Advertisement

ಅಂತರ್ಜಲ ವೃದ್ಧಿಗಾಗಿ ನೀಲಗಿರಿ ನಿರ್ಮೂಲನೆ ಅಗತ್ಯ

09:46 PM Feb 06, 2020 | Lakshmi GovindaRaj |

ಗುಡಿಬಂಡೆ: ಸತತ ಬರಗಾಲಕ್ಕೆ ತುತ್ತಾಗುತ್ತಿರುವ ಈ ಭಾಗದಲ್ಲಿ ಅಂತರ್ಜಲ ಮಟ್ಟ ಈಗಾಗಲೇ ಕುಸಿದಿದ್ದು, ಅಂತರ್ಜಲ ಮಟ್ಟ ಹೆಚ್ಚಿಸಲು ನೀಲಗಿರಿ ನಿರ್ಮೂಲನೆ ಅತ್ಯಗತ್ಯವಾಗಿದೆ ಎಂದು ತಹಶೀಲ್ದಾರ್‌ ಹನುಮಂತರಾಯಪ್ಪ ತಿಳಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ನೀಲಗಿರಿ ಮರಗಳ ನಿರ್ಮೂಲನೆ ಕುರಿತಂತೆ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

Advertisement

ತೆರವಿಗೆ ಆದೇಶ: ತಾಲೂಕಿನಾದ್ಯಂತ ಸರ್ಕಾರಿ ಸ್ಥಳಗಳು ಸೇರಿದಂತೆ ಖಾಸಗಿ ಜಮೀನುಗಳಲ್ಲಿ ಬೆಳೆದಿರುವಂತಹ ನೀಲಗಿರಿ ಮರಗಳನ್ನು ತೆರವುಗೊಳಿಸುವಂತೆ ಸರ್ಕಾರ ಹಾಗೂ ಜಿಲ್ಲಾಡಳಿತದ ವತಿಯಿಂದ ಆದೇಶ ಬಂದಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ಸರ್ಕಾರಿ ಕಚೇರಿಗಳು, ಗ್ರಾಮ ಪಂಚಾಯತಿ, ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಇರುವಂತಹ ನೀಲಗಿರಿ ಮರಗಳ ಕುರಿತು ಮಾಹಿತಿ ಕಲೆಹಾಕಿ ನಂತರ ಹಂತ ಹಂತವಾಗಿ ಎಲ್ಲಾ ನೀಲಗಿರಿ ಮರಗಳನ್ನು ತೆರವುಗೊಳಿಸಬೇಕಿದೆ ಎಂದರು.

ತೆರವುಗೊಳಿಸದಿದ್ದರೆ ಕ್ರಮ: ಖಾಸಗಿ ಸ್ಥಳಗಳಲ್ಲಿರುವ ಮರಗಳನ್ನು ತೆರವುಗೊಳಿಸಲು ಮಾಲೀಕರಿಗೆ ನೋಟಿಸ್‌ ನೀಡಲಾಗುತ್ತದೆ. ಒಂದು ವೇಳೆ ಮರಗಳನ್ನು ತೆರವುಗೊಳಿಸಲು ಮುಂದಾಗದಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ತೆರವುಗೊಳಿಸಿದ ಮರಗಳನ್ನು ಸಾರ್ವಜನಿಕ ಹರಾಜು ಮಾಡಲಾಗುತ್ತದೆ ಎಂದರು.

