Advertisement

ಕೊರೊನಾ ವೈರಸ್‌: ಯುರೋ, ಕೋಪಾ ಅಮೆರಿಕ ಮುಂದೂಡಿಕೆ

09:38 AM Mar 19, 2020 | sudhir |

ಲಾಸನ್ನೆ: ಕೊರೊನಾ ವೈರಸ್‌ನಿಂದಾಗಿ ವಿಶ್ವಾದ್ಯಂತ ಹಲವು ಪ್ರಮುಖ ಕ್ರೀಡಾಕೂಟಗಳು ಮುಂದೂಡಲ್ಪಟ್ಟಿವೆ. ಇವುಗಳಲ್ಲಿ ಪ್ರತಿಷ್ಠಿತ ಯುರೋ 2020 ಮತ್ತು ಕೋಪಾ ಅಮೆರಿಕ ಕೂಟ ಸೇರಿಕೊಂಡಿದೆ. ಭಾರತದಲ್ಲಿ ನಡೆಯಬೇಕಿರುವ ಐಪಿಎಲ್‌ ಕೂಟ ನಡೆಯುವುದು ಅನುಮಾನವೆಂದು ಹೇಳಲಾಗಿದೆ.

Advertisement

ಜೂನ್‌ ಮತ್ತು ಜುಲೈ ತಿಂಗಳಲ್ಲಿ ನಡೆಯಲಿರುವ ಪ್ರತಿಷ್ಠಿತ ಯುರೋ 2020 ಕೂಟವನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎಂದು ಯುರೋಪಿಯನ್‌ ಫ‌ುಟ್‌ಬಾಲ್‌ನ ಆಡಳಿತ ಮಂಡಳಿ ಯುಇಎಫ್ಎ ಪ್ರಕಟಿಸಿದೆ. ಮಂಗಳವಾರ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಕೋವಿಡ್‌-19 ಸೋಂಕಿನಿಂದಾಗಿ ವಿಶ್ವದ ಹಲವು ದೇಶಗಳು ಲಾಕ್‌ಡೌನ್‌ ಆಗಿವೆ ಮಾತ್ರವಲ್ಲದೇ ಗಡಿಗಳನ್ನು ಮುಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಕೂಟವನ್ನು ಮುಂದೂಡಲು ನಿರ್ಧರಿಸಲಾಯಿತು.

ಯುರೋಪ್‌ನಲ್ಲಿ ಈ ವೈರಸ್‌ ತೀವ್ರಗತಿಯಲ್ಲಿ ಹರಡುತ್ತಿದೆ. ಹೀಗಾಗಿ ಫ್ರಾನ್ಸ್‌, ಇಟಲಿ ಮತ್ತು ಸ್ಪೇನ್‌ ಕಠಿನ ಕ್ರಮ ಗಳನ್ನು ಅನುಸರಿಸಲು ಮುಂದಾಗಿವೆ. ಅನಗತ್ಯ ಪ್ರವಾಸಕ್ಕೆ ಸಂಪೂರ್ಣ ತಡೆ ನೀಡಲಾಗಿದೆ. ಯುರೋ 2020ರ ಆರಂಭಿಕ ಪಂದ್ಯ ನಡೆಯಬೇಕಾಗಿದ್ದ ಇಟಲಿಯಲ್ಲಿ ಈಗಾಗಲೇ 2,100 ಮಂದಿ ಮೃತಪಟ್ಟಿದ್ದಾರೆ. ಯುರೋ ಮುಂದೂಡುವಂತೆ ಇಟಾಲಿಯನ್‌ ಫ‌ುಟ್‌ಬಾಲ್‌ ಫೆಡರೇಶನ್‌ನ ಮುಖ್ಯಸ್ಥ ಗ್ಯಾಬ್ರಿಯೆಲೆ ಗ್ರ್ಯಾವಿನಾ ಕರೆ ನೀಡಿದ್ದರು.

ಯುರೋ 2020 11 ನಗರಗಳಲ್ಲಿ ನಡೆ ಯಲಿದ್ದು ಸೆಮಿಫೈನಲ್ಸ್‌ ಮತ್ತು ಫೈನಲ್‌ ಲಂಡನ್‌ನಲ್ಲಿ ನಡೆಯಬೇಕಾಗಿತ್ತು.

ಕೋಪಾ ಅಮೆರಿಕ ಮುಂದೂಡಿಕೆ
ಸಾವೊ ಪಾಲೊ: ಕೋಪಾ ಅಮೆರಿಕ ಕೂಟವನ್ನು ಕೂಡ ಮುಂದಿನ ವರ್ಷದವರೆಗೆ ಮುಂದೂಡಲಾಗಿದೆ. ಆಟಗಾರರ ಸುರಕ್ಷತೆ ಮತ್ತು ವಿಶ್ವದಾದ್ಯಂತ ಕೊರೊನಾ ವೈರಸ್‌ ಹರಡುತ್ತಿರುವ ಕಾರಣ ಕೂಟವನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ದಕ್ಷಿಣ ಅಮೆರಿಕನ್‌ ಫ‌ುಟ್‌ಬಾಲ್‌ ಮಂಡಳಿ (ಸಿಒಎನ್‌ಎಂಇಬಿಒಎಲ್‌) ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next