ರ ಮಾರ್ಚ್‌ 25ರಂದು ಭಾರತದಲ್ಲಿ ಲಾಕ್‌ಡೌನ್‌ ಘೋಷಣೆಯಾದಾಗ ವಿದೇಶಗಳಲ್ಲಿ ನೆಲೆಸಿರುವ ಎಲ್ಲರೂ ತಮ್ಮೂರಿಗೆ ಹಿಂತಿರುಗಬೇಕು ಎಂದು ಗೋಳಾಡಿದ್ದರು. ಆದರೆ ಸೀಮಿತ ಸಂಖ್ಯೆಯಲ್ಲಿದ್ದ ವಿಮಾನಗಳಲ್ಲಿ  ಎಲ್ಲರನ್ನೂ ಕರೆದುಕೊಂಡು ಬರುವುದು ಅಸಾಧ್ಯದ ಮಾತಾಗಿತ್ತು. ಜತೆಗೆ ಇದ್ದ ಕೆಲವೊಂದು ಕಠಿನ ನಿಯಮಾವಳಿಗಳು ತವರು ಸೇರಲು ಹವಣಿಸುತ್ತಿದ್ದವರಿಗೆ ಕಾರಾಗೃಹ ಬಂಧನದಲ್ಲಿದ್ದಂತೆ ಮಾಡಿತ್ತು. ಆಗ ಕೇಳಿದ ಬಹುದೊಡ್ಡ ಬೇಡಿಕೆಗಳ ಪಟ್ಟಿಯಲ್ಲಿ ಆ್ಯಮಸ್ಟರ್‌ ಡ್ಯಾಮ್‌ ಮತ್ತು ಇನ್ನು ಉಳಿದ ದೇಶಗಳಿಂದ ಬೆಂಗಳೂರಿಗೆ ನೇರ ವಿಮಾನ ಸೌಲಭ್ಯ ಕಲ್ಪಿಸಿಕೊಡಿ ಮತ್ತು ಎರಡೆರಡು ಬಾರಿ ಕ್ವಾರಂಟೈನ್‌ ತಪ್ಪಿಸಲು ಅನುವು ಮಾಡಿಕೊಡಬೇಕು ಎನ್ನುವುದು ಮಹತ್ವದ್ದಾಗಿತ್ತು.

ಇದಕ್ಕಾಗಿ ನೆದರ್‌ಲ್ಯಾಂಡ್‌ನ‌ ಅಶೋಕ್‌ ಹಟ್ಟಿ ಅವರು ಬೆಲ್ಜಿಯಂ, ಜರ್ಮನಿ, ಅಮೆರಿಕ, ಫಿನ್‌ಲಾÂಂಡ್‌, ದುಬಾೖ, ಸ್ವಿಜರ್‌ಲ್ಯಾಂಡ್‌, ಇಟಲಿಯ ಕನ್ನಡಿಗರನ್ನು ಒಗ್ಗೂಡಿಸಿ ಈ ಕುರಿತು ಕರ್ನಾಟಕ ಸರಕಾರದ ಗಮನ ಸೆಳೆಯಲು ಮುಖ್ಯಮಂತ್ರಿಯವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ ಆ ಸಂದರ್ಭದಲ್ಲಿ ಅದು ಸಾಧ್ಯವಾಗಲಿಲ್ಲ. ಕೊನೆಗೆ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮುಂದೆ ತಮ್ಮ ಬೇಡಿಕೆಗಳನ್ನಿರಿಸಿದರು. ಇವರ ಪ್ರಯತ್ನದ ಫ‌ಲವಾಗಿ ಸಿದ್ದರಾಮಯ್ಯ ಅವರೊಂದಿಗೆ ವೀಡಿಯೊ ಸಂವಾದ ನಡೆಯಿತು. ಇದರ ಭಾಗವಾಗಿ ಸಿದ್ದರಾಮಯ್ಯ ಅವರು ಕರ್ನಾಟಕ ಹಾಗೂ ಕೇಂದ್ರ ಸರಕಾರಕ್ಕೆ  ಅಮೆರಿಕ, ಯುರೋಪ್‌ ಮತ್ತು ಕೊಲ್ಲಿ ರಾಷ್ಟ್ರಗಳ ಕನ್ನಡಿಗರ ಬೇಡಿಕೆಯನ್ನು ಪತ್ರದ ಮೂಲಕ ತಲುಪಿಸುವ ಪ್ರಯತ್ನ ಮಾಡಿದರು. ಈ ಪ್ರಯತ್ನದ ಫ‌ಲವಾಗಿ ಆ್ಯಮ್‌ಸ್ಟರ್‌ ಡ್ಯಾಮ್‌ ಹಾಗೂ ವಿವಿಧ ದೇಶಗಳಿಂದ ಬೆಂಗಳೂರಿಗೆ ನೇರ ವಿಮಾನ ಸೌಲಭ್ಯ ದೊರೆತು ಎರಡೆರಡು ಬಾರಿ ಕ್ವಾರಂಟೈನ್‌ ಆಗುವುದು ತಪ್ಪಿತು. ಲಾಕ್‌ಡೌನ್‌ ಸಮಯದಲ್ಲಿ ವಿಮಾನ ಸಂಚಾರ ಸಂಪೂರ್ಣ ರದ್ದಾಗಿತ್ತು. ಬರುವುದಾದರೆ ಹೊಸದಿಲ್ಲಿ, ಮುಂಬಯಿ ಸುತ್ತಿ ಬರುವುದು ಅನಿವಾರ್ಯವಾಗಿತ್ತು. ಇದರಿಂದ ಹೊಸದಿಲ್ಲಿಯಲ್ಲಿ 15 ದಿನ ಕ್ವಾರಂಟೈನ್‌ಗೆ ಒಳಗಾಗಬೇಕಿತ್ತು. ಬಳಿಕ ಅಲ್ಲಿಂದ ರಾಜ್ಯಕ್ಕೆ ಬಂದರೆ ಮತ್ತೆ ಅಲ್ಲಿ ಕ್ವಾರಂಟೈನ್‌ಗೆ ಒಳಗಾಗಬೇಕಿತ್ತು.