ವಾರದೊಳಗೆ ತೆರವು ಮಾಡಿ: ತಾಲೂಕಿನಾದ್ಯಂತ ಸರ್ಕಾರಿ ಕಚೇರಿ ಹಾಗೂ ಖಾಸಗಿ ಜಮೀನುಗಳಲ್ಲಿರುವಂತಹ ನೀಲಗಿರಿ ಮರಗಳನ್ನು ಒಂದು ವಾರದೊಳಗೆ ತೆರವು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ರೈತರಲ್ಲಿ ಅರಿವು ಮೂಡಿಸಿ: ತಮ್ಮ ವ್ಯಾಪ್ತಿಯಲ್ಲಿ ಅಧಿಕಾರಿಗಳು, ರೈತರು ಸ್ವಯಂ ಪ್ರೇರಣೆಯಿಂದ ನೀಲಗಿರಿ ಮರಗಳನ್ನು ತೆರವುಗೊಳಿಸಲು ಅರಿವು ಮೂಡಿಸಬೇಕು. ಖಾಸಗಿ ಹಾಗೂ ಅರಣ್ಯ, ಗೋಮಾಳ ಪ್ರದೇಶದಲ್ಲಿನ ನೀಲಗಿರಿ ಮರಗಳನ್ನು ಬುಡ ಸಮೇತ ತೆರವುಗೊಳಿಸಿದ ಜಾಗದಲ್ಲಿ ಉಪಯುಕ್ತ ಸ್ಥಳೀಯ ಜಾತಿಯ ಸಸಿಗಳನ್ನು ನೆಡಲು ಸಾಮಾಜಿಕ ಹಾಗೂ ಅರಣ್ಯ ಇಲಾಖೆ ಮುಂದಾಗಬೇಕು ಎಂದು ಸಲಹೆ ನೀಡಿದರು.

Advertisement

ಈಗಾಗಲೇ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 245 ಹೆಕ್ಟೇರ್‌ ಪ್ರದೇಶ, ಕಂದಾಯ ಇಲಾಖೆ ಗೋಮಾಳದ 43 ಎಕರೆ 22 ಗುಂಟೆ, 8 ಗ್ರಾಪಂ ವ್ಯಾಪ್ತಿಯಲ್ಲಿ ನೂರಾರು ಎಕರೆ ಗ್ರಾಮ ಅರಣ್ಯ ಪ್ರದೇಶದಲ್ಲಿನ ನೀಲಗಿರಿ ಮರಗಳನ್ನು ಗುರುತಿಸಲಾಗಿದ್ದು, ಈಗಾಗಲೇ ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಲಕ್ಕೇನಹಳ್ಳಿ 5 ಎಕರೆ ಗೋಮಾಳದಲ್ಲಿನ ನೀಲಗಿರಿ ಮರಗಳನ್ನು ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ತಾಲೂಕಿನ ಜನರ ಕುಡಿಯುವ ನೀರಿಗಾಗಿ ಗ್ರಾಪಂ ವ್ಯಾಪ್ತಿಯಲ್ಲಿ 158, ಪಪಂ ವ್ಯಾಪ್ತಿಯಲ್ಲಿ 16 ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಬರದಿಂದ ಕೊಳವೆ ಬಾವಿಗಳಲ್ಲಿ ನೀರಿನ ಶೇಖರಣೆ ಕುಸಿಯುವ ಸಂಭವವಿದ್ದು, ಅಧಿಕಾರಿಗಳು ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.

ಸಾಮಾಜಿಕ ಅರಣ್ಯ ಇಲಾಖೆಯ ಆರ್‌ಎಫ್‌ಒ ದಿವ್ಯ, ಅರಣ್ಯ ಇಲಾಖೆ ಅಧಿಕಾರಿ ಜಾವೀದ್‌, ತಾಪಂ ಎಡಿಎ ರವಿಕುಮಾರ್‌, ಪ.ಪಂ ಮುಖ್ಯಾಧಿಕಾರಿ ಸತ್ಯನಾರಾಯಣ, ನೀರು ಮತ್ತು ನೈಮಲ್ಯ ಇಲಾಖೆ ಎಇಇ ನವೀನ ಕುಮಾರ್‌, ಕಂದಾಯ ಇಲಾಖೆಯ ಶಿವಕುಮಾರ್‌, ಭಾರ್ಗವಿ, ಪ್ರಿಯಾ, ಉಲ್ಲೋಡು ಹಾಗೂ ವರ್ಲಕೊಂಡ ಪಿಡಿಒ ಅರ್ಚನ, ಹಂಪಸಂದ್ರ ಪಿಡಿಒ ಶ್ರೀನಿವಾಸ್‌, ದಪ್ಪರ್ತಿ ಪಿಡಿಒ ಗೋಪಾಲ್‌, ಸೋಮೇನಹಳ್ಳಿ ಹಾಗೂ ಬೀಚಗಾನಹಳ್ಳಿ ಪಿಡಿಒ ಶ್ರೀನಿವಾಸ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next