ಸಮಸ್ಯೆಗಳು ಹಲವು :

ಜಗತ್ತಿನ ವಿವಿಧ ಭಾಗಗಳಿಂದ ಕರ್ನಾಟಕಕ್ಕೆ ನೇರ ವಿಮಾನ ಸಂಪರ್ಕವಿಲ್ಲ. ಹೀಗಾಗಿ ಹೊಸದಿಲ್ಲಿ ಅಥವಾ ಮುಂಬಯಿಗೆ ಬಂದು ಕರ್ನಾಟಕಕ್ಕೆ ಬರುವುದು ಅನಿವಾರ್ಯ. ಇದರಿಂದ ಕೋವಿಡ್‌ ಸಂದರ್ಭದಲ್ಲಿ ಹೆಚ್ಚು ಸಂಕಷ್ಟಕ್ಕೆ ಒಳಗಾದವರು ವೀಸಾ ಅವಧಿ ಮುಕ್ತಾಯ ಹಂತದಲ್ಲಿದ್ದ ವಿದ್ಯಾರ್ಥಿಗಳು, ವೃದ್ಧರು.

Advertisement

ಆ್ಯಮ್‌ಸ್ಟರ್‌ ಡ್ಯಾಮ್‌ನಿಂದ ಬೆಂಗಳೂರಿಗೆ ನೇರ ವಿಮಾನ ಸೌಲಭ್ಯ ಕಲ್ಪಿಸಿದರೆ ಸುಮಾರು 8- 10 ಗಂಟೆಯ ಅವಧಿಯಲ್ಲಿ ಬೆಂಗಳೂರನ್ನು ತಲುಪಬಹುದು. ಇಲ್ಲವಾದರೆ ಸುಮಾರು 12 ಅಥವಾ ಅದಕ್ಕಿಂತಲೂ ಹೆಚ್ಚಿನ ಅವಧಿ ಬೇಕಾಗುತ್ತದೆ. ಅದರಲ್ಲೂ ಬೋರ್ಡಿಂಗ್‌, ಚೆಕ್ಕಿಂಗ್‌ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಲಾಕ್‌ಡೌನ್‌ ಅವಧಿಯಲ್ಲಿ ಬಹುತೇಕ ವಿಮಾನಗಳನ್ನು ಸ್ಥಗಿತಗೊಂಡಿದ್ದು,  ತುರ್ತು ಪರಿಸ್ಥಿತಿಯಲ್ಲೂ ಸಂಚಾರ ಅಸಾಧ್ಯವಾಗಿತ್ತು. ಇದರಲ್ಲಿ ಸಂಕಷ್ಟಕ್ಕೊಳಗಾದ ಕನ್ನಡಿಗರಲ್ಲಿ ವಿಜ್ಞಾನಿಗಳು, ತಂತ್ರಜ್ಞಾನಿಗಳು, ವೈದ್ಯರೂ ಬಹುತೇಕ ಸಂಖ್ಯೆಯಲ್ಲಿದರು. ಹೀಗಾಗಿ ವಿಮಾನ ಸಂಚಾರ ಸೌಲಭ್ಯ ಹೆಚ್ಚಬೇಕು ಎನ್ನುವ ಬೇಡಿಕೆಗೆ ಮತ್ತಷ್ಟು ಬಲ ಬಂದಂತಾಗಿತ್ತು.

ಸದ್ಯದ ಸ್ಥಿತಿಗತಿ :

ಕೊರೊನಾ ನೆದರ್‌ಲ್ಯಾಂಡ್‌ನ‌ಲ್ಲಿ ಇನ್ನೂ ನಿಯಂತ್ರಣಕ್ಕೆ ಬಾರದೇ ಇರುವುದರಿಂದ ಲಾಕ್‌ಡೌನ್‌ ಮಾರ್ಚ್‌ 3ರವರೆಗೆ ಮುಂದುವರಿಸಲಾಗಿದೆ. ಲಾಕ್‌ಡೌನ್‌ ಘೋಷಣೆಯಾದ ಬಳಿಕ ಜೂನ್‌ ತಿಂಗಳಾಂತ್ಯದಿಂದ ಪ್ರತಿ ತಿಂಗಳು ಆ್ಯಮ್‌ಸ್ಟರ್‌ಡ್ಯಾಮ್‌ ಮತ್ತು ಇನ್ನಿತರ ಕಡೆಗಳಿಂದ ಬೆಂಗಳೂರಿಗೆ ನೇರ ವಿಮಾನ ಸಂಚಾರವಾಗುತ್ತಿದೆ. ಆ್ಯಮ್‌ಸ್ಟರ್‌ ಡ್ಯಾಮ್‌ನಿಂದ ಪ್ರಸ್ತುತ ಮೂರು ದಿನಗಳಿಗೊಮ್ಮೆ ವಿಮಾನ ಸೌಲಭ್ಯವಿದೆ. ಆದರೆ ಪ್ರಯಾಣ ದರ ಮಾತ್ರ ವಿಪರೀತ ಹೆಚ್ಚಾಗಿದೆ. ಹಿಂದೆ ಒಮ್ಮೆ ಪ್ರಯಾಣಕ್ಕೆ 30 ಸಾವಿರ ರೂ. ವ್ಯಯಿಸಬೇಕಿತ್ತು. ಆದರೆ ಈಗ 1- 2 ಲಕ್ಷ ರೂ. ಬೇಕಾಗುತ್ತದೆ. ಆದರೆ ಹೆಚ್ಚಿನ ವಿಮಾನ ಸಂಚಾರ ಆರಂಭವಾದರೆ ಪ್ರಯಾಣ ದರದ ಹೊರೆ ಕಡಿಮೆಯಾಗಬಹುದು ಎನ್ನುವ ನಿರೀಕ್ಷೆಯಿದೆ.

ಆ್ಯಮ್‌ಸ್ಟರ್‌ ಡ್ಯಾಮ್‌ ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಾಗಿ ಮುಂಜಾಗ್ರತ ಕೋವಿಡ್‌ ನಿಯಮಾವಳಿಗಳನ್ನು ಪಾಲಿಸಲಾಗುತ್ತಿದೆ. ಇಲ್ಲಿ ಸ್ಯಾನಿಟೈಸರ್‌, ಮಾಸ್ಕ್ ಬಳಕೆ ಕಡ್ಡಾಯವಾಗಿದ್ದು, ಪ್ರಯಾಣಿಕರಿಗೆ ಫೇಸ್‌ಶೀಲ್ಡ್‌ ಕೊಡಲಾಗುತ್ತದೆ. ಹಾಲೆಂಡ್‌ನ‌ ಕೆಎಲ್‌ಎಂ ವಿಮಾನದಲ್ಲಿ ಪ್ರಯಾಣಿಸಬೇಕಾದರೆ 24 ಗಂಟೆಗಳ ಮುಂಚೆ ಕೊರೊನಾ ಪರೀಕ್ಷೆ ಮಾಡಿರಲೇಬೇಕು. ರೋಗಲಕ್ಷಣಗಳಿದ್ದವರಿಗೆ ಇಲ್ಲಿ ಉಚಿತ ಪರೀಕ್ಷೆ ನಡೆಯುತ್ತದೆ. ಆದರೆ ಪ್ರವಾಸದ ಉದ್ದೇಶದಿಂದ ಪರೀಕ್ಷೆ ಮಾಡಿಸಲು ಹೋದರೆ ಸುಮಾರು 8,500 ರೂ. ಪಾವತಿಸಬೇಕಾಗುತ್ತದೆ.

ಹಾಲೆಂಡ್‌ನ‌ಲ್ಲಿ ಕೋವಿಡ್‌ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಕಡ್ಡಾಯ. ಆದರೂ ಕೆಲವೊಮ್ಮೆ ಅನಿವಾರ್ಯವಾಗಿ ವಿಮಾನಯಾನ ಮಾಡಲೇಬೇಕಾಗುತ್ತದೆ. ಇದು ಶೇ. 100ರಷ್ಟು ಸುರಕ್ಷಿತವಲ್ಲ. ಈ ಸಂದರ್ಭದಲ್ಲಿ ನಿಮ್ಮ ಆರೋಗ್ಯದ ಕಾಳಜಿ ನೀವೇ ಮಾಡಿ ಎಂದು ಸರಕಾರ ಸೂಚಿಸುತ್ತದೆ. ಅಲ್ಲದೇ ಕೋವಿಡ್‌ ನೆಗೆಟಿವ್‌ ರಿಪೋರ್ಟ್‌ ಇದ್ದವರಿಗೆ ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗುತ್ತಿದೆ.

ಆ್ಯಮ್‌ಸ್ಟರ್‌ ಡ್ಯಾಮ್‌ನಿಂದ ಬೆಂಗಳೂರಿಗೆ ಹೆಚ್ಚುವರಿ ನೇರ ವಿಮಾನ ಸೌಲಭ್ಯ ಕಲ್ಪಿಸುವಂತೆ ಕರ್ನಾಟಕ ಹಾಗೂ ಕೇಂದ್ರ ಸರಕಾರಕ್ಕೆ ಸಿದ್ದರಾಮಯ್ಯ ಅವರ ಮೂಲಕ ಮನವಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಭರವಸೆಯೂ ಸಿಕ್ಕಿದೆ. ಅಶೋಕ್ಹಟ್ಟಿ, ಹಾಲೆಂಡ್

ಕೋವಿಡ್ ಸಂದರ್ಭದಲ್ಲಿ  ಸಾಕಷ್ಟು ಸಮಸ್ಯೆಗಳು ಎದುರಾಗಿದ್ದು, ಅದರಲ್ಲಿ ಮುಖ್ಯವಾದದ್ದು ಬೆಂಗಳೂರಿಗೆ ನೇರ ವಿಮಾನ ಸೌಲಭ್ಯ ಮತ್ತು ಎರಡೆರಡು ಬಾರಿ ಕ್ವಾರಂಟೈನ್‌ ತಪ್ಪಿಸುವುದಾಗಿತ್ತು. ಪ್ರಸ್ತುತ ಇದು ತಕ್ಕ ಮಟ್ಟಿಗೆ ನಿವಾರಣೆಯಾಗಿದೆ. ಆದರೆ ವಿಮಾನ ಸೌಲಭ್ಯ ಹೆಚ್ಚಾದರೆ ಮತ್ತಷ್ಟು ಅನುಕೂಲವಾಗಲಿದೆ.  ಕಿಶೋರ್‌, ಜರ್ಮನಿ

ಲಾಕ್‌ಡೌನ್‌ ಆದಾಗ ಹೆಚ್ಚಾಗಿ ಸಂಕಷ್ಟಕ್ಕೆ ಒಳಗಾದವರು ಅನಿವಾಸಿ ಕನ್ನಡಿಗರು. ಈ ಸಂದರ್ಭದಲ್ಲಿ  ಕರ್ನಾಟಕ ಸರಕಾರದಿಂದ ತತ್‌ಕ್ಷಣ ಸ್ಪಂದನೆ ದೊರೆಯಿತು. ಇದಕ್ಕೆ ಕಾರಣರಾದ ಮಾಜಿ ಮುಖ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಎನ್‌ಆರ್‌ಐಗಳೊಂದಿಗೆ ಸಂವಾದ ನಡೆಸಿ ನಮ್ಮ ಸಮಸ್ಯೆಗಳನ್ನು ಆಲಿಸಿ ಅದನ್ನು ಬಗೆ ಹರಿಸುವ ನಿಟ್ಟಿನಲ್ಲಿ ಶ್ರಮಿಸಿದರು. ವಿಠಲ್‌, ದುಬಾೖ

ಲಾಕ್‌ಡೌನ್‌ ವೇಳೆ ಸಾಕಷ್ಟು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ಸಂವಾದಕ್ಕೆ ಸಿಗದೇ ಇರುತ್ತಿದ್ದರೆ ನಮ್ಮ ಧ್ವನಿಯನ್ನು ಮುಖ್ಯಮಂತ್ರಿಯವರಿಗೆ ತಲುಪಿಸಲು ಸಾಧ್ಯವಾಗುತ್ತಿರಲಿಲ್ಲ.  – ಡಾ| ಮಹದೇಶ ಪ್ರಸಾದ್‌, ಬೆಲ್ಜಿಯಂ

 

ಅಶೋಕ್ಹಟ್ಟಿ, ಹಾಲೆಂಡ್

 

 

Advertisement

Udayavani is now on Telegram. Click here to join our channel and stay updated with the latest news.

Next